ಕಾಂತಾರದಲ್ಲಿ ಬರುವ ಪಂಜುರ್ಲಿಯ ಅಸಲಿ ಕಥೆ ಗೊತ್ತಾ? ಶಿವನೇ ಕೊಂದು ಮರು ಜೀವ ಕೊಟ್ಟಿದ್ದೇಕೆ??ಧರ್ಮಸ್ಥಳ ಹುಟ್ಟಿಗೆ ಕಾರಣವಾದ ದೈವ ಶಕ್ತಿ ಅಸಲಿ ಕಥೆ.

ಕಾಂತಾರದಲ್ಲಿ ಬರುವ ಪಂಜುರ್ಲಿಯ ಅಸಲಿ ಕಥೆ ಗೊತ್ತಾ? ಶಿವನೇ ಕೊಂದು ಮರು ಜೀವ ಕೊಟ್ಟಿದ್ದೇಕೆ??ಧರ್ಮಸ್ಥಳ ಹುಟ್ಟಿಗೆ ಕಾರಣವಾದ ದೈವ ಶಕ್ತಿ ಅಸಲಿ ಕಥೆ.

ನಮಸ್ಕಾರ ಸ್ನೇಹಿತರೇ ಕಾಂತಾರ ಇದೊಂದು ಸಿನಿಮಾ ಮಾತ್ರವಲ್ಲ, ಬೇರೆಯದೆ ಅನುಭವ. ಚಿತ್ರರಂಗದಲ್ಲಿ ಇದುವರೆಗೂ ಇಂತಹ ಒಂದು ಸಿನಿಮಾ ಬಂದಿಲ್ಲ ಎನ್ನುವುದು ಸತ್ಯವಾದ ಮಾತು. ಕಾಂತಾರ ಸಿನಿಮಾ ಯಶಸ್ಸು ಹೇಗಿದೆ ಎಂದು ಹೇಳುವುದಕ್ಕೆ ಬುಕ್ ಮೈ ಶೋ ಒಂದು ಸಾಕ್ಷಿ, ಇದುವರೆಗೂ ಬುಕ್ ಮೈ ಶೋ ಇತಿಹಾಸದಲ್ಲಿ ಯಾವ ಒಂದು ಸಿನಿಮಾಗು 99% ರೇಟಿಂಗ್ ಸಿಕ್ಕಿರಲಿಲ್ಲ, ಇದೇ ಮೊದಲ ಬಾರಿಗೆ ಕಾಂತಾರ ಸಿನಿಮಾಗೆ ಈ ರೇಟಿಂಗ್ ಸಿಕ್ಕಿದೆ. ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದು, 30ಸಾವಿರಕ್ಕಿಂತ ಹೆಚ್ಚು ಜನರು ಕಾಂತಾರ ಸಿನಿಮಾ ನೋಡಿ ಬುಕ್ ಮೈ ಶೋ ಆಪ್ ನಲ್ಲಿ ವೋಟಿಂಗ್ ಮಾಡಿದ್ದು, 99% ವೋಟಿಂಗ್ ಬಂದಿದೆ.

ಚಿತ್ರರಂಗದ ಇತಿಹಾಸದಲ್ಲಿ ಕಾಂತಾರ ಎಂದಿಗೂ ನೆನಪಿಡಬೇಕಾದ ಸಿನಿಮಾ ಆಗಿದೆ. ಈಗಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ದಶಕಗಳೆ ಕಳೆದು, ಇನ್ನು ಇನ್ನೂರು ಮುನ್ನೂರು ವರ್ಷಗಳು ಉರುಳಿದ ಬಳಿಕ ಸಹ ಕಾಂತಾರ ಸಿನಿಮಾ ಜನರ ನೆನಪಿನಲ್ಲಿ ದಂತಕಥೆಯಾಗಿ ಉಳಿಯುತ್ತದೆ. ಕಾಂತಾರ ಸಿನಿಮಾದಲ್ಲಿ ಕರಾವಳಿ ಪ್ರದೇಶ, ಮಂಗಳೂರು ಕಡೆ ನಡೆಯುವ ಆಚರಣೆಗಳ ಬಗ್ಗೆ ಅದ್ಭುತವಾಗಿ ತೋರಿಸಲಾಗಿದೆ, ಅದರಲ್ಲೂ ವಿಶೇಷವಾಗಿ ಪಂಜುರ್ಲಿ ದೈವದ ಬಗ್ಗೆ ತೋರಿಸಲಾಗಿದೆ, ಪಂಜುರ್ಲಿ ದೈವದ ಮಹತ್ವ ಇಡೀ ಸಿನಿಮಾವನ್ನು ಆವರಿಸಿಕೊಂಡಿದೆ. ಪಂಜುರ್ಲಿ ದೈವದ ಹಿಂದೆ ಒಂದು ಇತಿಹಾಸ ಕಥೆ, ಪಂಜುರ್ಲಿ ದೈವದ ಸ್ಥಾನ ಪಡೆದಿದ್ದು ಹೇಗೆ? ಇದರ ಹಿಂದಿನ ಕಥೆಯೇನು ಎಂದು ಇಂದು ನಿಮಗೆ ತಿಳಿಸುತ್ತೇವೆ.

ಕರ್ನಾಟಕದ ಕರಾವಳಿ ಭಾಗವನ್ನ ತುಳುನಾಡು ಎಂದು ಕರೆಯಲಾಗುತ್ತದೆ, ಈ ಪ್ರದೇಶವು ಅಲ್ಲಿನ ವಿಶಿಷ್ಟ ಆಚರಣೆ ಮತ್ತು ನಂಬಿಕೆಗಳಿಗೆ ವಿಶೇಷ ಹೆಸರು ಪಡೆದುಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ತುಳುನಾಡಿನ ನಡೆಯುವ ದೈವಾರಾಧನೆಗೆ ಭಾರತ ಸಂಸ್ಕೃತಿಯಲ್ಲೇ ವಿಶೇಷವಾದ ಸ್ಥಾನ ಇದೆ. ತುಳುನಾಡಿನ ಜನರು ಆಚರಣೆ ಮಾಡುವ ಈ ದೈವಾರಾಧನೆಗೆ ವಿಶಿಷ್ಟವಾದ ಮಹತ್ವ ಇದೆ, ಅಷ್ಟೇ ಅಲ್ಲದೆ ಈ ದೈವಾರಾಧನೆಯಲ್ಲಿ ಜನರ ನಂಬಿಕೆ ಇದೆ. ಇಲ್ಲಿ ಅನೇಕ ದೈವರು ಇದ್ದಾರೆ. ದೈವಗಳಲ್ಲಿ ಒಂದಾದ ಪಂಜುರ್ಲಿ ದೈವವನ್ನು ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದೆ. ದೈವಗಳಲ್ಲಿ ಪಂಜುರ್ಲಿ ದೈವನಿಗೆ ಪ್ರಮುಖವಾದ ಸ್ಥಾನವಿದೆ.

ತುಳು ಭಾಷೆಯಲ್ಲಿ ಪಂಜಿ ಎನ್ನುವ ಪದದ ಅರ್ಥ ಹಂದಿ ಎಂದು, ಈ ಹಂದಿಯು ಶಿವನ ವಿಶೇಷ ಆಶೀರ್ವಾದ ಪಡೆದು ತುಳುನಾಡಿಗೆ ಬರುತ್ತದೆ. ಅದು ಹೇಗೆ ಎನ್ನುವ ಕಥೆಯನ್ನು ಇಂದು ನಿಮಗೆ ತಿಳಿಸುತ್ತೇವೆ. ಶಿವನ ಪತ್ನಿ ಪಾರ್ವತಿ ದೇವಿಯ ಬಯಕೆಯ ಅನುಸಾರ ಶಿವನು ಒಂದು ಕಾಡನ್ನು ನಿರ್ಮಾಣ ಮಾಡುತ್ತಾನೆ, ಈ ಕಾಡಿಗೆ ದೇವರ ಕಾಡು ಎಂದು ಹೆಸರು ಬರುತ್ತದೆ. ಒಂದು ಸಾರಿ ಇದೇ ಕಾಡಿನಲ್ಲಿ ಸಾಕ್ಷಾತ್ ಶಿವನು ಬೇಟೆಗೆ ಹೋದಾಗ ಶಿವನ ಕಣ್ಣಿಗೆ ಹಂದಿಗಳು ಮತ್ತು ಹಂದಿಯ ಮರಿಗಳು ಕಾಣಿಸುತ್ತವೆ. ಶಿವನನ್ನು ನೋಡಿ ದೊಡ್ಡ ದೊಡ್ಡ ಹಂದಿಗಳು ಪೊದೆಯ ಹಿಂದೆ ಅವಿತುಕೊಳ್ಳುತ್ತವೆ, ಆದರೆ ಚಿಕ್ಕ ಚಿಕ್ಕ ಹಂದಿಗಳು ಅಲ್ಲಿಯೇ ನಿಂತು ಶಿವನನ್ನು ನೋಡುತ್ತಾ ಇರುತ್ತವೆ.

ಆ ಹಂದಿಗಳನ್ನು ನೋಡಿ, ಅವುಗಳ ಮುಗ್ಧ ಸೌಂದರ್ಯಕ್ಕೆ ಮಾನಸೋಲುವ ಮಹಾಶಿವನು ಒಂದು ಹಂದಿ ಮರಿಯನ್ನು ಎತ್ತಿಕೊಂಡು ಬಂದು ತಮ್ಮ ಅರಮನೆಯ ಮುಂದೆ ಗೂಟ ಹಾಕಿ ಕಟ್ಟಿಹಾಕುತ್ತಾರೆ. ಹಂದಿ ಮರಿಯನ್ನು ಶಿವ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ, ಪಾರ್ವತಿ ದೇವಿ ಸಹ ಹಂದಿಯನ್ನು ಬಹಳ ಪ್ರೀತಿಯಿಂದ ತಮ್ಮ ಮಗುವಿನ ಹಾಗೆ ನೋಡಿಕೊಂಡು, ಹಂದಿಗೆ ತಿನ್ನಲು ಆಹಾರ ಕೊಡುತ್ತಿರುತ್ತಾರೆ. ಹೀಗೆ ಶಿವ ಮತ್ತು ಪಾರ್ವತಿಯ ಪ್ರೀತಿಯಲ್ಲಿ ಬೆಳೆದ ಹಂದಿ ಮರಿ, ದೊಡ್ಡದಾಗಿ ಪ್ರಾಯಾವಸ್ಥೆಗೆ ಬರುತ್ತದೆ. ಆಗ ಹಂದಿಯ ಕಣ್ಣಿಗೆ ಅರಮನೆ ಎದುರಿಗೆ ಇದ್ದ ಬಾಕಿಮಾರು ಗದ್ದೆಯನ್ನು ನೋಡುತ್ತದೆ, ಗದ್ದೆಯಲ್ಲಿ ಭತ್ತವು ಸುಂದರವಾಗಿ ಬೆಳೆದಿರುತ್ತದೆ.

ಭತ್ತದ ವಾಸನೆಯನ್ನು ಅರಿತು, ಅದನ್ನು ತಿನ್ನಬೇಕೆನ್ನುವ ಬಯಕೆಯಿಂದ ಹಂದಿಯು ತನಗೆ ಕಟ್ಟಿದ್ದ ಗೂಟವನ್ನು ಹೊಡೆದು ಹಾಕಿ ಬಿಡಿಸಿಕೊಂಡು ಗದ್ದೆಗೆ ಹೋಗುತ್ತದೆ, ಅಲ್ಲಿ ತನಗೆ ಬೇಕಾದಷ್ಟು ಭತ್ತದ ಬೆಳೆಯನ್ನು ತಿಂದು, ಉಳಿದ ಬೆಳೆಯನ್ನು ನಾಶ ಮಾಡುತ್ತದೆ. ಇದನ್ನು ನೋಡಿದ ಪಾರ್ವತಿ ದೇವಿ, ತಾವು ಬಹಳ ಕಷ್ಟಪಟ್ಟು ಸಂತೋಷದಿಂದ ಬೆಳೆಸಿದ ಬೆಳೆಯನ್ನು ತಾವೇ ಬೆಳೆಸಿದ ಹಂದಿ ನಾಶ ಮಾಡಿದೆ ಎಂದು ಕಣ್ಣೀರು ಹಾಕಲು ಶುರು ಮಾಡುತ್ತಾರೆ. ಇದನ್ನು ನೋಡಿದ ಶಿವನಿಗೆ ಹಂದಿಯ ಮೇಲೆ ಕೋಪ ಬರುತ್ತದೆ. ಕೋಪದಲ್ಲಿ ಶಿವನು ಬಾಣವನ್ನು ತೆಗೆದು ಹಂದಿಯ ಮೇಲೆ ಬಾಣ ಬಿಡುತ್ತಾರೆ. ಶಿವನು ಬಿಟ್ಟ ಬಾಣ ನೇರವಾಗಿ ಹಂದಿಗೆ ನಾಟುತ್ತದೆ, ಇದರಿಂದಾಗಿ ಹಂದಿ ನೋವಿನಲ್ಲಿ ಒದ್ದಾಡುತ್ತದೆ. ನೋವಿನ ನರಳಾಟದಲ್ಲಿ, ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ಹಂದಿ ಮರಿಯು ಅರಮನೆ ಮೆಟ್ಟಿಲ ಮೇಲೆ ತಲೆ ಇಟ್ಟು ನೋವಿನಲ್ಲಿ ಅಳುತ್ತಾ ಇರುತ್ತದೆ.

ಇದನ್ನು ನೋಡಿದ ಪಾರ್ವತಿ ದೇವಿಯ ಕೋಪ ಕರಗಿ ಕರುಣೆ ಮೂಡುತ್ತದೆ, ಹಂದಿಯನ್ನು ನೋಡಿ ಬೇಸರ ಪಟ್ಟು ಈಶ್ವರನ ಬಳಿಗೆ ಬಂದ ಪಾರ್ವತಿ ದೇವಿ, ನಾವೇ ಪ್ರೀತಿಯಿಂದ ಸಾಕಿದ ಹಂದಿಯನ್ನು ನಾವೇ ಕೊಲ್ಲುವುದು ಸರಿಯಲ್ಲ, ಹಂದಿಗೆ ಜೀವ ನೀಡಿ ಎಂದು ಶಿವನ ಬಳಿ ಹಠ ಮಾಡಿ ಕೇಳುತ್ತಾರೆ, ಹಂದಿಗೆ ಜೀವ ಕೊಡದೆ ಹೋದರೆ ತಾವು ಊಟ ಮಾಡುವುದಿಲ್ಲ ಮತ್ತು ಸ್ನಾನ ಮಾಡುವುದಿಲ್ಲ ಎಂದು ಪಾರ್ವತಿ ದೇವಿ ಹಠ ಮಾಡುತ್ತಾರೆ, ಆಗ ಶಿವನು ಪತ್ನಿಯ ಕೋಪಕ್ಕೆ ಸೋಲಲೇಬೇಕಾಗುತ್ತದೆ. ಹಂದಿಗೆ ಜೀವ ಕೊಡಲು ಒಪ್ಪುವ ಈಶ್ವರನು, ಒಂದು ಸಿರಿ, ಒಂದು ಆಲೆ ಬಂಗಾರ ಮತ್ತು ಒಂದು ಬೊಂಬೆ ಇಟ್ಟು ಹಂದಿಯ ದೇಹದಲಿ ಎಡಭಾಗವನ್ನು ಸವರುತ್ತಾರೆ, ಆಗ ಹಂದಿಯ ಎಡಭಾಗಕ್ಕೆ ಜೀವ ಬರುತ್ತದೆ, ನಂತರ ಬಲಭಾಗವನ್ನು ಸವರುತ್ತಾರೆ, ಆಗ ಬಲಭಾಗಕ್ಕೂ ಜೀವ ಬರುತ್ತದೆ..

ಜೀವ ಪಡೆದ ಹಂದಿ ಎದ್ದು ನಿಂತು, ನನಗೆ ಯಾಕೆ ಪುನರ್ಜನ್ಮ ಕೊಟ್ರಿ ಎಂದು ಕೇಳುತ್ತದೆ. ಈಗ ಭೂಲೋಕದಲ್ಲಿ ಅಧರ್ಮವೇ ಹೆಚ್ಚಾಗಿ ನಡೆಯುತ್ತಿದೆ, ಅಲ್ಲಿ ಅನ್ಯಾಯ ಮಾಡುತ್ತಿರುವ ದುಷ್ಟರಿಗೆ ಶಿಕ್ಷೆ ಕೊಡಬೇಕು, ಹಾಗಾಗಿ ಭೂಲೋಕಕ್ಕೆ ನಿನ್ನನ್ನು ಮಾಯಾರೂಪದಲ್ಲಿ ಕಳಿಸುತ್ತೇವೆ, ಇನ್ನುಮುಂದೆ ನಿನ್ನ ಹೆಸರು ಗಣ ಮಣಿ, ಈಗ ನೀನು ಭೂಲೋಕಕ್ಕೆ ಹೋಗಿ ಧರ್ಮವನ್ನು ಉಳಿಸಬೇಕು ಎಂದು ಸಾಕ್ಷಾತ್ ಶಿವನು ವರಪ್ರಧಾನ ಮಾಡುತ್ತಾರೆ. ಈ ರೀತಿಯಾಗಿ ಈಶ್ವರನ ವರ ಪಡೆದ ಗಣ ಮಣಿ ಭೂಲೋಕಕ್ಕೆ ಬರುತ್ತದೆ, ಅದು ಬಂದು ಮೊದಲಿಗೆ ಇಳಿದದ್ದು ಕುಕ್ಕೇನಾಡಿನಲ್ಲಿ, ಆ ಸ್ಥಳ ಈಗಿನ ಕುಕ್ಕೆ ಸುಬ್ರಹ್ಮಣ್ಯ, ಸುಬ್ರಹ್ಮಣ್ಯಕ್ಕೆ ಬಂದ ಗಣವಣಿ ಕುಮಾರಧಾರೆಯಲ್ಲಿ ಸ್ನಾನ ಮಾಡಿ, ನೆಲ್ಯಾಡಿ ಬೀಡಿಗೆ ಬರುತ್ತದೆ, ಇದು ಇರುವುದು ಧರ್ಮಸ್ಥಳದಲ್ಲಿ.

ಅಲ್ಲಿ ಅಮ್ಮ ಬಳ್ಳಾಲ್ತಿ ಅವರ ಪತಿಗೆ ಒಂದು ರೋಗ ಬಂದಿರುತ್ತದೆ, ಅದರಿಂದ ಅವರು ಕಣ್ಣೀರು ಹಾಕುತ್ತಿರುತ್ತಾರೆ. ಅವರನ್ನು ನೋಡಿದ ಗಣ ಮಣಿ ನಿಮ್ಮ ಕಣ್ಣೀರಿಗೆ ಕಾರಣ ಏನು, ನಿಮಗೆ ಆಗಿರುವ ನೋವೇನು ಎಂದು ಕೇಳುತ್ತಾರೆ, ಆಗ ಅಮ್ಮ ಬಳ್ಳಾಲ್ತಿ ಅವರು ತಮ್ಮ ಗಂಡನಿಗೆ ಬಂದಿರುವ ರೋಗದ ಬಗ್ಗೆ ಹೇಳುತ್ತಾರೆ, ಆಗ ಗಣ ಮಣಿಯು ಅಮ್ಮ ಚಿಂತೆ ಮಾಡಬೇಡಿ, ನಾನು ಕೈಲಾಸದಿಂದ ಬರುವಾಗ ಗಿಡಮೂಲಿಕೆಗಳನ್ನು ತಂದಿದ್ದೇನೆ, ಅದನ್ನು ನಿಮ್ಮ ಗಂಡನಿಗೆ ಹಚ್ಚಿದರೆ ಮೊದಲಿನ ಹಾಗೆ ಆಗುತ್ತಾರೆ, ಚಿಂತೆ ಮಾಡಬೇಡಿ ಎಂದು ಹೇಳಿ, ಆ ಗಿಡಮೂಲಿಕೆಗಳನ್ನು ಅಮ್ಮ ಬಳ್ಳಾಲ್ತಿ ಅವರಿಗೆ ಕೊಡುತ್ತದೆ. ಇದರಿಂದ ಅಮ್ಮ ಬಳ್ಳಾಲ್ತಿ ಅವರ ಗಂಡ ಬೀರ್ಮಣ್ಣ ಪೆರ್ಗಡಿ ಗುಣವಾಗಿ ಮೊದಲಿನ ಹಾಗೆಯೇ ಆಗುತ್ತಾರೆ.

ಇದರಿಂದ ಅಮ್ಮು ಬಳ್ಳಾಲ್ತಿ ಅವರು ಸಂತೋಷವಾಗಿ ನಿನ್ನ ಹೆಸರೇನು ಕುಮಾರ ಎಂದು ಕೇಳುತ್ತಾರೆ, ಆಗ ಗಣ ಮಣಿ, ಕೈಲಾಸದಲ್ಲಿ ಈಶ್ವರ ದೇವರು ನನಗೆ ಗಣ ಮಣಿ ಎಂದು ಹೆಸರು ಕೊಟ್ಟಿದ್ದಾರೆ, ಭೂಲೋಕದಲ್ಲಿ ನನಗೆ ಹೆಸರಿಲ್ಲ, ನೀವು ನನ್ನ ಅನ್ನ ಹಾಕಿ ತಾಯಿ ಸ್ಥಾನದಲ್ಲಿ ಇದ್ದೀರಿ, ನಿಮ್ಮ ಪತಿಯವರು ತಂದೆ ಸ್ತಾನದಲ್ಲಿದ್ದಾರೆ, ನೀವು ನನ್ನನ್ನು ಅಣ್ಣಪ್ಪ ಎಂದು ಕರೆಯಬಹುದು ಎಂದು ಹೇಳುತ್ತದೆ, ಅಂದಿನಿಂದ ಗಣ ಮಣಿಯ ಹೆಸರು ಅಣ್ಣಪ್ಪ ಪಂಜುರ್ಲಿ ಎಂದು ಹೆಸರುವಾಸಿಯಾಗುತ್ತದೆ. ಈಗಲೂ ಧರ್ಮಸ್ಥಳದಲ್ಲಿ ಅಣ್ಣಪ್ಪ ಪಂಜುರ್ಲಿಗೆ ವಿಶೇಷವಾದ ಸ್ಥಾನ ಮಾನ ಇದೆ.

ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ನೆಲೆಸಲು, ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದೇವಸ್ಥಾನ ನಿರ್ಮಾನವಾಗಲು ಪಂಜುರ್ಲಿಯ ಪ್ರೇರಣೆಯೇ ಕಾರಣ ಎಂದು ಹೇಳುತ್ತಾರೆ. ಧರ್ಮದಲ್ಲಿ, ವಜ್ರ, ವೈಡೂರ್ಯ ಎಲ್ಲವೂ ಬಂದರೆ ಅದು ಮಂಜುನಾಥ ಸ್ವಾಮಿಗೆ ಇರಲಿ, ಹಿಡಿ ಕಾಣಿಕೆ ಬಂದರೆ ನನಗೆ ಇರಲಿ, 70 ಮೆಟ್ಟಿಲುಗಳ ಬೆಟ್ಟ ಏರಿ ನಾನು ನಿಲ್ಲುತ್ತೇನೆ, ಧರ್ಮವನ್ನು ನಡೆಸಿಕೊಂಡು ಬನ್ನಿ ಎನ್ನುವ ಮಾತನ್ನು ಅಣ್ಣಪ್ಪ ಅಲ್ಲಿನ ಜನರಿಗೆ ಕೊಡುತ್ತಾನೆ. ಇದರಿಂದಲೇ ಧರ್ಮಸ್ಥಳದಲ್ಲಿ 70 ಮೆಟ್ಟಿಲುಗಳ ಮೇಲೆ ಪಂಜುರ್ಲಿಯ ದೇವಸ್ಥಾನ ಕಟ್ಟಲಾಗಿದೆ. ಈ ರೀತಿಯಾಗಿ ಧರ್ಮಸ್ಥಳದಲ್ಲಿ ನೆಲೆಸಿದ ಈ ದೈವ ಶಕ್ತಿಯು ಮುಂದಿನ ಸಮಯದಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಬೇರೆ ಬೇರೆ ಹೆಸರುಗಳನ್ನು ಪಡೆದುಕೊಳ್ಳುತ್ತದೆ.

ಅಂಗಣ ಪಂಜುರ್ಲಿ, ವಂಗನ ಪಂಜುರ್ಲಿ, ಬಗ್ಗು ಪಂಜುರ್ಲಿ, ತೇಂಬಯಲು ಪಂಜುರ್ಲಿ, ವರ್ತೆ ಪಂಜುರ್ಲಿ, ಉಪ್ಪೇಟ್ಟು ಪಂಜುರ್ಲಿ, ಗೊಳಿದಡಿ ಪಂಜುರ್ಲಿ, ಮೋಳ್ಯಲ ಪಂಜುರ್ಲಿ, ಮಳಾರ ಪಂಜುರ್ಲಿ, ಬೆಂದೂರ ಪಂಜುರ್ಲಿ, ಪಾಂಜೈ ಪಂಜುರ್ಲಿ, ಬೈಕಾಡದಿ ಪಂಜುರ್ಲಿ, ಬತ್ತಿ ಪಂಜುರ್ಲಿ, ಬಲ್ಲೆಗೂಡು ಪಂಜುರ್ಲಿ, ಕದ್ರಿ ಪಂಜುರ್ಲಿ, ಕುಕ್ಕೆ ಪಂಜುರ್ಲಿ, ಕಾಂತಾವರ ಪಂಜುರ್ಲಿ, ಆಮ್ಬದಾಡ ಪಂಜುರ್ಲಿ, ಈ ರೀತಿಯಾಗಿ ಬೇರೆ ಬೇರೆ ಹೆಸರಿನಲ್ಲಿ ಪಂಜುರ್ಲಿ ದೈವವನ್ನು ಭಕ್ತಿಯಿಂದ ಬೇರೆ ಬೇರೆ ಬೇರೆ ಹೆಸರಿನಲ್ಲಿ ಪೂಜೆ ಮಾಡಲಾಗುತ್ತದೆ. ತುಳುನಾಡಿನ ಮನೆಗೆಳಲ್ಲಿ ಪಂಜುರ್ಲಿ ದೈವಕ್ಕೆ ಪ್ರಧಾನ ಸ್ಥಾನ ಕೊಡಲಾಗಿದೆ. ಈ ದೈವಕ್ಕೆ ನಡೆಯುವ ಕೋಲದಲ್ಲಿ ಹಲವು ವಿಷಯಗಳನ್ನು ಇತ್ಯರ್ಥ ಮಾಡುತ್ತಾರೆ.

ತುಳುನಾಡು ಕುಟುಂಬದ ಅನೇಕ ವಿಚಾರಗಳನ್ನು ಈ ದೈವದ ಎದುರು ಬಂದು ಬಗೆಹರಿಸಿಕೊಳ್ಳುತ್ತಾರೆ. ಪಂಜುರ್ಲಿ ದೈವ ಹೇಳುವ ಮಾತುಗಳನ್ನು, ಆಜ್ಞೆಗಳನ್ನು ಪಾಲನೆ ಮಾಡುತ್ತಾರೆ. ದೈವದ ಮಾತಿಗೆ ತಪ್ಪಿ ಇವರು ಯಾವ ಕೆಲಸ ಮಾಡೋದಿಲ್ಲ, ಹಾಗೊಂದು ವೇಳೆ ಮಾಡಿದರೆ, ಅವರಿಗೆ ತಕ್ಕ ಶಿಕ್ಷೆ ಆಗಿರುವ ಉದಾಹರಣೆಗಳು ಸಹ ಇದೆ. ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವದ ಶಕ್ತಿಯನ್ನ ತೋರಿಸಲಾಗಿದೆ, ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಹಾಡು ಬರುತ್ತದೆ, ವರಾಹ ರೂಪ ಎಂದರೆ ಹಂದಿಯ ರೂಪದ ದೈವ, ಕಾಂತಾರ ಸಿನಿಮಾದಲ್ಲಿ ಹಂದಿಯನ್ನು ಕೂಡ ತೋರಿಸಲಾಗಿದೆ. ಮತ್ತೊಂದು ವಿಚಾರ ಏನೆಂದರೆ, ಈ ಕಥೆಯನ್ನು ತುಳು ನಾಡಿನ ಬೇರೆ ಬೇರೆ ಭಾಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ಹೇಳುತ್ತಾರೆ, ಅವುಗಳಲ್ಲಿ ಒಂದು ರೀತಿಯಲ್ಲಿ ಕಥೆಯನ್ನು ನಿಮಗೆ ತಿಳಿಸಿದ್ದೇವೆ. ಇದು ತುಳುನಾಡಿನ ಪ್ರಧಾನ ದೈವವಾದ ಪಂಜುರ್ಲಿ ದೈವದ ಕಥೆ ಆಗಿದೆ.

ಈ ಲೇಖನದಲ್ಲಿ ಬರೆದಿರುವ ಸಂಪೂರ್ಣ ಮಾಹಿತಿಯನ್ನು ವಿವಿಧ ಆನ್ಲೈನ್ ಮೂಲಗಳಿಂದ ತೆಗೆದುಕೊಳ್ಳಲಾಗಿದ್ದು, ಕೆಲವೊಂದು ಪೌರಾಣಿಕ ಮಾಹಿತಿಗಳು ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಆದರೆ ಇದರಲ್ಲಿ ಯಾವುದೇ ನಂಬಿಕೆಗಳನ್ನು ಪ್ರಶ್ನಿಸುವ ಕೆಲಸವಾಗಲಿ ಅಥವಾ ಅಗೌರವ ತೋರಿಸುವ ಉದ್ದೇಶವಾಗಲಿ ಇರುವುದಿಲ್ಲ. ಇನ್ನು ಈ ಮಾಹಿತಿಯನ್ನು ಬಹು ಮುಖ್ಯವಾಗಿ ಚರಿತ್ರೆ ಎನ್ನುವ ಯೌಟ್ಯೂಬ್ ಚಾನೆಲ್ ನಿಂದ ಸಂಗ್ರಹ ಮಾಡಿದ್ದು, ಈ ಚಾನೆಲ್ ಹಲವಾರು ವರ್ಷಗಳಿಂದ ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಾ, ಬಹು ಮುಖ್ಯವಾದ ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಧನ್ಯವಾದಗಳು ಚರಿತ್ರೆ ತಂಡ.