ಬ್ಯಾಚುಲರ್ ಗಳೂ ಮಾಡಿಕೊಳ್ಳಬಹುದಾದ ಸುಲಭ ರೆಸಿಪಿ; ರುಬ್ಬೋದು ಬೇಡ ಬೇಯಿಸೋದೂ ಬೇಡ ಈ ಬದನೆಕಾಯಿ ಮೊಸರು ಬಜ್ಜಿಗೆ. ಹೇಗೆ ಗೊತ್ತೇ??
ಬ್ಯಾಚುಲರ್ ಗಳೂ ಮಾಡಿಕೊಳ್ಳಬಹುದಾದ ಸುಲಭ ರೆಸಿಪಿ; ರುಬ್ಬೋದು ಬೇಡ ಬೇಯಿಸೋದೂ ಬೇಡ ಈ ಬದನೆಕಾಯಿ ಮೊಸರು ಬಜ್ಜಿಗೆ. ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಯಾರಿಗೆ ಬದನಾಕಾಯಿ ಇಷ್ಟವಿಲ್ಲವೋ ಅಂಥವರೂ ಕೂಡ ಈ ರೆಸಿಪಿಯನ್ನ ಇಷ್ಟಪಟ್ಟೆಪಡುತ್ತಾರೆ. ಅಷ್ಟು ರುಚಿಕರವಾದ ಹಾಗೂ ತಕ್ಷಣವೇ ಮಾಡಿಕೊಳ್ಳಬಹುದಾದ ಅಡುಗೆ ಇದು. ಒಂದು ಬದನೆಕಾಯಿ ಇದ್ರೆ ಸಾಕು ಆ ದಿನದ ಊಟಕ್ಕೆ ಒಂದೊಳ್ಳೆ ರೆಸಿಪಿ ಮಾಡಿಯೇಬಿಡಬಹುದು. ಆರೊಗ್ಯಕರವೂ ಆದ, ರುಚಿಯೂ ಆಗಿರುವ ಬದನೆಕಾಯಿ ಮೊಸರು ಬಜ್ಜಿ ಮಾಡೋದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ಹೇಳ್ತಿವಿ ಮುಂದೆ ಓದಿ.
ಬದನೆಕಾಯಿ ಮೊಸರು ಬಜ್ಜಿ ಮಾಡಲು ಬೇಕಾಗಿರುವ ಸಾಮಗ್ರಿಗಳು: ಒಂದು ಬದನೆಕಾಯಿ (ಉದ್ದದ ನೇರಳೇ ಬಣ್ಣದ ಬದನೆ ಕಾಯಿ ತೆಗೆದುಕೊಳ್ಳಿ, ಹಸಿರು ಬಣ್ಣದ ದೊಡ್ದ ಗಾತ್ರದ ಬದನೆ ಕಾಯಿಯನ್ನೂ ಕೂಡ ಬಳಸಬಹುದು), ಮೊಸರು ಒಂದು ಕಪ್, ಹಸಿಮೆಣಸಿನ ಕಾಯಿ ೨, ಶುಂಠಿ ಸ್ವಲ್ಪ, ಒಗ್ಗರಣೆಗೆ ತುಪ್ಪ ಅಥವಾ ಎಣ್ಣೆ ಅರ್ಧ ಚಮಚ, ಸಾಸಿವೆ ಅರ್ಧ ಚಮಚ, ಕರಿಬೇವು ೫ ಎಲೆಗಳಷ್ಟು, ಒಂದು ಒಣಮೆಣಸು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲಿಗೆ ಬದನೆಕಾಯಿಯನ್ನು ಗ್ಯಾಸ್ ಮೇಲಿಟ್ಟು ಸುಡಬೇಕು. ಕೆಂಡದ ಮೇಲೆಯೂ ಸುಡಬಹುದು ಹಾಳಾಗದ ಬದನೆಕಾಯಿಯನ್ನು ನೋಡಿ ಬಳಸಿ. ಬದನೆಕಾಯಿ ಸುಟ್ಟ ನಂತರ ಸ್ವಲ್ಪ ಆರಲು ಬಿಡಿ. ನಂತರ ಬದನೆಕಾಯಿಯ ಮೇಲಿನ ಸಿಪ್ಪೆಯನ್ನು ತೆರೆಯಿರಿ. ಅದರ ಬುಡವನ್ನೂ ಕತ್ತರಿಸಿ. ಈಗ ಸಿಪ್ಪೆ ಸುಲಿದ ಬದನೆಕಾಯಿಯನ್ನು ಒಂದು ಪಾತ್ರೆಗೆ ಹಾಕಿ ಮ್ಯಾಶ್ ಮಾಡಿಕೊಳ್ಳಿ. ಕೈಯಲ್ಲಿ ಹಿಸುಕಲೂಬಹುದು. ನಂತರ ಒಂದು ಪಾತ್ರೆಗೆ ಒಂದು ಕಪ್ ಮೊಸರನ್ನು ಹಾಕಿ. ಇದಕ್ಕೆ ಹಸಿಮೆಣಸು ಹಾಗೂ ಶುಂಠಿಯನ್ನು ಜಜ್ಜಿ ಹಾಕಿ. ನಂತರ ಸುಟ್ಟು ಮ್ಯಾಶ್ ಮಾಡಿ ಇಟ್ತುಕೊಂಡ ಮೊಸರನ್ನು ಸೇರಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಕೊನೆಯಲ್ಲಿ ಒಂದು ಒಗ್ಗರಣೆ. ಸಣ್ಣ ಬಾಣಲೆಗೆ ಅರ್ಧ ಚಮಚ ತುಪ್ಪ ಅಥವಾ ಅಡುಗೆ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಕೂಡಲೆ ಅದಕ್ಕೆ ಸಾಸಿವೆ, ಕರಿಬೇವು ಹಾಗೂ ಒಣ ಮೆಣಸನ್ನು ಹಾಕಿ ಸಾಸಿವೆ ಸಿಡಿದ ಕೂಡಲೇ ಮೊಸರು ಬಜ್ಜಿಗೆ ಸೇರಿಸಿ. ಇಷ್ಟು ಮಾಡಿದರೆ ಅತ್ಯಂತ ರುಚಿಕರವಾದ ಬದನೆಕಾಯಿ ಮೊಸರು ಬಜ್ಜಿ ಸವಿಯಲು ಸಿದ್ದ. ಇದನ್ನು ಅನ್ನ, ಚಪಾತಿಯ ಜೊತೆ ಸವಿಯಬಹುದು.