ನೂತನ ಸಚಿವರಿಗೆ ಹೊಸ ಆದೇಶ ಹೊರಡಿಸಿದ ಬಿಎಸ್ವೈ

ನೂತನ ಸಚಿವರಿಗೆ ಹೊಸ ಆದೇಶ ಹೊರಡಿಸಿದ ಬಿಎಸ್ವೈ

ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸಿದ ಕೆಲವೇ ಕೆಲವು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಬೇಕಿತ್ತು. ಆದರೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಕಾರಣ, ಬಿಜೆಪಿ ಪಕ್ಷದ ಎಲ್ಲಾ ಶಾಸಕರು ಸೇರಿದಂತೆ ಹಲವಾರು ಸಂಸದರು ಎಲ್ಲಾ ಪ್ರದೇಶಗಳಿಗೆ ಭೇಟಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕನ ಮಾಡಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದರು. ಕೊನೆಗೂ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ, ಯಡಿಯೂರಪ್ಪನವರ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ ನಡೆದಿದೆ. ಪ್ರಮಾಣವಚನ ನಡೆದ ಕೆಲವೇ ಕೆಲವು ಗಂಟೆಗಳಲ್ಲಿ ಬಿಜೆಪಿ ಪಕ್ಷದ ಸಚಿವ ಸಂಪುಟ ಸಭೆಯಲ್ಲಿ ಬಿಎಸ್ವೈ ಅವರು ನೂತನ ಸಚಿವರಿಗೆ ಹೊಸ ಜವಾಬ್ದಾರಿ ನೀಡಿ ನಿರ್ದೇಶನ ನೀಡಿದ್ದಾರೆ.

ಎಲ್ಲಾ ಸಚಿವರಿಗೆ ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದ್ದು, ಪ್ರತಿಯೊಬ್ಬರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಪ್ರವಾಸ ಕೈಗೊಂಡು ಪ್ರತಿಯೊಂದು ತಾಲ್ಲೂಕು ಮಟ್ಟದಲ್ಲಿ ಪರಿಶೀಲನಾ ಸಭೆ ನಡೆಸಿ, ಪ್ರವಾಹದಿಂದ ತೀವ್ರ ತೊಂದರೆಯಾಗಿರುವ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ, ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇದೇ ವೇಳೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜನರ ನೋವಿಗೆ ಸ್ಪಂದಿಸುವುದು ಬಿಜೆಪಿ ನೇತೃತ್ವದ ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಎಲ್ಲರಿಗೂ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಖಾತೆ ಹಂಚಿಕೆ ಮಾಡಲಾಗುವುದು ಅಷ್ಟರಲ್ಲಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿ ಪರಿಹಾರ ಉಪಾಯಗಳ ವರದಿ ಸಿದ್ಧಪಡಿಸಬೇಕು ಎಂದು ಆದೇಶ ನೀಡಿದ್ದಾರೆ. ಸಚಿವ ಸಂಪುಟ ಸಭೆಯ ಒಳಗೆ ಅನುಷ್ಠಾನದ ಕಾರ್ಯತಂತ್ರವನ್ನು ರೂಪಿಸುವಂತೆ ಇದೇ ಸಮಯದಲ್ಲಿ ನೂತನ ಸಚಿವರಿಗೆ ಸಲಹೆ ನೀಡಿದ್ದಾರೆ.