ಪಂಚಮುಖಿ ಹನುಮಾನ್ ರೂಪ ತಾಳಲು ಕಾರಣವೇನು? ಮಹತ್ವ, ಯಾಕೆ ಮತ್ತು ಹೇಗೆ ಪೂಜಿಸಬೇಕು ಎಂಬುದನ್ನು ತಿಳಿಯಿರಿ

ಪಂಚಮುಖಿ ಹನುಮಾನ್ ರೂಪ ತಾಳಲು ಕಾರಣವೇನು? ಮಹತ್ವ, ಯಾಕೆ ಮತ್ತು ಹೇಗೆ ಪೂಜಿಸಬೇಕು ಎಂಬುದನ್ನು ತಿಳಿಯಿರಿ

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಹನುಮಂತನನ್ನು ಪೂಜಿಸಿದರೆ ವ್ಯಕ್ತಿಯು ಎಲ್ಲಾ ನೋವುಗಳಿಂದ ಮುಕ್ತಿ ಹೊಂದುತ್ತಾನೆ. ಮನೆಯಲ್ಲಿರುವ ಪ್ರತಿಯೊಂದು ಸಮಸ್ಯೆಗಳಿಗೂ ಆಂಜನೇಯನನ್ನು ಪೂಜಿಸಿದರೇ ಸಾಕು. ಶನಿದೇವರ ಕೋಪವನ್ನು ಕೂಡ ತಪ್ಪಿಸಲು ಹನುಮಂತನನ್ನು ಸ್ಮರಿಸಿದರೇ ಎಲ್ಲವೂ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ. ಇಂದು ಹನುಮಾನ್ ರವರ ಪಂಚಮುಖಿ ರೂಪದ ವಿಶೇಷತೆ, ಯಾಕೆ ಪಂಚಮುಖಿ ರೂಪ ತಾಳ ಲಾಯಿತು, ನಾವು ಯಾಕೆ ಪಂಚಮುಖಿ ಆಂಜನೇಯ ನನ್ನು ಪೂಜಿಸಬೇಕು ಹಾಗೂ ಹೇಗೆ ಪೂಜಿಸಬೇಕು ಎಂಬುದರ ಬಗ್ಗೆ ತಿಳಿದು ಕೊಳ್ಳೋಣ.

ರಾಮಾಯಣದ ಯುದ್ಧದ ಸಂದರ್ಭದಲ್ಲಿ ರಾವಣನು ಯುದ್ಧದಲ್ಲಿ ತನ್ನ ಮಗನನ್ನು ಕಳೆದುಕೊಂಡು ಸೋಲು ಹತ್ತಿರ ಬಂದಿದೆ ಎಂದು ಕೊಂಡು ತನ್ನ ಸಹೋದರ ಅಹಿರಾವಣನನ್ನು ಯುದ್ಧ ಮಾಡಲು ಕರೆಯುತ್ತಾನೆ. ಈ ಅಹಿರಾವಣನು ಪಾತಾಳ ಲೋಕದ ರಾಜನಾಗಿರುತ್ತಾನೆ. ರಾವಣನು, ಅಹಿರಾವಣನನ್ನು ಕರೆದ ಕೂಡಲೇ ವಿಭೀಷಣನಿಗೆ ಈ ವಿಷಯ ತಿಳಿದಾಗ ಕೂಡಲೇ ಶ್ರೀ ರಾಮ ಹಾಗೂ ಲಕ್ಷ್ಮಣರಿಗೆ ಸಂದೇಶ ನೀಡಿ ಎಚ್ಚರಿಕೆಯಿಂದ ಇರಿ ಆತನು ಪಾತಾಳ ಲೋಕದ ರಾಜ ಎಂದು ಆತನ ಶಕ್ತಿಗಳನ್ನು ವಿವರಿಸುತ್ತಾನೆ.

ಇದೇ ಸಮಯದಲ್ಲಿ ಹನುಮಂತನ ಬಳಿ ಹೋದ ವಿಭೀಷಣನು ಯಾರನ್ನು ದಯವಿಟ್ಟು ಶ್ರೀರಾಮ ಹಾಗೂ ಲಕ್ಷ್ಮಣರ ಬಳಿ ಬಿಡಬೇಡ ಎಂದು ಹೇಳುತ್ತಾನೆ. ವಿಷಯ ತಿಳಿದ ಹನುಮಂತನು ಶ್ರೀರಾಮ ಹಾಗೂ ಲಕ್ಷ್ಮಣರನ್ನು ಕಾಯಲು ಆರಂಭಿಸುತ್ತಾನೆ.

ಅಹಿರಾವಣನು ತಾಯಿ ಭವಾನಿಯ ಮಹಾನ್ ಭಕ್ತನಾಗಿದ್ದನು, ಈತನು ತಂತ್ರ-ಮಂತ್ರದ ಬಗ್ಗೆ ಬಹಳ ಜ್ಞಾನವನ್ನು ಹೊಂದಿದ್ದ. ಕ್ಷಣ ಮಾತ್ರದಲ್ಲಿ ಎಂಥವರನ್ನು ತನ್ನ ಮಾಯೆಯಿಂದ ನಿದ್ರೆಗೆ ಜಾರಿಸುತ್ತಿದ್ದ. ಇದೇ ರೀತಿ ಯುದ್ಧಕ್ಕೆ ಬಂದು ರಾಮನ ಇಡೀ ಸೈನ್ಯವನ್ನು ನಿದ್ರೆಗೆ ಜಾರಿಸಿದ ತದ ನಂತರ, ರಾಮ ಹಾಗೂ ಲಕ್ಷ್ಮಣರನ್ನು ಪಾತಾಳಕ್ಕೆ ಕರೆದುಕೊಂಡು ಹೋಗಲು ಪ್ರಯತ್ನ ಪಟ್ಟನು. ಆದರೆ ಹನುಮಂತ ಕಾವಲು ಕಾಯುತ್ತಿದ್ದ ಕಾರಣ ಅಹಿರಾವಣನ ಯಾವುದೇ ತಂತ್ರಗಳು ಫಲಕಾರಿಯಾಗಲಿಲ್ಲ.

ಇದನ್ನು ಅರಿತುಕೊಂಡ ಅಹಿರಾವಣನು ವಿಭೀಷಣನ ವೇಷ ಧರಿಸಿ ರಾಮ ಹಾಗೂ ಲಕ್ಷ್ಮಣರು ವಾಸಿಸುತ್ತಿರುವ ಪ್ರದೇಶವನ್ನು ಪ್ರವೇಶಿಸಿದನು. ಹನುಮಂತನು ವಿಭೀಷಣ ಎಂದು ತಿಳಿದು ಅನುವು ಮಾಡಿಕೊಟ್ಟನು, ಕ್ಷಣ ಮಾತ್ರದಲ್ಲಿ ರಾಮ ಹಾಗೂ ಲಕ್ಷ್ಮಣರನ್ನು ಎತ್ತುಕೊಂಡು ಅಹಿರಾವಣನು ಪಾತಾಳಲೋಕ ಸೇರಿಕೊಂಡನು. ಸ್ವಲ್ಪ ಸಮಯದ ನಂತರ ವಿಭೀಷಣನು ನಿದ್ರೆಯಿಂದ ಎದ್ದು, ಇದು ಅಹಿರಾವಣನ ಕೆಲಸ ನೀನು ಈ ಕೂಡಲೇ ಶ್ರೀ ರಾಮ ಮತ್ತು ಲಕ್ಷ್ಮಣನನ್ನು ರಕ್ಷಿಸದೆ ಇದ್ದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದರು.

ಕೂಡಲೇ ಹನುಮಂತನು ಪಾತಾಳ ಲೋಕಕ್ಕೆ ಹೋಗಿ ಅಲ್ಲಿ ಪಾತಾಳ ಲೋಕದ ದ್ವಾರದಲ್ಲಿ ತನ್ನ ಮಗನಾದ ಮಕರ್ಧ್ವಜ ನನ್ನು ಭೇಟಿಯಾಗಿ, ಆತನ ಹುಟ್ಟಿನ ಹಿಂದಿರುವ ಕಥೆಯನ್ನು ತಿಳಿದುಕೊಂಡು, ದಾರಿ ಬಿಡದೆ ಇದ್ದಾಗ ಸೋಲಿಸಿ ಪಾತಾಳ ಲೋಕ ಸೇರಿಕೊಂಡನು. ಅಹಿರಾವಣನ ಸೈನ್ಯವನ್ನು ಕ್ಷಣ ಮಾತ್ರದಲ್ಲಿ ಹನುಮಂತನು ಸೋಲಿಸಿ ರಾಮ ಲಕ್ಷ್ಮಣರನ್ನು ಕರೆದುಕೊಂಡು ಬರಲು ಹೊರಟನು. ಆದರೆ ಸೈನ್ಯವನ್ನು ಸೋಲಿಸಿದ ಹನುಮಂತನಿಗೆ ಅಹಿರಾವಣನನ್ನು ಸೋಲಿಸಿ ಮುಗಿಸುವುದು ಸುಲಭದ ಕೆಲಸವಾಗಿರಲಿಲ್ಲ.

ಯಾಕೆಂದರೆ ಈತನು ತಾಯಿ ಭವಾನಿಯ ಮಹಾನ್ ಭಕ್ತನಾಗಿದ್ದ ಕಾರಣ, ಈತನನ್ನು ಸೋಲಿಸಬೇಕು ಎಂದರೇ ತಾಯಿ ಭವಾನಿಗಾಗಿ ಅಹಿರಾವಣ ಬೆಳಗಿದ್ದ ಐದು ದೀಪಗಳನ್ನು ಒಮ್ಮೆಲೆ ಆರಿಸ ಬೇಕಾಗಿತ್ತು. ಈ 5 ದೀಪಗಳು 5 ಕಡೆಗೆ ಮುಖ ಮಾಡಿದ್ದವು. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಆಕಾಶದ ಕಡೆಗೆ ದೀಪಗಳು ಮುಖ ಮಾಡಿದ್ದನ್ನು ಕಂಡ ಹನುಮಂತನು ಇವುಗಳನ್ನು ಹೇಗೆ ನಂದಿಸುವುದು ಎಂಬುದನ್ನು ಆಲೋಚನೆ ಮಾಡಿ ಪಂಚಮುಖಿ ಆಂಜನೇಯನ ರೂಪ ಪಡೆದು ಕೊಂಡನು.

ಉತ್ತರದಲ್ಲಿ ವರದ ಮುಖ, ದಕ್ಷಿಣದಲ್ಲಿ ನರಸಿಂಹ, ಪಕ್ಷಿಮದಲ್ಲಿ ಗರುಡ ಮುಖ, ಆಕಾಶದ ಕಡೆಗೆ ಹಯಗ್ರೀವ ಮತ್ತು ಪೂರ್ವದಲ್ಲಿ ಹನುಮಾನ್ ಮುಖ ಪಡೆದುಕೊಂಡು, ಒಮ್ಮೆಲೆ ಐದು ದೀಪಗಳನ್ನು ನಂದಿಸಿ ಅಹಿರಾವಣನ ಕಥೆಯನ್ನು ಮುಗಿಸಿದನು ಹಾಗೂ ರಾಮ ಲಕ್ಷ್ಮಣರನ್ನು ಪಾತಾಳ ಲೋಕದಿಂದ ಕರೆದುಕೊಂಡು ಬಂದು ಮುಕ್ತಗೊಳಿಸಿದನು. ನೋಡಿದಿರಲ್ಲ, ಈ ರೂಪದ ಹಿಂದಿನ ಕಥೆ, ಇದೀಗ ಐದು ಅವತಾರಗಳ ಮಹತ್ವನ್ನು ತಿಳಿದುಕೊಳ್ಳೋಣ.

ಶ್ರೀ ಹನುಮಾನ್ ಜಿ (ಶುದ್ಧತೆ ಮತ್ತು ಯಶಸ್ಸು): ಪೂರ್ವ ದಿಕ್ಕಿನತ್ತ ಮುಖ ಮಾಡುವ ಮುಖ. ಈ ರೂಪವನ್ನು ಆರಾಧಿಸುವುದರಿಂದ ಅವನ / ಅವಳ ಪಾಪಗಳಿಂದ ದೂರವಾಗುತ್ತದೆ ಮತ್ತು ಶಾಂತಿಯುತ ಮತ್ತು ಶುದ್ಧ ಮನಸ್ಸನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ನರಸಿಂಹ(ಧೈರ್ಯ): ಇದು ದಕ್ಷಿಣವನ್ನು ಎದುರಿಸುತ್ತಿದೆ ಮತ್ತು ಅವರ ಶತ್ರುಗಳ ಮೇಲೆ ಒಂದು ಜಯವನ್ನು ನೀಡುತ್ತದೆ. ಭಗವಾನ್ ವಿಷ್ಣುವಿನ ಅನೇಕ ಅವತಾರಗಳಲ್ಲಿ ನರಸಿಂಹವೂ ಒಂದು, ಅವನು ತನ್ನ ಭಕ್ತ ಪ್ರಹ್ಲಾದನನ್ನು ರಕ್ಷಿಸಲು ತೆಗೆದುಕೊಂಡನು.

ಗರುಡ: ಇದು ಭಗವಾನ್ ಹನುಮನ ಐದು ಮುಖಗಳ ಅವತಾರದ ಪಶ್ಚಿಮ ದಿಕ್ಕಿನ ಅಭಿವ್ಯಕ್ತಿ. ಈ ಮುಖವನ್ನು ಆರಾಧಿಸುವುದರಿಂದ ನಕಾರಾತ್ಮಕ ಪ್ರಭಾವಗಳು ಹೊರಹಾಕುತ್ತದೆ. ವರಾಹಾ(ಸಂಪತ್ತು): ಈ ಮುಖವು ಉತ್ತರ ದಿಕ್ಕನ್ನು ಎದುರಿಸುತ್ತಿದೆ ಮತ್ತು ದುರುದ್ದೇಶಪೂರಿತ ಅಥವಾ ಕೆಟ್ಟ ಗ್ರಹಗಳ ಪರಿಣಾಮಗಳನ್ನು ತೆಗೆದುಹಾಕುತ್ತದೆ. ಹಯಗ್ರೀವ(ಜ್ಞಾನ): ಇದು ಮೇಲ್ಮುಖ ದಿಕ್ಕನ್ನು ಎದುರಿಸುತ್ತಿದೆ. ಈ ಮುಖವನ್ನು ಪೂಜಿಸುವವರಿಗೆ ಜ್ಞಾನ ಮತ್ತು ಸಂತತಿ ಸಿಗುತ್ತದೆ.

ಹೇಗೆ ಪೂಜಿಸುವುದು: ಈ ಪಂಚಮುಖಿ ಹನುಮಂತನನ್ನು ಪ್ರತಿದಿನ ನೆನೆದುಕೊಂಡು ಪೂಜಿಸುವ ಭಕ್ತರು ಯಾವುದೇ ಭಯದಿಂದ ಸ್ವಾತಂತ್ರ ಪಡೆದುಕೊಳ್ಳುತ್ತಾರೆ, ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಈ ಪಂಚಮುಖಿ ರೂಪದ ಚಿತ್ರ ಅಥವಾ ಪ್ರತಿಮೆ ಮುಂದೆ ಕುಳಿತುಕೊಂಡು ದೀಪವನ್ನು ಬೆಳಗಿಸುವ ಮೂಲಕ ಹನುಮಾನ್ ಚಾಲೀಸಾ ಪಠಿಸಿದರೆ ಉತ್ತಮ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.