ಆಡಂಬರದ ಪೂಜೆ ಮಾಡಿ ಬೀಗುತ್ತಿದ್ದ ಅರ್ಜುನನಿಗೆ ಬುದ್ದಿ ಕಲಿಸುವ ಮೂಲಕ ಕೃಷ್ಣ ನಮಗೆಲ್ಲರಿಗೂ ಜೀವನ ಪಾಠ ನೀಡಿದ್ದು ಹೇಗೆ ಗೊತ್ತಾ?

ಆಡಂಬರದ ಪೂಜೆ ಮಾಡಿ ಬೀಗುತ್ತಿದ್ದ ಅರ್ಜುನನಿಗೆ ಬುದ್ದಿ ಕಲಿಸುವ ಮೂಲಕ ಕೃಷ್ಣ ನಮಗೆಲ್ಲರಿಗೂ ಜೀವನ ಪಾಠ ನೀಡಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇಂದು ನಾವು ದೇವರ ಪೂಜೆಯ ಕುರಿತು ಮಾತನಾಡಲು ಹೊರಟಿದ್ದೇವೆ. ಶ್ರೀಕೃಷ್ಣ ಹಾಗೂ ಅರ್ಜುನ ನಡುವೆ ನಡೆದ ಈ ಘಟನೆ ಖಂಡಿತ ನಮಗೆಲ್ಲರಿಗೂ ಒಂದು ಮಹತ್ವದ ಜೀವನ ಪಾಠ ನೀಡುವುದು ಖಚಿತ, ಇದರಲ್ಲಿ ಎರಡು ಮಾತಿಲ್ಲ. ಹೌದು ಸ್ನೇಹಿತರೇ ಒಮ್ಮೆ ಅರ್ಜುನನಿಗೆ ಅಹಂ ಹೆಚ್ಚಾದಾಗ ಶ್ರೀಕೃಷ್ಣನು ಅರ್ಜುನನಿಗೆ ಪಾಠ ಕಲಿಸಿ ಅಹಂ ತಗ್ಗಿಸಲು ತಾನೇ ಸ್ವತಹ ಅರ್ಜುನನಿಗೆ ಕಣ್ಣ ಮುಂದೆ ಉದಾಹರಣೆಯೊಂದಿಗೆ ನೀಡಿದ ಪಾಠ ಇದಾಗಿದೆ. ಸ್ನೇಹಿತರೇ ಮಹಾ ಭಾರತ ಯುದ್ಧ ಮುಗಿದ ಮೇಲೆ ಕೌರವರು ಹಾಗೂ ಕೌರವರ ಪರವಾಗಿ ಭಾಗವಹಿಸಿದ್ದ ಎಲ್ಲಾ ರಾಜ್ಯಗಳು ಸೋಲನ್ನು ಕಾಣುತ್ತವೆ, ಕುರುಕ್ಷೇತ್ರದಲ್ಲಿ ಪಾಂಡವರ ವಿಜಯದ ಬಾವುಟ ಹಾರಾಡುತ್ತಿದೆ. ಯುದ್ಧ ಮುಗಿದ ಕೆಲವು ದಿನಗಳ ಬಳಿಕ ಯುಧಿಷ್ಠಿರನು ಹಸ್ತಿನಾಪುರದ ರಾಜನಾಗುತ್ತಾನೆ‌.

ಮತ್ತೊಂದೆಡೆ ಇಡೀ ಪಾಂಡವರ ಕುಟುಂಬ ಸಂತೋಷದಲ್ಲಿ ಮುಳುಗಿರುತ್ತದೆ. ಹೀಗೆ ಹಲವಾರು ದಿನಗಳು ಕಳೆದ ಬಳಿಕ ಅರ್ಜುನನಿಗೆ ಇನ್ನೂ ಇಡೀ ನನ್ನ ರಾಜ್ಯದಲ್ಲಿ ಶಾಂತಿ ನೆಲೆಸಲಿದೆ, ನಮ್ಮ ವಿರುದ್ಧ ಯುದ್ಧ ಮಾಡಲು ಯಾರೂ ಮುಂದಾಗುವುದಿಲ್ಲ. ಅಸಲಿಗೆ ಯುದ್ಧ ಮಾಡುವವರು ಯಾರು ಉಳಿದೇ ಇಲ್ಲ, ತಾನೇ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರನ್ನು ಗೆಲ್ಲಿಸಿದ್ದೇನೆ ಎಂದು ಆಲೋಚಿಸಲು ಆರಂಭಿಸುತ್ತಾನೆ. ತಾನಿಲ್ಲದೇ ಪಾಂಡವರು ಕೌರವರ ವಿರುದ್ಧ ಗೆಲುವು ಸಾಧಿಸಲು ಸಾಧ್ಯವೇ ಇರಲಿಲ್ಲ, ನಾನು ಮಹಾ ಶಿವನಿಂದ ಪಡೆದುಕೊಂಡ ಪಾಶುಪತಾಸ್ತ್ರ ಬಳಸಿಕೊಂಡು ಮಹಾ ಭಾರತ ಯುದ್ಧದಲ್ಲಿ ನಾವು ಜಯಗಳಿಸಿದ್ದೇವೆ. ಆದ್ದರಿಂದ ವಿಶೇಷ ರೀತಿಯಲ್ಲಿ ಮಹಾ ಶಿವನಿಗೆ ಗೌರವ ಸಲ್ಲಿಸಬೇಕು ಎಂದು ಆಲೋಚನೆ ಮಾಡಿ ಮಹಾ ಶಿವನಿಗೆ ಪೂಜೆ ಆರಂಭಿಸುತ್ತಾನೆ. ಪ್ರತಿದಿನವೂ ಸಾಕಷ್ಟು ಪೂಜಾ ಸಾಮಗ್ರಿಗಳನ್ನು ಬಳಸಿಕೊಂಡು, ದೊಡ್ಡ ದೊಡ್ಡ ಬಂಡಿಗಳಲ್ಲಿ ಹೂವುಗಳನ್ನು ತರಿಸಿಕೊಂಡು ಮಹಾ ಶಿವನ ಪೂಜೆ ಆರಂಭಿಸುತ್ತಾನೆ.

ನನಗೆ ಪಾಶುಪತಾಸ್ತ್ರ ನೀಡಿದ್ದು ಮಹಾಶಿವ ಆದ್ದರಿಂದ ಮತ್ತಷ್ಟು ಅವನನ್ನು ಮೆಚ್ಚಿಸಬೇಕು, ಆತನು ನೀಡಿದ ಶಸ್ತ್ರಾಸ್ತ್ರದಿಂದ ನಾನು ಇಡೀ ಪಾಂಡವ ಸೇನೆಯನ್ನು ಗೆಲ್ಲುವಂತೆ ಮಾಡಿದ್ದೇನೆ ಎಂದು ಪ್ರತಿ ದಿನವೂ ಬಹಳ ವಿಜೃಂಭಣೆಯಿಂದ ಕರ್ಪೂರ, ಊದುಬತ್ತಿ ಹೀಗೆ ಗಣನೀಯ ಪ್ರಮಾಣದಲ್ಲಿ ಪೂಜಾ ಸಾಮಗ್ರಿಗಳನ್ನು ಬಳಸಿಕೊಂಡು ಪೂಜೆ ಮಾಡುತ್ತಿರುತ್ತಾನೆ. ಇನ್ನು ಅರ್ಜುನನ ಸೇವಕರು ಅರ್ಜುನ ಪೂಜೆಗೆ ಕುಳಿತಿದ್ದಾನೆ ಎಂದರೆ ವಸ್ತುಗಳನ್ನು ಸಾಗಿಸುವ ಹೊತ್ತಿಗೆ ಸಂಪೂರ್ಣ ಶಕ್ತಿ ಕಳೆದುಕೊಂಡು, ದಣಿವಾಗುತ್ತಿದ್ದರು. ಯಾಕೆಂದರೆ ಅಷ್ಟು ಪೂಜಾಸಾಮಗ್ರಿಗಳನ್ನು ಅರ್ಜುನ ಪೂಜೆಯಲ್ಲಿ ಬಳಸುತ್ತಿದ್ದನು. ಇಡೀ ಪಾಂಡವ ರಾಜ್ಯದಲ್ಲಿ ಅರ್ಜುನನ ಪೂಜೆಯದ್ದೇ ಮಾತು, ಎಲ್ಲಿ ನೋಡಿದರೂ ಅರ್ಜುನನು ಈ ರೀತಿ ಪೂಜೆ ಮಾಡುತ್ತಿದ್ದಾನೆ ಆ ರೀತಿ ಪೂಜೆ ಮಾಡುತ್ತಿದ್ದಾನೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಇದನ್ನು ಕಂಡ ಅರ್ಜುನ ಮತ್ತಷ್ಟು ವಿಜೃಂಭಣೆಯಿಂದ ಪೂಜೆ ಮಾಡಲು ಆರಂಭಿಸಿದನು.

ಪ್ರತಿ ದಿನವೂ ಅರ್ಜುನನ ಪೂಜೆಯ ಆಡಂಬರ ಹೆಚ್ಚಾಗುತ್ತಾ ಹೋಗುತ್ತಿತ್ತು. ಇನ್ನು ಇದೇ ಸಮಯದಲ್ಲಿ ಭೀಮನು ಯಾವುದೇ ರೀತಿಯ ವಿಜೃಂಭಣೆಯ ಪೂಜೆಯನ್ನು ಮಾಡುತ್ತಿರಲಿಲ್ಲ, ಕೇವಲ ಆಹಾರ ಸೇವಿಸುವ ಮುನ್ನ ಕೆಲವು ನಿಮಿಷಗಳ ಕಾಲ ಕಣ್ಣು ಮುಚ್ಚಿ ದ್ಯಾನ ಮಾಡಿ ಓಂ ನಮಃ ಶಿವಾಯ ಎಂದು ಪಟಿಸುತ್ತಿದ್ದನು. ಇದನ್ನು ಕಂಡ ಅರ್ಜುನ ನಕ್ಕು, ತಿರಸ್ಕಾರದ ನಗುವಿನಿಂದ ಇದು ಒಂದು ಪೂಜೆಯೇ ಎಂದುಕೊಂಡ. ಹಸ್ತಿನಾಪುರದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಘಟನೆಗಳು ಶ್ರೀ ಕೃಷ್ಣನಿಗೆ ತಿಳಿಯುತ್ತಿದ್ದವು, ಜಗತ್ ಪಾಲಕನಾದ ಶ್ರೀ ಕೃಷ್ಣನಿಗೆ ಅರ್ಜುನನಲ್ಲಿ ಮೂಡಿರುವ ಅಹಂ ಕಡಿಮೆ ಮಾಡಬೇಕು ಎಂದು ತಿಳಿಯಿತು. ಕೂಡಲೇ ತಡ ಮಾಡದೆ ಹಸ್ತಿನಾಪುರಕ್ಕೆ ಭೇಟಿ ನೀಡಿದ ಕೃಷ್ಣನು ಒಂದು ದಿನ ಅಲ್ಲೇ ತಂಗಲು ನಿರ್ಧಾರ ಮಾಡಿದನು.

ಇನ್ನು ಅರ್ಜುನನು ಎಂದಿನಂತೆ ತನ್ನ ಪೂಜೆ ಮಾಡತೊಡಗಿದಾಗ ಕೃಷ್ಣನು ಪೂಜೆಯನ್ನು ನೋಡುತ್ತಾ ಕುಳಿತನು, ಪೂಜೆಯೆಲ್ಲಾ ಮುಗಿದ ಮೇಲೆ ಕೃಷ್ಣನು ವ್ಹಾ ಭಲೇ ಅರ್ಜುನ, ನಿನ್ನ ಪೂಜೆಯನ್ನು ನೋಡಿ ನನಗೆ ಇನ್ನಿಲ್ಲದ ಸಂತೋಷವಾಗುತ್ತಿದೆ. ಅಸಲಿಗೆ ಮಹಾ ಶಿವನನ್ನು ಹೇಗೆ ಒಲಿಸಿ ಕೊಳ್ಳಬೇಕು ಎಂಬುದನ್ನು ನಿನ್ನನ್ನು ನೋಡಿ ಕಲಿಯಬೇಕು ಅಲ್ಲವೇ ಎಂದು ಪ್ರಶ್ನೆ ಮಾಡುತ್ತಾನೆ. ಈ ಪ್ರಶ್ನೆಗೆ ಉತ್ತರಿಸಿದ ಅರ್ಜುನನು ಹೌದು ಶ್ರೀ ಕೃಷ್ಣ, ಆತನು ಮಹಾ ಶಿವ ಆತನ ಗೌರವಕ್ಕೆ ತಕ್ಕಂತೆ ಅದೇ ರೀತಿ ನಾವು ಪೂಜೆ ಮಾಡಬೇಕು. ಭೀಮನನ್ನು ನೋಡು ಓಂ ನಮಃ ಶಿವಾಯ ಎಂಬ ಧ್ಯಾನದಿಂದ ತನ್ನ ಪೂಜೆ ಮುಗಿಸುತ್ತಾನೆ. ಆ ರೀತಿಯ ಪೂಜೆ ಮಹಾ ಶಿವನಿಗೆ ಸಾಕಾಗುವುದಿಲ್ಲ, ಅದು ಒಂದು ಪೂಜೆಯೇ ಎಂದು ಕೃಷ್ಣನಿಗೆ ಉತ್ತರ ನೀಡಿದನು.

ಅರ್ಜುನನ ಉತ್ತರ ಕೇಳಿ, ಶ್ರೀ ಕೃಷ್ಣನು ಅರ್ಜುನನ ಮನೋಭಾವನೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು, ಅಹಂ ಕಡಿಮೆ ಮಾಡಲು ಓ ಅರ್ಜುನ ನೀನು ಮಹಾ ಶಿವನನ್ನ ನೋಡಿ ತುಂಬಾ ದಿನ ಆಗಿರಬೇಕು ಅಲ್ಲವೇ ಎಂದನು. ಅರ್ಜುನನು ಹೌದು ಎಂದು ಉತ್ತರಿಸಿದನು. ಅರ್ಜುನ ಉತ್ತರ ನೀಡಿದ ಕೂಡಲೇ ಶ್ರೀ ಕೃಷ್ಣನು ನಾನು ಮಹಾ ಶಿವನನ್ನು ಭೇಟಿಯಾಗಿ ಬಹಳ ದಿನಗಳೇ ಕಳೆಯಿತು, ಬಾ ನಾವಿಬ್ಬರೂ ಒಟ್ಟಾಗಿ ಕೈಲಾಸ ಪರ್ವತಕ್ಕೆ ತೆರಳಿ ಮಹಾ ಶಿವನ ಭೇಟಿ ಮಾಡಿ ಬರೋಣ ಎಂದು ಹೇಳಿದನು. ಶ್ರೀಕೃಷ್ಣ ಕರೆದ ಕೂಡಲೇ ಅರ್ಜುನನು ಕೂಡ ಒಪ್ಪಿಕೊಂಡು ಇಬ್ಬರು ಕೈಲಾಸದ ದಾರಿ ಹಿಡಿದರು.

ಕೈಲಾಸ ಪರ್ವತ ಹತ್ತಿರ ಬರುತ್ತಿದ್ದಂತೆ, ಒಬ್ಬ ಮನುಷ್ಯ ಹೂಗಳ ರಾಶಿಯನ್ನು ತುಂಬಿಕೊಂಡು ಬಂದು ಒಂದು ಕಂದಕಕ್ಕೆ ಸುರಿಯುತ್ತಿದ್ದ, ಈ ಮನುಷ್ಯನಿಗಿಂತ ಇನ್ನೂ ಹಲವಾರು ಜನ ಹೂವುಗಳ ರಾಶಿಯ ಗಾಡಿಗಳನ್ನು ಹಿಡಿದುಕೊಂಡು ಈತನ ಸರದಿ ಮುಗಿಯಲು ಕಾಯುತ್ತಿದ್ದರು ಎಲ್ಲರೂ ಕೂಡ ಹೂವುಗಳನ್ನು ಸುರಿಯಲು ಬಂದಿದ್ದರು. ಇದನ್ನು ಕಂಡ ಅರ್ಜುನ ಮತ್ತು ಕೃಷ್ಣ ಕೆಲವು ಕ್ಷಣಗಳ ಕಾಲ ಅದನ್ನೇ ನೋಡುತ್ತಾ ನಿಂತರು, ಒಂದಾದ ಮೇಲೆ ಒಂದು ಗಾಡಿಗಳು ಬಂದು ಹೂಗಳನ್ನು ಸುರಿದು ವಾಪಸ್ಸು ಹೋಗುತ್ತಿದ್ದವು. ಇದನ್ನು ಕಂಡು ಅರ್ಜುನ ಮತ್ತು ಕೃಷ್ಣ ಇಬ್ಬರಿಗೂ ಬಹಳ ಆಶ್ಚರ್ಯವಾಯಿತು, ಶ್ರೀ ಕೃಷ್ಣನು ಇದನ್ನು ಕಂಡು, ಹೂ ಸುರಿಯುತ್ತಿದ್ದ ಒಬ್ಬ ಸೇವಕನನ್ನು ಪ್ರಶ್ನೆ ಮಾಡಿ, ಇಷ್ಟೆಲ್ಲಾ ಹೂಗಳನ್ನು ಎಲ್ಲಿಂದ ತರುತ್ತಿದ್ದೀರಿ ಹಾಗೂ ಯಾಕೆ ಹೀಗೆ ಸುರಿಯುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದನು.

ಕೃಷ್ಣನ ಮಾತಿಗೆ ಸೇವಕ ಸ್ವಾಮಿ ದಯವಿಟ್ಟು ನಮ್ಮನ್ನು ಮಾತನಾಡಿಸಬೇಡಿ ನಮಗೆ ಸಮಯವಿಲ್ಲ, ಇನ್ನೂ ಶಿವನಿಗೆ ಅರ್ಪಿಸಿದ ರಾಶಿ ರಾಶಿ ಹೂಗಳು ಇನ್ನೂ ಬಾಕಿ ಉಳಿದಿವೆ. ನಾವು ಅವೆಲ್ಲವನ್ನೂ ಇಲ್ಲಿ ತಂದು ಸುರಿಯಬೇಕು ಎಂದು ಉತ್ತರ ನೀಡಿದನು. ಸೇವಕನ ಉತ್ತರ ಕಂಡು ಅರ್ಜುನನಿಗೆ ಇನ್ನಿಲ್ಲದ ಸಂತೋಷವಾಯಿತು, ಇದು ನಾನು ಶಿವನಿಗೆ ಅರ್ಪಿಸಿದ ಹೂಗಳು ಎಂದು ಸಂತೋಷ ಪಟ್ಟನು ಮತ್ತು ಈ ಮಾತನ್ನು ಸೇವಕನ ಮಾತುಗಳಿಂದಲೇ ಉತ್ತರ ಪಡೆಯೋಣ ಎಂದು, ಗರ್ವದಿಂದ ಇಷ್ಟೆಲ್ಲ ಹೂ ಗಳನ್ನು ಮಹಾ ಶಿವನಿಗೆ ಅರ್ಪಿಸುತ್ತಿರುವ ವ್ಯಕ್ತಿ ಯಾರೆಂದು ನಿಮಗೆ ಗೊತ್ತೇ ಎಂದು ಪ್ರಶ್ನೆ ಮಾಡಿದನು. ಸೇವಕನು ಇನ್ಯಾರು ಸ್ವಾಮಿ ಭೀಮ ಸೇನ, ಪ್ರತಿದಿನವೂ ಭೀಮ ಶಿವನಿಗೆ ಅರ್ಪಿಸಿದ ಹೂ ಗಳನ್ನು ತೆಗೆಯುವಷ್ಟರಲ್ಲಿ ನಮಗೆ ಸಾಕಾಗಿಬಿಟ್ಟಿದೆ, ಎಷ್ಟು ಹೂಗಳನ್ನು ನಾವು ತೆಗೆಯೋಣ ಎಂದು ಮರು ಪ್ರಶ್ನೆ ಮಾಡಿದನು.

ಅರ್ಜುನನಿಗೆ ಸೇವಕನ ಉತ್ತರ ಕಂಡು ಆಶ್ಚರ್ಯವಾಯಿತು ಹಾಗೂ ಈತ ತಪ್ಪು ತಿಳಿದಿರಬಹುದು ಎಂದು ಅಂದಾಜು ಮಾಡಿ, ಇಲ್ಲ ಇಲ್ಲ ಈ ಹೂ ಗಳು ಬಹುಶಹ ಅರ್ಜುನ ಅರ್ಪಿಸಿದ್ದು ಇರಬೇಕು, ಭೀಮನು ಪೂಜೆಯ ಸಮಯದಲ್ಲಿ ಯಾವುದೇ ಹೂಗಳನ್ನು ಅರ್ಪಿಸುವುದಿಲ್ಲ ಎಂದು ಸೇವಕನಿಗೆ ಹೇಳಿದನು. ಅದಕ್ಕೆ ಸೇವಕ, ಇಲ್ಲ ಇಲ್ಲ ನಿಮಗೆ ತಿಳಿಯದೇ ಇರಬಹುದು. ಅರ್ಜುನನಿಗೆ ಅಹಂಕಾರ ಹೆಚ್ಚಾಗಿದೆ, ಆತನ ಪೂಜೆ ಕೇವಲ ಇತರರಿಗೆ ತನ್ನ ಪೂಜೆಯ ಆಡಂಬರದ ಬಗ್ಗೆ ಪ್ರದರ್ಶನ ಮಾಡಲು ಮಾತ್ರ, ಹೆಚ್ಚೆಂದರೆ ಅರ್ಜುನ ಆಡಂಬರದ ಪೂಜೆ ಮಾಡಿದಾಗ ಪ್ರತಿದಿನ ಇಲ್ಲಿ ಒಂದೆರಡು ಹೂಗಳನ್ನು ನಾವು ಕಾಣುತ್ತೇವೆ. ಆದರೆ ಭೀಮ ತನ್ನ ಭಕ್ತಿಯಿಂದ ಕೆಲವು ಕ್ಷಣಗಳ ಕಾಲ ಧ್ಯಾನ ಮಾಡಿದರೆ ಸಾಕು ಇಲ್ಲಿ ರಾಶಿಗಟ್ಟಲೆ ಹೂವುಗಳು ಶಿವನಿಗೆ ಅರ್ಪಿತವಾಗುತ್ತವೆ ಎಂದು ಸೇವಕನು ಉತ್ತರ ನೀಡಿದನು.

ಈ ಉತ್ತರ ಕೇಳಿದ ಬಳಿಕ ಅರ್ಜುನನ ಮುಖ ಸಣ್ಣದಾಗಿತ್ತು, ತನ್ನ ಅಹಂ ಕೂಡ ಕಡಿಮೆಯಾಗಿತ್ತು. ಕೃಷ್ಣನಿಗೆ ಈ ವಿಷಯ ತಿಳಿಯಿತು ಹಾಗೂ ಇದೇ ಸಮಯದಲ್ಲಿ ನಮಗೆಲ್ಲರಿಗೂ ಒಂದು ಜೀವನ ಪಾಠ ಕೂಡ ತಿಳಿಯುತ್ತದೆ. ಅದು ಏನೆಂದರೇ ಭಕ್ತ ಹಾಗೂ ಭಗವಂತನ ನಡುವೆ ಇರುವಂತಹ ಸಂಬಂಧ ಅಥವಾ ಸಂವಾದಕ್ಕಾಗಿ ಯಾವುದೇ ಆಡಂಬರದ ಅವಶ್ಯಕತೆ ಇಲ್ಲ, ಆಡಂಬರ ಹೆಚ್ಚಾಗುತ್ತಿದ್ದಂತೆ ನಮ್ಮ ಹಂಕಾರ ಪ್ರದರ್ಶನವು ಕೂಡ ಹೆಚ್ಚಾಗಿ ಮೆರವಣಿಗೆ ಯಾಗುತ್ತದೆ. ಅದು ಕೇವಲ ಪೂಜೆಯಾಗುತ್ತದೆ ಬದಲಾಗಿ ಭಕ್ತಿಯಿಂದ ಕೂಡಿದ ಪೂಜೆ ಆಗುವುದಿಲ್ಲ. ಆದ್ದರಿಂದ ನಮ್ಮ ಕೈಲಾದಷ್ಟು ರೀತಿಯಲ್ಲಿ ಪೂಜೆ ಮಾಡೋಣ, ಭಗವಂತನು ಯಾವುದೇ ಆಡಂಬರಕ್ಕೆ ಇಷ್ಟಪಟ್ಟು ನಮ್ಮನ್ನು ಕಾಪಾಡುವುದಿಲ್ಲ, ಭಗವಂತನ ಪ್ರತಿಯೊಂದು ನಿರ್ಧಾರಗಳು ನಾವು ನಡೆಯುತ್ತಿರುವ ಧರ್ಮದ ಹಾದಿಯ ಮೇಲೆ ಡಿಪೆಂಡ್ ಆಗಿರುತ್ತವೆ. ಎಂತಹ ಅದ್ಭುತ ಜೀವನಪಾಠ ಅಲ್ಲವೇ ಸ್ನೇಹಿತರೇ? ನಿಜಕ್ಕೂ ನಮ್ಮ ಪುರಾಣಗಳಲ್ಲಿ ಪ್ರತಿಯೊಂದು ಘಟನೆಯ ಹಿಂದೆ ಒಂದೊಂದು ಜೀವನಪಾಠ ಇರುತ್ತದೆ. ಪಾಠಗಳೆಲ್ಲವನ್ನು ನಾವು ಅನುಸರಿಸಿದರೆ ಖಂಡಿತ ನಮ್ಮ ಜೀವನ ಧರ್ಮದ ಹಾದಿಯಲ್ಲಿ ಬಹಳ ಸುಗಮವಾಗಿ ನಡೆಯುತ್ತದೆ.