ಬಿಜೆಪಿ 3ನೇ ಪಟ್ಟಿಯಲ್ಲಿ ಯಾರಿಗೆ ಒಲಿಯಲಿದೆ ಟಿಕೆಟ್?? ಯಾರಿಗೆ ಆದ್ಯತೆ ??

ಬಿಜೆಪಿ 3ನೇ ಪಟ್ಟಿಯಲ್ಲಿ ಯಾರಿಗೆ ಒಲಿಯಲಿದೆ ಟಿಕೆಟ್?? ಯಾರಿಗೆ ಆದ್ಯತೆ ??

0

ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ತುಸು ಹೆಚ್ಚಿನ ಟಿಕೆಟ್ ನೀಡಿದ ಬೆನ್ನಲ್ಲೇ ಬಿಜೆಪಿಯಲ್ಲೂ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡುವ ಬಗ್ಗೆ ಕೂಗು ಕೇಳಿಬಂದಿದ್ದು, ಪಕ್ಷದ ನಾಯಕರು ಕಸರತ್ತು ಆರಂಭಿಸಿದ್ದಾರೆ. 224 ಕ್ಷೇತ್ರಗಳ ಪೈಕಿ ಬಿಜೆಪಿಯು ಇದುವರೆಗೆ 154 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿ ಪ್ರಕಟಿಸಿದ್ದು, ಈ ಪೈಕಿ ಕೇವಲ ಮೂವರು ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಿದೆ. ಆದರೆ, 218 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್ ಪಕ್ಷ 13 ಕ್ಷೇತ್ರಗಳಿಗೆ ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ.

ಇನ್ನು 126 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಜೆಡಿಎಸ್ ನಾಲ್ವರು ಮಹಿಳೆಯರಿಗೆ ಟಿಕೆಟ್ ಕೊಟ್ಟಿದೆ. ಪ್ರಸಕ್ತ ಬೆಳವಣಿಗೆಗಳನ್ನು ಗಮನಿಸಿದರೆ ಇನ್ನುಳಿದ 70 ಕ್ಷೇತ್ರಗಳ ಪೈಕಿ ಒಬ್ಬಿಬ್ಬರಿಗೆ ಮಾತ್ರ ಟಿಕೆಟ್ ಸಿಗುವ ಸಾಧ್ಯತೆ ಕಂಡು ಬರುತ್ತಿದೆ. ಹೀಗಾಗಿ, ಈಗ ಬಾಕಿ ಉಳಿದ ಕ್ಷೇತ್ರಗಳಲ್ಲಾದರೂ ಹೆಚ್ಚಿನ ಸ್ಥಾನಗಳನ್ನು ಮಹಿಳೆಯರಿಗೆ ನೀಡಬೇಕು.

ಇಲ್ಲದಿದ್ದರೆ ಪ್ರತಿಪಕ್ಷಗಳು ಟೀಕಾಸ್ತ್ರ ಪ್ರಯೋಗಿಸಬಹುದು ಎಂಬ ಬಲವಾದ ಅಭಿಪ್ರಾಯವನ್ನು ಮುಖಂಡರು ವರಿಷ್ಠರ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನುಳಿದ 70 ಕ್ಷೇತ್ರಗಳ ಪೈಕಿ ಯಾವ ಯಾವ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ನೀಡಬಹುದು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಆರಂಭವಾಗಿದ್ದು, ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.