ಹಿಂದೂ ಭಯೋತ್ಪಾದನೆ ಎಂದಿದ್ದ ರಾಹುಲ್ ಗೆ ಬಾರಿ ಮುಖಭಂಗ – ಇಡೀ ದೇಶದ ಕ್ಷಮೆ ಕೇಳಲಿ

ಹಿಂದೂ ಭಯೋತ್ಪಾದನೆ ಎಂದಿದ್ದ ರಾಹುಲ್ ಗೆ ಬಾರಿ ಮುಖಭಂಗ – ಇಡೀ ದೇಶದ ಕ್ಷಮೆ ಕೇಳಲಿ – ಅಮಿತ್ ಷಾ

0

ಹೈದ್ರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಸೇರಿ ಎಲ್ಲಾ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿರುವ ಹಿನ್ನೆಲೆಯಲ್ಲಿ ‘ಹಿಂದೂ ಭಯೋತ್ಪಾದನೆ’ ಆರೋಪ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಪಕ್ಷ ಇಡೀ ದೇಶದ ಕ್ಷಮೆ ಕೋರಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆಗ್ರಹಿಸಿದ್ದಾರೆ.

ಬುಧವಾರ ನಗರದ ಅರಮನೆ ಮೈದಾನದಲ್ಲಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪಕ್ಷದ ಶಕ್ತಿ ಕೇಂದ್ರಗಳ ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹೈದ್ರಾಬಾದ್‌ ಮಸೀದಿಯಲ್ಲಿ ಬಾಂಬ್‌ ಸ್ಫೋಟ ನಡೆದಾಗ ಅದಕ್ಕೆ ‘ಹಿಂದೂ ಭಯೋತ್ಪಾದನೆ’ ಕಾರಣವಾಗಿದ್ದು, ಹಿಂದೂ ಭಯೋತ್ಪಾದಕರಿಂದ ಈ ಕೃತ್ಯ ನಡೆದಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕೇಂದ್ರದ ಮಾಜಿ ಸಚಿವರಾದ ಪಿ.ಚಿದಂಬರಂ, ಸುಶೀಲ್‌ ಕುಮಾರ್‌ ಶಿಂಧೆ, ದಿಗ್ವಿಜಯ್‌ ಸಿಂಗ್‌ ಆಪಾದಿಸಿದ್ದರು.

ಹಿಂದೆ 2009ರ ಆಗಸ್ಟ್‌ 3ರಲ್ಲಿ ಅಮೆರಿಕದ ರಾಯಭಾರಿ ತಿಮೋತಿ ರೋಮರ್‌ ಅವರ ಬಳಿ ಮಾತನಾಡಿದ್ದ ರಾಹುಲ್‌ ಗಾಂಧಿ, ಲಷ್ಕರ್‌ ಎ ತೋಯ್ಬಾ ಭಯೋತ್ಪಾದನೆ ಸಂಘಟನೆಗಿಂತ ಹಿಂದೂ ಭಯೋತ್ಪಾದನೆ ಬಹಳ ಅಪಾಯಕಾರಿ ಎಂದು ಹೇಳಿದ್ದರು. ರಾಹುಲ್‌ ಗಾಂಧಿ, ರೋಮರ್‌ ಬಳಿ ವ್ಯಕ್ತಪಡಿಸಿದ ಆತಂಕವನ್ನು ರೋಮರ್‌ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು ಎಂದು ಶಾ ತಿಳಿಸಿದರು.

ಇದೀಗ ನ್ಯಾಯಾಲಯ ಪ್ರಕರಣದ ಆರೋಪಿಗಳನ್ನು ನಿರ್ದೋಷಿಗಳು ಎಂಬ ತೀರ್ಪು ನೀಡಿ ಖುಲಾಸೆಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ದೇಶದ ಪ್ರತಿಯೊಬ್ಬ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷ ಹಿಂದೂ ಭಯೋತ್ಪಾದನೆ ಎಂದು ಸುಳ್ಳು ಪ್ರಚಾರ ಮಾಡಿ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿತ್ತು. ಅಲ್ಲದೆ, ತನಿಖಾ ಸಂಸ್ಥೆ ಮೇಲೆ ಒತ್ತಡ ಹೇರಿ ಅಮಾಯಕರ ಬಂಧನವಾಗುವಂತೆ ನೋಡಿಕೊಂಡಿತ್ತು. ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ಬಂಧಿಸದೆ ಹಿಂದೂ ಭಯೋತ್ಪಾದನೆ ಹೆಸರಿನಲ್ಲಿ ನಿರ್ದೋಷಿಗಳನ್ನು ಬಂಧಿಸಿರುವುದು ನ್ಯಾಯಾಲಯದ ತೀರ್ಪಿನಿಂದ ಸಾಬೀತಾಗಿದೆ. ಈ ಮೂಲಕ ಕಾಂಗ್ರೆಸ್‌ನ ಸುಳ್ಳು ಆರೋಪಗಳು ಬಯಲಾಗಿವೆ. ಹಿಂದೂ ಭಯೋತ್ಪಾದನೆ ಬೀಜ ಬಿತ್ತಿದ ಕಾಂಗ್ರೆಸ್ಸಿಗರಿಗೆ ಕರ್ನಾಟಕದ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದ್ದು, ಹಂತಕರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

ಗೂಂಡಾ ಸರ್ಕಾರ:

ಬಿಜೆಪಿ ಈಗಾಗಲೇ ದೇಶದ 21 ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದು, ಕರ್ನಾಟಕದಲ್ಲೂ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಜ್ಯದಲ್ಲಿ ಸುಮಾರು 3500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ ಆಡಳಿತದಿಂದ ಜನ ಬೇಸತ್ತಿದ್ದು, ಗೂಂಡಾ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕಕ್ಕೆ .2.19 ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಅಂದಿನ ಯುಪಿಎ ಸರ್ಕಾರ ರಾಜ್ಯಕ್ಕೆ .88 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಸತ್ಯವನ್ನು ಹೇಳಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿ ಪ್ರಧಾನಿ ಮೋದಿ ಅವರ ಕೈ ಬಲಪಡಿಸಿ ಎಂದ ಅವರು, ಮೋದಿ ಅವರ ಕೆಲಸಗಳನ್ನು ಮನೆ ಮನೆಗೆ ತಲುಪಿಸಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರೂ ಆಗಿರುವ ಪಕ್ಷದ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವ್ಡೇಕರ್‌, ಕೇಂದ್ರ ಸಚಿವರಾದ ಅನಂತಕುಮಾರ್‌, ಸದಾನಂದಗೌಡ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌ ಇನ್ನಿತರ ಮುಖಂಡರಿದ್ದರು.