ಆ ನದಿಯಲ್ಲಿರುವ ಕಲ್ಲುಗಳೆಲ್ಲಾ ಶಿವಲಿಂಗಗಳೇ!!!

ಆ ನದಿಯಲ್ಲಿರುವ ಕಲ್ಲುಗಳೆಲ್ಲಾ ಶಿವಲಿಂಗಗಳೇ!!! ✍ಸಚಿನ್ ಜೈನ್ ಹಳೆಯೂರ್

0

ಹಿಂದೂ ಧರ್ಮವನ್ನು ಆಚರಿಸುವವರಲ್ಲಿ ಹೆಚ್ಚಿನವರು ಶಿವನಲ್ಲಿ ನಂಬಿಕೆ ಇಟ್ಟವರು. ಅವನನ್ನು
ವಿವಿಧ ಹೆಸರುಗಳಿಂದ ಪೂಜಿಸುವುದು ಹಿಂದಿನಿಂದ ಬಂದ ಪರಂಪರೆ. ಕಾಶಿ ವಿಶ್ವನಾಥನಿಂದ ಹಿಡಿದು ರಾಮೇಶ್ವರ ತನಕ ಬೇರೆಬೇರೆ ಹೆಸರುಗಳಿಂದ ಅವನನ್ನು ಕರೆಯಲಾಗುತ್ತದೆ. ಉತ್ತರಭಾರತದಲ್ಲಿ ಶಿವನ ಪ್ರಮುಖ ದೇವಾಸ್ಥಾನಗಳು ಇದ್ದರೂ ದಕ್ಷಿಣ ಭಾರತದಲ್ಲೂ ಅದಕ್ಕಿಂತ ಪವಿತ್ರ ಸ್ಥಳಗಳಿವೆ.

ಅದರಲ್ಲಿ ಪ್ರಮುಖವಾದ ಒಂದು ವಿಸ್ಮಯ ಪುಣ್ಯಕ್ಷೇತ್ರ ಇದು. ಕರ್ನಾಟಕದ ರಾಜ್ಯದ ಶಿರಸಿಯಿಂದ ಸುಮಾರು 17ಕಿಲೋಮೀಟರ್ ಅಥವಾ ಎಲ್ಲಾಪುರಿಂದ 38ಕಿಲೋಮೀಟರ್ ದೂರದಲ್ಲಿರುವ ಶಾಲ್ಮಲಾ ನದಿಯ ತಟದಲ್ಲಿ ಈ ಸಹಸ್ರಲಿಂಗ ದೇವಾಸ್ಥಾನವಿದೆ.

ಇತಿಹಾಸಿಕವಾದ ಈ ನದಿಯಕಲ್ಲುಗಳನ್ನು ಶಿವಲಿಂಗವಾಗಿ ಸುಮಾರು 1678-1718ರ ಕಾಲಗಟ್ಟದಲ್ಲಿದ್ದ ಶಿವಭಕ್ತ ಶಿರಸಿಯ ರಾಜನಾದ ಸದಶಿವರಾಯನು ಕೆತ್ತಿಸಿದ.
ಸಿರಸಿಯಿಂದ ಯಲ್ಲಾಪುರ ಮಾರ್ಗದಲ್ಲಿರೋ ಈ ಸಹಸ್ರಲಿಂಗವನ್ನು ನೋಡಿರದ ಅಥವಾ ಕೇಳಿರದೇ ಇರುವಂತಹ ಜನ ಉತ್ತರ ಕನ್ನಡದ ಸುತ್ತಲ ಮೂರ್ನಾಲ್ಕು ಜಿಲ್ಲೆಗಳಲ್ಲೇ ಇಲ್ಲವೆನ್ನುವಷ್ಟು ವಿರಳವೆನ್ನಬಹುದೇನೋ.

ನದಿಯಲ್ಲಿ ಮಳೆಗಾಲದಲ್ಲಿ ನೀರು ತುಂಬಿಹರಿಯುದರಿಂದ ನೀರಿನ ಮಟ್ಟ ಕಡಿಮೆ ಇರುವಾಗ ಮಾತ್ರ ಈ ಸಹಸ್ರಲಿಂಗಗಳ ಪೂಜೆ ನಡೆಯುತ್ತದೆ. ಭಕ್ತರು ಹೆಚ್ಚಾಗಿ ಬೇಸಿಗೆಯಲ್ಲಿಯೇ ಇಲ್ಲಿಬಂದು ಈ ಮನೋಹರವಾದ ಶಿವಲಿಂಗಗಳ ದರ್ಶನ ಮಾಡುತ್ತಾರೆ. ಅಲ್ಲಿನ ನದಿತಟದಲ್ಲಿ ಸಾವಿರ ಲಿಂಗಗಳಿವೆಯೆಂಬ ಪ್ರತೀತಿಯಿದ್ದರೂ ಅದರಲ್ಲಿ ಮೂರಂಕಿಯ ಲಿಂಗಗಳನ್ನು ನೋಡಲು ಬೇಸಗೆಯವರೆಗೂ ಕಾಯಬೇಕು. ಅಲ್ಲಿನ ಲಿಂಗವೊಂದರ ಮೇಲಿರುವ “ಸೋಂದೆಯ ರಾಮಚಂದ್ರಲ್ಲಿಂಗವು..” ಎಂಬ ವಾಕ್ಯದಂತೆ ಇಲ್ಲಿನ ಶಿವಲಿಂಗಗಳನ್ನು ಸೋಂದೆಯರಸರ ಕಾಲದಲ್ಲಿ ಕೆತ್ತಲಾಯಿತೆಂದು ಪ್ರತೀತಿಯೂ ಇದೆ.

ಪ್ರತಿಯೊಂದು ಕಲ್ಲಿನಲ್ಲೂ ಶಿವಲಿಂಗದ ಕೆತ್ತನೆಯಿದ್ದು ಆ ಪ್ರತಿ ಶಿವಲಿಂಗ ಅದರದ್ದೇ ಆದ ನಂದಿಯನ್ನು ಒಳಗೊಂಡಿದೆ. ನದಿಯಲ್ಲಿರುವ ಎಲ್ಲಾ ನಂದಿಯು ಶಿವಲಿಂಗದ ಕಡೆಗೆ ಮುಖ ಮಾಡಿದೆ. ಹಿಂದೂಧರ್ಮದ ಪವಿತ್ರ ಆಚರಣೆಯಾದ ಮಹಾಶಿವರಾತ್ರಿಯಂದು ಇಲ್ಲಿ ವಿಶೇಷಪೂಜೆ ನಡೆಯುತ್ತದೆ. ವಾರ್ಷಿಕವಾಗಿ ಸುಮಾರು 25ಸಾವಿರಾಕ್ಕೂ ಹೆಚ್ಚು ಪ್ರವಾಸಿಗರು ಈ ಸ್ಥಳಕ್ಕೆ ಬೇಟಿಕೊಟ್ಟು ಪರಮಾತ್ಮನ ದರ್ಶನ ಮಾಡುತ್ತಾರೆ.

ಸಹಸ್ರಲಿಂಗವನ್ನು ಮಾತ್ರ ಅಲ್ಲದೆ ಅಲ್ಲಿಯೇ ಪಕ್ಕದಲ್ಲಿರುವ ಪಕ್ಷಿಧಾಮವನ್ನು ಮತ್ತು ತೂಗುಸೇತುವೆಯ ಮೇಲಿನ ನೋಟವನ್ನೂ ಸವಿಯಬಹುದು. ಸಹಸ್ರಲಿಂಗದಿಂದ ಅದರ ಪಕ್ಕದಲ್ಲಿರೋ ತೂಗುಸೇತುವೆಯ ಮೇಲೆ ದಾಟಿ ಮುಂದೆ 8 ಕಿಲೋಮೀಟರ್ ಸಾಗಿದರೆ ಸುರಬೈಲು ಎಂಬ ಊರು ಸಿಗುತ್ತದೆ. ಅದರಿಂದ ಮುಂದೆ ಬರುತ್ತಿದ್ದಂತೆಯೇ ಬಕ್ಕಳ ಕ್ರಾಸ್ ಸಿಗುತ್ತದೆ. ಅಲ್ಲಿಂದ (ಬಕ್ಕಳ3 ಕಿ.ಮೀ) ವಾನಳ್ಳಿ(11 ಕಿ.ಮೀ) ಮಾರ್ಗವಾಗಿ ಒಟ್ಟು 22 ಕಿಲೋಮೀಟರ್ ಹೋದರೆ ಶಿವಗಂಗೆ ಎನ್ನುವ ಜಲಪಾತ ಸಿಗುತ್ತದೆ. ಹಚ್ಚ ಹಸಿರಿನ ಮರಗಳ ಮದ್ಯೆ ಹಾಲಿನಂತೆ ಈ ಶಿವಗಂಗೆ ಉಕ್ಕುತ್ತಾ ಹರಿಯುತ್ತದೆ . ಒಟ್ಟಾಗಿ ಚಾರಣಪ್ರಿಯರಿಗೆ ಇದೊಂದು ಅದ್ಬುತ ಜಾಗ ಎಂದರೆ ತಪ್ಪಾಗಲಾರದು.

ಪ್ರವಾಸ ಎಂದ ತಕ್ಷಣ ಹೊರದೇಶ, ಹೊರರಾಜ್ಯದ ಬಗ್ಗೆ ಯೋಚನೆ ಮಾಡುವ ನಾವು ಅಲ್ಲಿಗೆ ಸಿಕ್ಕಾಪಟ್ಟೆ ಖರ್ಚುಮಾಡಿ ಹೋಗುದಕ್ಕಿಂತ ಕಡಿಮೆ ಖರ್ಚಿನಲ್ಲಿ ನಮ್ಮ ರಾಜ್ಯದಲ್ಲೇ ಇರುವ ಇಂತಹ ಹಲವಾರು ಧಾರ್ಮಿಕ ಪ್ರೇಕ್ಷಣೀಯ ಸ್ಥಳಗಳನ್ನು, ಅಚ್ಚರಿಗಳನ್ನು ನೋಡಬಹುದು ಅಲ್ಲವೇ? ಬಿಡುವು ಮಾಡಿಕೊಂಡು ಒಮ್ಮೆ ಈ ಪವಿತ್ರ ಸಹಸ್ರಲಿಂಗದ ದರ್ಶನ ಮಾಡೋಣ ಎನ್ನುತ್ತಾ…..

✍ಸಚಿನ್ ಜೈನ್ ಹಳೆಯೂರ್