ಸ್ಟಾರ್ ಕ್ರಿಕೆಟರ್ಸ್ ಗೆ ಟಿಕೆಟ್ ಆಫರ್ ನೀಡಿದ ಬಿಜೆಪಿ, ಮುಂದೇನಾಯಿತು ಇಲ್ಲಿ ಓದಿ

ಬೆಂಗಳೂರು: ಕರ್ನಾಟಕದಲ್ಲಿ ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಸೆಡ್ಡು ಹೊಡೆಯಲು ನಿರ್ಧರಿಸಿರುವ ಬಿಜೆಪಿ,ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಸ್ಪರ್ಧಿಸುವಂತೆ ಮಾಜಿ ಕ್ರಿಕೆಟಿಗರಾದ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ಅವರಿಗೆ ಟಿಕೆಟ್ ಆಫರ್ ನೀಡಿದ್ದು, ಆದರೆ ಇದನ್ನು ಇಬ್ಬರು ಆಟಗಾರರು ನಿರಾಕರಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮೂಲಗಳ ಪ್ರಕಾರ ಯುವ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಬಿಜೆಪಿ ಈ ಇಬ್ಬರು ಮಿಸ್ಟರ್ ಕ್ಲೀನ್ ಖ್ಯಾತಿಯ ಟೀಂ ಇಂಡಿಯಾದ ಮಾಜಿ ನಾಯಕರುಗಳನ್ನು ಬಿಜೆಪಿ ತಮ್ಮ ಪಕ್ಷದತ್ತ ಸೆಳೆಯಲು ಕಳೆದ ಕೆಲ ವಾರಗಳಿಂದ ಪ್ರಯತ್ನಿಸುತ್ತಿದ್ದು, ಸ್ಟಾರ್ ಆಟಗಾರ ಬೆಂಬಲ ನೀಡುವಂತೆ ಮನವಿ ಮಾಡಿತ್ತು ಎನ್ನಲಾಗಿದೆ.

ಆದರೆ ರಾಜಕೀಯದಿಂದ ದೂರವೇ ಇರಲು ಬಯಸಿರುವ ಗೋಡೆ ಖ್ಯಾತಿಯ ದ್ರಾವಿಡ್ ಮತ್ತು ಜಂಬೋ ಕುಂಬ್ಳೆ ಇಬ್ಬರು ನಿರಾಕರಿಸಿದ್ದಾರೆ.ಆದರು ಬಿಜೆಪಿ ಸತತ ಮಾತುಕತೆಗಳನ್ನು ನಡೆಸುತ್ತಿದ್ದು, ಈ ಬಾರಿ ಅಲ್ಲದಿದ್ದರೂ ಮುಂದಿನ ಲೋಕಸಭಾ ಆಥವಾ ರಾಜ್ಯಸಭಾ ಚುನಾವಣೆ ಸ್ಥಾನ ನೀಡುವ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಇಬ್ಬರು ಆಟಗಾರರು ಮಾಧ್ಯಮಗಳಿಗೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿರುವ ದ್ರಾವಿಡ್ ಸದ್ಯ ಟೀಂ ಇಂಡಿಯಾ ಅಂಡರ್ 19 ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಕಳೆದ ತಿಂಗಳು ರಾಜ್ಯ ಚುನಾವಣಾ ಆಯೋಗ ದ್ರಾವಿಡ್ ರನ್ನು ವಿಧಾನಸಭಾ ಚುನಾವಣೆಯ ರಾಯಭಾರಿಯನ್ನಾಗಿ ಆಯ್ಕೆ ಮಾಡಿತ್ತು. ಇನ್ನು ಕುಂಬ್ಳೆ ಕ್ರೀಡಾ ನಿರ್ವಹಣೆ ಹಾಗೂ ಕ್ರಿಕೆಟ್ ಅಡ್ಮಿನಿಸ್ಟ್ರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕುಂಬ್ಳೆ ಅವರ ಆಪ್ತ ಮೂಲಗಳ ಪ್ರಕಾರ ಬಿಜೆಪಿ ಈ ಇಬ್ಬರನ್ನೂ ಪಕ್ಷಕ್ಕೆ ಸೇರುವಂತೆ ಸಾಕಷ್ಟು ಸಾರಿ ಮಾತುಕತೆ ನಡೆಸಿದೆ. ಆದರೆ ಇಬ್ಬರೂ ಬಿಜೆಪಿ ಆಮಂತ್ರಣವನ್ನು ವಿನಮೃವಾಗಿಯೇ ತಿರಸ್ಕರಿಸಿದ್ದಾರೆ.

Post Author: Ravi Yadav