ಸಮುದ್ರದ ಮದ್ಯೆ ಇರುವ ಈ ದೇವಸ್ಥಾನಕ್ಕೆ ಭೇಟಿಕೊಟ್ಟರೆ ಹಿಂದುವಾಗಿ ಹುಟ್ಟಿದ್ದಕ್ಕೆ ಸಾರ್ಥಕ!!!!

ಸಮದ್ರದ ಮದ್ಯೆ ಇರುವ ಈ ದೇವಸ್ಥಾನಕ್ಕೆ ಭೇಟಿಕೊಟ್ಟರೆ ಹಿಂದುವಾಗಿ ಹುಟ್ಟಿದ್ದಕ್ಕೆ ಸಾರ್ಥಕ!!!!
ಅವಕಾಶ ಸಿಕ್ಕರೆ ಈ ಪವಿತ್ರ ಸ್ಥಳವನ್ನು ಒಮ್ಮೆ ಕಣ್ಣುತುಂಬಾ ನೋಡಿ ಮನಸ್ಸು ತುಂಬಿಕೊಳ್ಳೋಣ ಎನ್ನುತ್ತಾ….

0

ಹೌದು, ಈವರೆಗೆ ಅದೆಷ್ಟೋ ಪವಾಡದ, ಪವಿತ್ರವಾದ, ವಿಶೇಷವಾದ, ಹಾಗೂ ಅದ್ಭುತ ಸ್ಥಳಗಳಲ್ಲಿರುವ ದೇವಾಲಯಗಳನ್ನು ನಾವು ನೋಡಿರಬಹುದು, ಅದರ ಬಗ್ಗೆ ಕೇಳಿಯೂ ಇರಬಹುದು. ಪ್ರತಿಯೊಂದು ಶ್ರದ್ದಾಕೇಂದ್ರಕ್ಕೂ ಅದರದ್ದೇ ಅದ ರೋಚಕ ಇತಿಹಾಸವಿರುತ್ತದೆ. ಅದು ವೈಜ್ಞಾನಿಕವೂ ಆಗಿರುತ್ತದೆ. ಹಿಂದುಗಳ ದೇವಸ್ಥಾನವೆಂದರೆ ಹಾಗೇನೇ.
ಆದರೆ ಇವತ್ತು ನಾನು ಹೇಳಬಯಸುವ ಈ ಅದ್ಬುತ ದೇವಸ್ಥಾನವನ್ನು ನೀವು ನೋಡಿಯೂ ಇರಲಿಕ್ಕಿಲ್ಲ ಬಹುಶಃ ಅದರ ಕುರಿತಾಗಿ ಕೇಳಿಯೂ ಇರಲಿಕ್ಕಿಲ್ಲ. ಇದೊಂದು ಅದ್ಭುತ ದೇವಸ್ಥಾನ, ಹಿಂದುಮಹಾಸಾಗರದ ಅಲೆಗಳ ನಡುವೆ ಕಂಗೊಳಿಸುವ  ಅವಿಸ್ಮರಣೀಯ ಕೇಂದ್ರ, ಸೂರ್ಯಾಸ್ತದ ಕೇಸರಿ ಬಣ್ಣದ ನಡುವೆ ಪ್ರತಿದಿನ ಪ್ರಜ್ವಲಿಸುವ ಆ ದೇವಾಲಯ ಇರುವುದು ನಮ್ಮ ದೇಶದಲ್ಲಿ  ಅಂತೂ ಅಲ್ಲವೇ ಅಲ್ಲ!!!! ಯಾವುದಿರಬಹುದು??


ಅದು ಮುಸ್ಲಿಂ ರಾಷ್ಟ್ರಎಂದು ಕರೆಸಿಕೊಳ್ಳುವ ಇಂಡೋನೇಷ್ಯಾದಲ್ಲಿರುವ ಜಗತ್ಪ್ರಸಿದ್ಧ ತನಹ್ ಲೋಟ್ ದೇವಾಸ್ಥಾನ.  ಇಂಡೋನೇಷ್ಯಾದ ಬೆರ್ಬನ್ ಎಂಬಲ್ಲಿನ ಕೆಡಿರಿ ಜಿಲ್ಲೆಯಲ್ಲಿರುವ ವಿಖ್ಯಾತ ಬಾಲಿ ದ್ವೀಪದಲ್ಲಿ ಈ ದೇವಸ್ಥಾನ ವಿರಾಜಮಾನವಾಗಿದೆ.


ಇಂಡೋನೇಷ್ಯಾದಲ್ಲಿ ಅತೀಹೆಚ್ಚು ಪ್ರವಾಸಿಗರು ಭೇಟಿಕೊಡುವ ಸ್ಥಳ ಅಂದರೆ ಅದು ಇದುವೇ. ಈ ಬಾಲಿ ದ್ವೀಪದಲ್ಲಿರುವ ತನಹಲೋಟ್ ದೇವಾಲಯ ಭೂಮಿಯಿಂದ ಸರಿಸುಮಾರು 290 ಮೀಟರ್ ದೂರ ಸಮುದ್ರದಲ್ಲಿರುವ ಏಕಾಶಿಲೇಯ ಮೇಲೆ ನಿಂತಿದೆ. ಪ್ರಪಂಚದಲ್ಲಿ ಸೂರ್ಯಾಸ್ತ ನೋಡವ ಪ್ರಸಿದ್ಧ ಸ್ಥಳಗಳಲ್ಲಿ ಇದೂ ಕೂಡಾ ಒಂದು.

ಈ ತನಹಲೋಟ್ ದೇವಾಲಯವನ್ನು ಬಾಲಿ ದೇವಸ್ಥಾನ ಎಂದೂ ಕರೆಯುತ್ತಾರೆ. “ತನಹ್” ಅಂದ್ರೆ ಭೂಮಿ “ಲೋಟ್” ಅಂದರೆ ಸಮುದ್ರ. ಸಮುದ್ರದ ಮದ್ಯೆ ಇರುವ ಭೂಮಿ ಎಂಬರ್ಥವನ್ನು ಕೊಡುತ್ತದೆ. 16ನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ.


ಇತಿಹಾಸದ ಪ್ರಕಾರ ಹಿಂದೂ  ರಾಜ ನಿರರ್ಥ್ ಎನ್ನುವವನು ಪ್ರಪಂಚ ಪರ್ಯಟನೆಯಲ್ಲಿ ತೊಡಗಿಡದ್ದಾಗ ಈ ದ್ವೀಪದ ಸೌಂದರ್ಯ ಕಂಡು ಅಲ್ಲಿ ವಿಶ್ರಾಂತಿ ಪಡೆಯಲು ಮುಂದಾದ. ವಿಶ್ರಾಂತಿಯ ಬಳಿಕ ರಾಜ ಹೊರಡಲು ಮುಂದಾದಾಗ ಮೀನುಗಾರರು ಒಂದು ರಾತ್ರಿ ಆಲ್ಲೇ ಉಳಿಯುವಂತೆ ಒತ್ತಾಯ ಮಾಡಿದರು. ಒಂದು ರಾತ್ರಿ ದ್ವೀಪದಲ್ಲೇ ಕಳೆದ ನಿರರ್ಥರಾಜ ಅಲ್ಲಿನ ಮೀನುಗಾರರಿಗೆ ಹಿಂದೂಧರ್ಮವನ್ನು ಬೋಧನೆ ಮಾಡಿದ ಹಾಗೂ ಈ ದ್ವೀಪದಲ್ಲಿ ಸಮುದ್ರದೇವತೆಯ ದೇವಸ್ಥಾನ ಕಟ್ಟಿ ಪೂಜಿಸಿ ಎಂದು ಆಜ್ಞೆಯನ್ನು ನೀಡಿದ. ಆ ಮೀನುಗಾರರೆಲ್ಲ ಸೇರಿಕೊಂಡು ಸಮುದ್ರ ದೇವನಾದ ದೇವಬರುಣನ ದೇವಾಲಯವನ್ನು ಅಲ್ಲಿ ಕಟ್ಟಿದರು. ಇಂದು ಅಲ್ಲಿ ನಿರರ್ಥರಾಜನನ್ನೂ ಕೂಡಾ ಪೂಜಿಸಲಾಗುತ್ತದೆ.

ತನಹಲೋಟ್ ಹೊರತಾಗಿ ಇತರ 8 ದೇವಾಲಯಗಳು ಆ ದಕ್ಷಿಣಸಮುದ್ರ ತೀರದಲ್ಲಿದೆ. ಅವುಗಳೆಂದರೆ ಪೆಂತರ, ಪೆನಿಯಂಗ್,ಜೀರೋ ಖಂಡಾಂಗ್, ಇಂಜುಗ್ ಘಲ್ಫ್, ಬಾತು ಬೊಳುನ್ಗ್ ದೇವಸ್ಥಾನ. ಅಲ್ಲಿರುವ ಅಸಂಖ್ಯಾತ ಹಾವುಗಳು ಈ ತನಹಲೋಟ್ ದೇವಸ್ಥಾನದ ರಕ್ಷಣೆ ಮಾಡುತ್ತದೆ ಎಂಬ ಪ್ರತೀತಿಯೂ ಇದೆ.


ಇಂದು ಇಂಡೋನೇಷ್ಯಾ ಸಂಪೂರ್ಣ ಮುಸ್ಲಿಂ ರಾಷ್ಟ್ರವಾಗಿದ್ದರೂ ಕೂಡಾ ಈ ಜಾಗ ಅತ್ಯದ್ಭುತವಾದ  ಪ್ರವಾಸಿಸ್ಥಳವಾಗಿ ಮಾರ್ಪಾಡುಗೊಂಡಿದ್ದರೂ ಅಲ್ಲಿ ದಿನನಿತ್ಯದ ಪೂಜೆ ನಡೆಯುತ್ತದೆ. ಹಿಂದೂಧರ್ಮ ಭಾರತದಲ್ಲಿ ಮಾತ್ರ ಅಲ್ಲ ಇಡೀ ಪ್ರಪಂಚದ ಜನರಮನ ಗೆದ್ದಿತ್ತು ಅನ್ನುವುದಕ್ಕೆ ಈ ದೇವಸ್ಥಾನವೇ ಸಾಕ್ಷಿ. ಇತ್ತೀಚಿಗೆ ಈ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಜಪಾನ್ ದೇಶ ಸಾಲವನ್ನು ನೀಡಿತ್ತು. ದಿನೇದಿನೇ ಅಳಿವಿನಂಚಿನಲ್ಲಿ ಸಾಗುತ್ತಿರುವ ಇಂತಹ ಪುರಾತನ ದೇವಾಲಯದ ರಕ್ಷಣೆ ನಮ್ಮಹೊಣೆ ಅಲ್ಲವೇ?

ಅವಕಾಶ ಸಿಕ್ಕರೆ ಈ ಪವಿತ್ರ ಸ್ಥಳವನ್ನು ಒಮ್ಮೆ ಕಣ್ಣುತುಂಬಾ ನೋಡಿ ಮನಸ್ಸು ತುಂಬಿಕೊಳ್ಳೋಣ ಎನ್ನುತ್ತಾ….

ಸಚಿನ್ ಜೈನ್ ಹಳೆಯೂರ್