ಸುದರ್ಶನ ಚಕ್ರ, ಗರುಡ ಹಾಗೂ ಸತ್ಯಭಾಮ ಇವರ ಅಹಂ ಕಡಿಮೆ ಮಾಡಲು ಶ್ರೀಕೃಷ್ಣ ಬಳಸಿದ ತಂತ್ರದ ಕಥೆ !

ಸುದರ್ಶನ ಚಕ್ರ, ಗರುಡ ಹಾಗೂ ಸತ್ಯಭಾಮ ಇವರ ಅಹಂ ಕಡಿಮೆ ಮಾಡಲು ಶ್ರೀಕೃಷ್ಣ ಬಳಸಿದ ತಂತ್ರದ ಕಥೆ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ತ್ರಿಮೂರ್ತಿಗಳಲ್ಲಿ ಒಬ್ಬರಾದ ವಿಷ್ಣುವಿನ ಸಂಪೂರ್ಣ ಅವತಾರವೇ ಶ್ರೀ ಕೃಷ್ಣ. ಶ್ರೀ ರಾಮನು ಕೂಡ ವಿಷ್ಣುವಿನ ಮತ್ತೊಂದು ಅವತಾರ. ಈಗ ಯಾಕೆ ಈ ತಿಳಿದಿರುವ ವಿಷಯ ಎಂದು ಆಲೋಚನೆ ಮಾಡುತ್ತಿದ್ದೀರಾ?? ಮಹಾ ಭಾರತದ ಒಂದು ಉತ್ತಮ ಜೀವನದ ಪಾಠವನ್ನು ತಿಳಿಸುವ ಒಂದು ಘಟನೆಯ ಬಗ್ಗೆ ನಾವು ಇಂದು ಇಲ್ಲಿ ತಿಳಿದು ಕೊಳ್ಳೋಣ.

ಒಂದು ದಿನ ಶ್ರೀ ಕೃಷ್ಣನು ತನ್ನ ಆಸ್ಥಾನವಾದ ದ್ವಾರಕೆಯಲ್ಲಿ ಸತ್ಯಭಾಮ ರವರೊಂದಿಗೆ ವಿಶ್ರಾಂತಿ ತೆಗೆದು ಕೊಳ್ಳಲು ಕುಳಿತಿದ್ದನು. ಇದೇ ಸಮಯದಲ್ಲಿ ವಿಷ್ಣುವಿನ ವಾಹನವಾದ ಗರುಡ ಹಾಗೂ ಸುದರ್ಶನ ಚಕ್ರ ಕೂಡ ಶ್ರೀ ಕೃಷ್ಣನ ಸೇವೆಯಲ್ಲಿ ತೊಡಗಿ ಕೊಂಡಿದ್ದರು. ಇದೇ ಸಮಯದಲ್ಲಿ ಸತ್ಯಭಾಮರವರು ಶ್ರೀ ಕೃಷ್ಣನನ್ನು ಒಂದು ಪ್ರಶ್ನೆ ಕೇಳುತ್ತಾರೆ. ಅದುವೇ ಸ್ವಾಮಿ ನೀವು ತೇತ್ರಾಯುಗದಲ್ಲಿ ರಾಮನಾಗಿ ಅವತಾರ ತಾಳಿದ್ದಿರೀ, ತೇತ್ರಾಯುಗದಲ್ಲಿ ಇದ್ದ ಸೀತೆ ನನಗಿಂತ ಸುಂದರವಾಗಿದ್ದಳೇ ಎಂದು ಪ್ರಶ್ನೆ ಮಾಡುತ್ತಾರೆ.

ಈ ಪ್ರಶ್ನೆಗೆ ಶ್ರೀ ಕೃಷ್ಣನು ಉತ್ತರ ನೀಡುವ ಮುನ್ನವೇ ಜಗತ್ತಿನಲ್ಲಿ ನನಗಿಂತ ಯಾರಾದರೂ ವೇಗವಾಗಿ ಹಾರಬಲ್ಲರಾ ಎಂದು ಗರುಡ ಶ್ರೀ ಕೃಷ್ಣನನ್ನು ಪ್ರಶ್ನೆ ಮಾಡುತ್ತಾರೆ. ಮತ್ತೊಂದು ಕಡೆಯಿಂದ ಸ್ವಾಮಿ ಜಗತ್ತಿನಲ್ಲಿ ನನಗಿಂತಲೂ ಯಾರಾದರೂ ಬಲಶಾಲಿ ಇದ್ದಾರೆಯೇ ಎಂದು ಸುದರ್ಶನ ಚಕ್ರ ಶ್ರೀ ಕೃಷ್ಣನನ್ನು ಪ್ರಶ್ನೆ ಮಾಡುತ್ತದೆ. ಈ ಮೂರು ಪ್ರಶ್ನೆಗಳನ್ನು ಕೇಳಿದ ಶ್ರೀ ಕೃಷ್ಣನಿಗೆ ಈ ಮೂರು ಜನರಲ್ಲಿ ತಾವೇ ಶ್ರೇಷ್ಠ ಎಂಬ ಅಹಂ ಹುಟ್ಟುಕೊಂಡಿದೆ ಎಂದು ಅರ್ಥ ಮಾಡಿಕೊಂಡು, ಈ ಮೂರು ಪ್ರಶ್ನೆಗಳಿಗೆ ಉತ್ತರ ಹೇಗಿರಬೇಕು ಎಂದರೇ ಇವರ ಅಹಂ ಒಮ್ಮೆಲೇ ಕಡಿಮೆ ಯಾಗಬೇಕು ಎಂದು ಆಲೋಚನೆ ಮಾಡಿ ಎಂದಿನಂತೆ ತನ್ನ ಲೀಲೆಯ ಮೂಲಕ ಪಾಠ ಕಲಿಸಲು ನಿರ್ಧಾರ ಮಾಡುತ್ತಾನೆ.

ಓ ಗರುಡ, ನಿನ್ನ ಪ್ರಶ್ನೆಗೆ ನಾನು ಉತ್ತರಿಸುತ್ತೇನೆ, ಆದರೆ ಅದಕ್ಕೂ ಮುನ್ನ ನೀನು ಹನುಮಂತನ ಬಳಿ ತೆರಳಿ ಶ್ರೀ ರಾಮನು ಹಾಗೂ ಸೀತಾ ಮಾತೆಯು ನಿನಗಾಗಿ ದ್ವಾರಕೆಯಲ್ಲಿ ಕಾಯುತ್ತಿದ್ದಾರೆ ಎಂದು ಹೇಳಿ ಕರೆದು ಕೊಂಡು ಬಾ ಎಂದು ಆಜ್ಞೆ ಮಾಡುತ್ತಾರೆ.

ಇದಾದ ನಂತರ ಸತ್ಯಭಾಮೆ ರವರಿಗೆ ಶ್ರೀ ಕೃಷ್ಣ, ನೀವು ಸೀತಾ ಮಾತೆಯಂತೆ ಉಡುಗೆ ತೊಡಿ, ಹನುಮಾನ್ ಬರುತ್ತಾರೆ, ನಾನು ಶ್ರೀ ರಾಮನ ಉಡುಗೆ ತೊಡುತ್ತೇನೆ ಎಂದು ಹೇಳಿ, ಮತ್ತೊಂದೆಡೆ ಸುದರ್ಶನ ಚಕ್ರಕ್ಕೆ ಹೋಗು, ನೀನು ಅರಮನೆಯ ಪ್ರವೇಶ ದ್ವಾರದಲ್ಲಿ ಕಾವಲು ಕಾಯಿ, ಯಾರನ್ನೂ ಒಳಗೆ ಬಿಡಬೇಡ ಎಂದು ಆದೇಶ ನೀಡುತ್ತಾರೆ.

ಶ್ರೀ ಕೃಷ್ಣನ ಆಜ್ಞೆಯನ್ನು ಎಲ್ಲರೂ ಪಾಲನೆ ಮಾಡಲೇ ಬೇಕಾಗಿರುತ್ತದೆ, ಒಂದೆಡೆ ಸತ್ಯಭಾಮೆಯು ಸೀತಾ ಮಾತೆ ಯಂತೆ ಉಡುಗೆ ತೊಟ್ಟರೇ ಮತ್ತೊಂದೆಡೆ ಗರುಡ ಹನುಮಂತನನ್ನು ಕರೆದುಕೊಂಡು ಬರಲು ಹೊರಡುತ್ತದೆ. ಇನ್ನು ಸುದರ್ಶನ ಚಕ್ರ ಶ್ರೀ ಕೃಷ್ಣನ ಆಜ್ಞೆ ಯಂತೆ ಅರಮನೆಯ ಪ್ರವೇಶ ದ್ವಾರದಲ್ಲಿ ಕಾವಲು ಕಾಯಲು ಆರಂಭಿಸುತ್ತದೆ.

ಗರುಡ, ಹನುಮಂತನ ಬಳಿ ತೆರಳಿ ದ್ವಾರಕೆಯ ಅರಮನೆಯಲ್ಲಿ ನಿನಗಾಗಿ ಶ್ರೀ ರಾಮ ಪ್ರಭು ಹಾಗೂ ಸೀತಾ ಮಾತೆಯು ಕಾಯುತ್ತಿದ್ದಾರೆ, ದಯಮಾಡಿ ನೀನು ನನ್ನ ಮೇಲೆ ಕುಳಿತುಕೋ ನಾನು ಬಹಳ ವೇಗವಾಗಿ ಅರಮನೆ ತಲುಪುತ್ತೇನೆ ಎಂದು ಹೇಳುತ್ತದೆ. ಇದಕ್ಕೆ ಮುಗುಳ್ನಕ್ಕ ಹನುಮಂತನು ನೀವು ಹೊರಡಿ ನಾನು ಬರುತ್ತೇನೆ ಎಂದು ಉತ್ತರಿಸುತ್ತಾರೆ, ಆದರೆ ಗರುಡ ದೇವ ಇವರಿಗೆ ವಯಸ್ಸಾಗಿದೆ ಬರಲು ಎಷ್ಟು ಕಾಲ ಬೇಕೋ ಸರಿ ಏನಾದರೂ ಆಗಲಿ ನನ್ನ ಕೆಲಸ ಮುಗಿಯಿತು ನಾನು ವಾಪಸ್ಸು ಅರಮನೆಗೆ ತೆರಳುತ್ತೇನೆ ಎಂದು ಅಲ್ಲಿಂದ ಹೊರಡುತ್ತಾರೆ.

ಗರುಡ ದೇವನು ಅಲ್ಲಿಂದ ಹೊರಟು ಅರಮನೆ ಬರುವಷ್ಟರಲ್ಲಿ, ಶ್ರೀ ರಾಮ ಪ್ರಭು ಹಾಗೂ ಸೀತಾ ಮಾತೆಯ ಉಡುಗೆ ತೊಟ್ಟಿರುವ ಶ್ರೀ ಕೃಷ್ಣ ಹಾಗೂ ಸತ್ಯಭಾಮೆಯರ ಮುಂದೆ ಹನುಮನು ಕುಳಿತುಕೊಂಡು ಮಾತನಾಡುತ್ತಿರುತ್ತಾರೆ. ಗರುಡ ದೇವನು ಇವರು ನನಗಿಂತ ವೇಗವಾಗಿ ಹೇಗೆ ಅರಮನೆ ತಲುಪಿದರು ಎಂದು ಆಲೋಚನೆ ಮಾಡಿ, ಇದು ಶ್ರೀ ಕೃಷ್ಣನ ಪಾಠ ಎಂದು ಅರ್ಥ ಮಾಡಿಕೊಂಡು ಶ್ರೀಕೃಷ್ಣನ ಬಳಿ ತೆರಳಿ ನಾಚಿಕೆಯಿಂದ ತಲೆ ಬಾಗಿ ನಮಸ್ಕರಿಸುತ್ತಾರೆ. ಇದನ್ನು ನೋಡಿ ಮುಗುಳ್ನಕ್ಕ ಶ್ರೀ ಕೃಷ್ಣ, ವಾಯುಪುತ್ರ ಹನುಮಂತನು ಹೇಗೆ ಅನುಮತಿ ಇಲ್ಲದೆ ಅರಮನೆ ಪ್ರವೇಶಿಸಿದ್ದಿರೀ? ಯಾರು ನಿಮ್ಮನ್ನು ಅರಮನೆಯ ಪ್ರವೇಶದ್ವಾರದಲ್ಲಿ ತಡೆಯಲಿಲ್ಲವೇ ಎಂದು ಹನುಮಂತನಿಗೆ ಪ್ರಶ್ನೆ ಮಾಡುತ್ತಾರೆ.

ಕೂಡಲೇ ಹನುಮಂತನು ಎರಡೂ ಕೈಗಳನ್ನು ಮಡಿಚಿ ತಲೆಬಾಗಿ ನಮಸ್ಕರಿಸಿ, ಕ್ಷಮಿಸಿ ಎಂದು ಸುದರ್ಶನ ಚಕ್ರವನ್ನು ತನ್ನ ಬಾಯಿಂದ ಹೊರ ತೆಗೆದು ಶ್ರೀಕೃಷ್ಣನ ಮುಂದೆ ಇಡುತ್ತಾರೆ. ದೇವರನ್ನು ಭೇಟಿಯಾಗುವುದಕ್ಕೆ ಯಾರಾದರೂ ತಡೆಯ ಬಹುದೆ ಎಂದು ಶ್ರೀ ಕೃಷ್ಣನನ್ನು ಮರುಪ್ರಶ್ನೆ ಮಾಡುತ್ತಾರೆ. ಈ ಸುದರ್ಶನ ಚಕ್ರವು ನನ್ನನ್ನು ತಡೆಯುವ ಎಲ್ಲ ಪ್ರಯತ್ನಗಳನ್ನು ಮಾಡಿತು, ಆದರೆ ದೇವರನ್ನು ಭೇಟಿಯಾಗುವುದನ್ನು ಯಾರದರೂ ತಡೆಯಬಹುದೇ? ತಡೆಯಲು ಯತ್ನಿಸಿದ ಚಕ್ರವನ್ನು ನನ್ನ ಬಾಯಿಯಲ್ಲಿ ಇಟ್ಟುಕೊಂಡು ನಾನು ನಿಮ್ಮನ್ನು ಭೇಟಿ ಮಾಡಲು ಬಂದಿದ್ದೇನೆ ನನ್ನನ್ನು ಕ್ಷಮಿಸಿ ಎಂದು ಹನುಮಂತ ಹೇಳುತ್ತಾರೆ.

ಮುಗುಳ್ನಕ್ಕ ಶ್ರೀ ಕೃಷ್ಣನು ಸುದರ್ಶನ ಚಕ್ರದ ಕಡೆ ತಿರುಗಿ ನೋಡುತ್ತಾರೆ, ಇದಾದ ಕೂಡಲೇ ಹನುಮನು ಮತ್ತೊಮ್ಮೆ ತಲೆಬಗ್ಗಿಸಿ ಪ್ರಭು ನೀವು ಶ್ರೀ ಕೃಷ್ಣ ಎಂದು ನನಗೆ ತಿಳಿದಿದೆ, ನಾನು ನಿಮ್ಮಲ್ಲಿ ಶ್ರೀ ರಾಮನನ್ನು ನೋಡುತ್ತಿದ್ದೇನೆ. ಆದರೆ ನಿಮ್ಮ ಪಕ್ಕದಲ್ಲಿ ಸೀತಾ ಮಾತೆಯ ಉಡುಗೆ ತೊಟ್ಟು ಕುಳಿತಿರುವ ಸಾಮಾನ್ಯರಿಂದ ನಾನು ಸೀತಾ ಮಾತೆಯನ್ನು ಕಾಣಲು ಸಾಧ್ಯವಿಲ್ಲ ಎಂದು ಹೇಳಿದನು. ಈ ಮಾತನ್ನು ಕೇಳಿದ ಸತ್ಯಭಾಮೆ ನಾನು ಎಂದಿಗೂ ಸೀತಾ ಮಾತೆಗೆ ಸಮಾನವಾಗಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ತಲೆ ತಗ್ಗೀಸುತ್ತಾರೆ.

ಸತ್ಯಭಾಮೆಗೆ ತನ್ನ ಅಹಂ ತಪ್ಪೆಂದು ತಿಳಿಯುತ್ತದೆ, ತಾನೇ ಬಹಳ ಸೌಂದರ್ಯವಂತೆ ಎಂಬ ಅಹಂ ಸತ್ಯಭಾಮೆಗೆ ಈಗ ಹೋದಂತಾಯಿತು. ರಾಣಿ ಸತ್ಯಭಾಮೆ, ಸುದರ್ಶನ ಚಕ್ರ ಮತ್ತು ಗರುಡ ಈ ಮೂವರು ತಮ್ಮ ಅಹಂ ಕಳೆದುಕೊಂಡು, ಕಣ್ಣೀರು ಸುರಿಸಲು ಆರಂಭಿಸಿದರು ಹಾಗೂ ಶ್ರೀ ಕೃಷ್ಣನ ಪಾದಕ್ಕೆ ನಮಿಸಿ ಕ್ಷಮೆ ಕೇಳಿದರು. ಈ ಮೂಲಕ ಶ್ರೀಕೃಷ್ಣನು ತನ್ನ ಭಕ್ತರ ಅಹಂನನ್ನು, ತನ್ನ ಭಕ್ತ ಹನುಮನ ಶಕ್ತಿಯಿಂದ ತೆಗೆದು ಹಾಕಿದನು.

ನೋಡಿದಿರಲ್ಲ ಸ್ನೇಹಿತರೇ, ಭಗವಾನ್ ಶ್ರೀ ಕೃಷ್ಣನು ಮೂರು ಜನರ ಅಹಂ ಅನ್ನು ಹೇಗೆ ಕಡಿಮೆ ಮಾಡಿದನು ಎಂದು ಈ ಕಥೆಯನ್ನು ನಾವು ಕೇವಲ ಓದಿದರೇ ಸಾಕಾಗುವುದಿಲ್ಲ. ನಮ್ಮ ಜೀವನದಲ್ಲಿ ಅಹಂ ಅನ್ನು ಪಕ್ಕಕ್ಕೆ ಇಟ್ಟು ಸದಾ ಯಶಸ್ಸಿನ ಕಡೆಗೆ ದಾಪುಗಾಲು ಹಾಕುತ್ತಿರಬೇಕು, ಇದು ಪ್ರತಿಯೊಬ್ಬರ ಜೀವನ ಪಾಠ ವಾಗಿರಬೇಕು. ಹಾಗೇ ನಡೆದಲ್ಲಿ ಮಾತ್ರ ಪ್ರತಿಯೊಬ್ಬರಲ್ಲೂ, ಯಶಸ್ಸು ಸಂತೋಷ ಕಾಣುತ್ತದೆ. ಧನ್ಯವಾದಗಳು