ಸಕಲ ಪಾಪ ಕರ್ಮಗಳನ್ನು ಕಳೆಯುವ ಮಹಾತಾಯಿ ಚೌಡೇಶ್ವರಮ್ಮ

ಸಕಲ ಪಾಪ ಕರ್ಮಗಳನ್ನು ಕಳೆಯುವ ಮಹಾತಾಯಿ ಚೌಡೇಶ್ವರಮ್ಮ

0

ಕರ್ನಾಟಕದಲ್ಲಿ ಚಿರಪರಿಚಿತವಾಗಿರುವ ಶ್ರೀ ಸಿಗಂದೂರು ಚೌಡೇಶ್ವರಿ ತಾಯಿಯ ದೇವಸ್ಥಾನ ಹಾಗೂ ಮಹಿಮೆಯ ಬಗ್ಗೆ ಕಿರು ಪರಿಚಯ ಇಲ್ಲಿದೆ ನೋಡಿ.

ಶ್ರೀ ಸಿಗಂದೂರು ಚೌಡೇಶ್ವರಿ ತಾಯಿ ನೀನೆ ಎಲ್ಲ ಎಂದು ಬೇಡಿ ಬರುವ ಭಕ್ತರಿಗೆ ಇದುವರೆಗೂ ಇಲ್ಲ ಎನ್ನದೆ ಬೇಡಿದ ಬೇಡಿಕೆಗಳನ್ನು ಈಡೇರಿಸಿದ್ದಾರೆ ಕರುನಾಡ ತಾಯಿ ಶ್ರೀ ಸಿಗಂದೂರು ಚೌಡೇಶ್ವರಮ್ಮ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶರಾವತಿ ನದಿಯ ಹಿನ್ನೀರಿನ ಪ್ರದೇಶದಲ್ಲಿ ಸಿಗಂದೂರಿನ ಕಾನನದಲ್ಲಿ ಕುಳಿತು ದೇಶದ ಮೂಲೆ ಮೂಲೆಯಿಂದ ಭಕ್ತರನ್ನು ತನ್ನಲ್ಲಿ ಕರೆಸಿಕೊಳ್ಳುವ ಶ್ರೀ ಸಿಗಂದೂರು ಚೌಡೇಶ್ವರಿ ಮಹಿಮೆ ಬಗ್ಗೆ ಕಿರು ಪರಿಚಯವನ್ನು ನೀಡುತ್ತಿದ್ದೇವೆ.

ಕೇವಲ ಎರಡು ದಶಕಗಳ ಹಿಂದೆ ಕುಗ್ರಾಮವಾಗಿದ್ದ ಸಿಗಂದೂರು ಈಗ ಜಗನ್ಮಾತೆಯ ಉಪಸ್ಥಿತಿಯಿಂದ ದಿವ್ಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಲಕ್ಷಾಂತರ ಜನರು ತಮ್ಮ ಬೇಡಿಕೆಗಳನ್ನು ಹೊತ್ತು ತಾಯಿಯ ಬಳಿ ಬರುತ್ತಾರೆ. ಇಪ್ಪತ್ತೈದು ವರ್ಷಗಳ ಹಿಂದೆ ಸಿಗಂದೂರು ಐತಿಹಾಸಿಕ ಕ್ಷೇತ್ರ ವಾಗಿರಲಿಲ್ಲ, ಬದಲಾಗಿ ನಮ್ಮ ಕಣ್ಣಮುಂದೆಯೇ ಈಗ ಕಣ್ಣಿನ ಅಂದಾಜಿಗೂ ಸಿಗದಷ್ಟು ದೊಡ್ಡದಾಗಿ ಬೆಳೆದಿದೆ ಈ ಕ್ಷೇತ್ರ.

25 ವರ್ಷದ ಹಿಂದಿನವರೆಗೂ ಇದೇ ಶರವಾತಿ ನದಿಯ ತೀರದಲ್ಲಿ ಗೊಂಡಾರಣ್ಯದ ಗುಹೆಯೊಂದರಲ್ಲಿ ನೆಲೆಸಿದ್ದರು. ಸೀಮಿತವಾದ  ಭಕ್ತವೃಂದವನ್ನು ಹೊಂದಿದ್ದ ಈ ತಾಯಿ, ನಿಸರ್ಗದ ಸೊಬಗಿಗೆ ದಿವ್ಯತೆಯ ಎರಕಹೊಯ್ಯುತ್ತಾ, ತಾನೇ ತಾನಾಗಿ ನೆಲೆನಿಂತಿದ್ದಾರೆ. ಅದೊಂದು ಶುಭದಿನ ದೇವಸ್ಥಾನದ ಹಿಂದಿನ ಧರ್ಮದರ್ಶಿಗಳ ಆಗಿರುವ ರಾಮಪ್ಪ ಹಾಗೂ ಪ್ರಧಾನ ಅರ್ಚಕರ ಆಗಿರುವ ಶೇಷಗಿರಿ ಭಟ್ಟರಿಗೆ ಪ್ರೇರಣೆಯನ್ನು ನೀಡಿದ್ದರು ಮಹಾತಾಯಿ.

ಆ ಪ್ರೇರಣೆಯ ಫಲಶ್ರುತಿ ಯಿಂದಲೇ ಇಂದು ಚೌಡೇಶ್ವರಿ ತಾಯಿಯ ದೇವಸ್ಥಾನ ಕಂಗೊಳಿಸುತ್ತಿದೆ ಈ ದೇವಾಲಯಕ್ಕೆ ಈ ವರ್ಷ 25ನೇ ವರ್ಷದ ಸಂಭ್ರಮ ಸಹ ನಡೆದಿದೆ.

ಈ ದೇವಸ್ಥಾನದ ಹಿನ್ನೆಲೆಯನ್ನು ನಾವು ಹುಡುಕುತ್ತಾ ಹೋದರೆ ಶೇಷಪ್ಪ ಎಂಬುವವರು ಇಲ್ಲಿನ ಕಾಡು ಪ್ರದೇಶದಲ್ಲಿ ಕಳೆದು ಹೋಗುತ್ತಾರೆ. ದಾರಿ ಕಾಣದೆ ಮರದ ಕೆಳಗೆ ವಿಶ್ರಮಿಸಲು ಕುಳಿತು ನಿದ್ದೆ ಮಾಡುವಾಗ ಅವರ ಕನಸಿನಲ್ಲಿ ಶ್ರೀ ಸಿಗಂದೂರು ಚೌಡೇಶ್ವರಿ ತಾಯಿ ಪ್ರತ್ಯಕ್ಷರಾಗಿ ದೇವಾಲಯ ನಿರ್ಮಿಸುವಂತೆ ವಿಗ್ರಹದ ಕುರಿತು ಅವರಿಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಾಳೆ. ಆಗ ಶೇಷಪ್ಪನವರು ನದಿಯಲ್ಲಿ ದೇವಿಯ ವಿಗ್ರಹವನ್ನು ಹುಡುಕಿ ತನ್ನ ಊರಿನ ಬ್ರಾಹ್ಮಣ ಪುರೋಹಿತರ ದುಗ್ಗಜ್ಜನೊಂದಿಗೆ ಸೇರಿಕೊಂಡು ದೇವಿಯನ್ನು ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಾಣ ಮಾಡುತ್ತಾರೆ.

ಇದು ಈ ಕ್ಷೇತ್ರದ ಇತಿಹಾಸ ಅಷ್ಟೇ ಅಲ್ಲದೆ ಇಲ್ಲಿನ ವಿಶೇಷವೇನೆಂದರೆ ಕಳ್ಳರಿಂದ ತಮ್ಮ ಮನೆ, ಜಮೀನು, ಹೊಲಗಳಿಗೆ ರಕ್ಷಣೆ ಪಡೆಯಲು ಇಲ್ಲಿ ಬೋರ್ಡ್ ಹಾಕುವ ಪದ್ದತಿಯಿದೆ. ಜಮೀನು, ತೋಟ, ಗದ್ದೆ ಮತ್ತು ಯಾವುದೇ ಹೊಸ ಕಟ್ಟಡಗಳಲ್ಲಿನ ವಸ್ತುಗಳಿಗೆ ಬೋರ್ಡ್ ಹಾಕಿದರೆ ಕಳ್ಳತನವಾಗುವುದಿಲ್ಲ. ಇದರಿಂದಲೇ ನೀವು ಭೇಟಿ ನೀಡಿದ ತಕ್ಷಣವೇ ಶಿವಮೊಗ್ಗ ಸುತ್ತಮುತ್ತ ಮನೆಯ ಬಾಗಿಲುಗಳಲ್ಲಿ ಚೌಡೇಶ್ವರಿ ದೇವಿಯ ಕಾವಲಿದೆ ಎಂಬ ಬೋರ್ಡುಗಳನ್ನು ಕಾಣುತ್ತೀರಿ.

ಹೀಗೆ ಹೇಳುತ್ತಾ ಹೋದರೆ ಈ ತಾಯಿಯ ಮಹಿಮೆಯನ್ನು ವಿವರಿಸಲು ನಮಗೆ ದಿನಗಳು ಬೇಕಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಶರಾವತಿ ನದಿಯ ಹಿನ್ನೀರಿನಲ್ಲಿ ಇರುವ ಈ ದೇವಸ್ಥಾನಕ್ಕೆ ಸಮಯ ಮಾಡಿಕೊಂಡು ಒಮ್ಮೆ ಭೇಟಿ ನೀಡಿ.