ಒಳ್ಳೆಯ ನಡೆ: ಜನಸಮಾನ್ಯರಿಗೆ ಹೊಸ ರೀತಿಯ ಸವಾಲು ಎಸೆದ ಸುಮಲತಾ !

ಒಳ್ಳೆಯ ನಡೆ: ಜನಸಮಾನ್ಯರಿಗೆ ಹೊಸ ರೀತಿಯ ಸವಾಲು ಎಸೆದ ಸುಮಲತಾ !

ನೂತನ ಸಂಸದೆಯಾಗಿ ಆಯ್ಕೆಯಾದ ಬಳಿಕ ಸುಮಲತಾ ಅಂಬರೀಶ್ ರವರು ಮಂಡ್ಯ ಜಿಲ್ಲೆಯ ಹಲವಾರು ಅಭಿವೃದ್ಧಿಯ ವಿಚಾರಗಳ ಪರ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲಿ ಕಾವೇರಿ ನದಿ ನೀರು ಹಂಚಿಕೆ, ಕೆಆರ್ಎಸ್ ಅಣೆಕಟ್ಟಿನ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಕಾಲೇಜುಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರದ ಮುಂದೆ ಇಟ್ಟು ಹಲವಾರು ಸಮಸ್ಯೆಗಳಿಗೆ ಪರಿಹಾರ ಸಹ ಒದಗಿಸಿದ್ದರು. ಇದೀಗ ಕೊಟ್ಟಮಾತಿನಂತೆ ನಡೆದುಕೊಳ್ಳುತ್ತಿರುವ ಸುಮಲತಾ ರವರು, ಸಂಸತ್ ಕಲಾಪದಿಂದ ಬ್ರೇಕ್ ಸಿಕ್ಕ ಕಾರಣ ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದಾರೆ. ಹೋದ ಕಡೆಯಲ್ಲೆಲ್ಲಾ ಸುಮಲತಾ ಅಂಬರೀಶ್ ಅವರಿಗೆ ದೊಡ್ಡ ದೊಡ್ಡ ಸನ್ಮಾನ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.

ಇದೇ ಕಾರ್ಯಕ್ರಮಗಳಲ್ಲಿ ಮಾತನಾಡಿರುವ ಸುಮಲತಾ ಅಂಬರೀಶ್ ರವರು ಮಂಡ್ಯ ಜಿಲ್ಲೆಯ ಜನರಿಗೆ ಹೊಸ ಸವಾಲೆಸೆದಿದ್ದಾರೆ. ಕೊಟ್ಟಮಾತಿನಂತೆ ಇಂದು ನಿಮ್ಮ ಮುಂದೆ ಬರುತ್ತಿದ್ದೇನೆ, ಜನ ತುಂಬಾ ಪ್ರೀತಿಯಿಂದ ನನ್ನನ್ನು ಸ್ವಾಗತ ಮಾಡುತ್ತಿದ್ದಾರೆ, ಎಲ್ಲರೂ ಸನ್ಮಾನ ಮಾಡಿ ಪ್ರೀತಿ ತೋರಿಸುತ್ತಿದ್ದಾರೆ. ಆದರೆ ನಿಜಕ್ಕೂ ನನಗೆ ಯಾವುದೇ ಸನ್ಮಾನ ಬೇಡ. ಈ ಪ್ರೀತಿ ತೋರಿಸಲು ಮಂಡ್ಯ ಜಿಲ್ಲೆಯಲ್ಲಿ ಜನರು ಎಲ್ಲಿಯಾದರೂ ಒಂದು ಸಸಿ ನೆಟ್ಟು ಆ ಫೋಟೋ ನನಗೆ ಕಳುಹಿಸಿ, ಅವರ ಹೆಸರು ಹಾಕಿ ಫೇಸ್ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತೇನೆ. ಸುಖಾಸುಮ್ಮನೆ ಹಣವನ್ನು ಪೋಲು ಮಾಡಬೇಡಿ ನಾವು ಮಾಡುವ ಕೆಲಸದಿಂದ ಪರಿಸರಕ್ಕೆ ಒಳ್ಳೆಯದಾಗಬೇಕು, ಇಲ್ಲವಾದಲ್ಲಿ ಕಷ್ಟದಲ್ಲಿರುವ ಬಡವರಿಗೆ ಏನಾದರೂ ಸಹಾಯ ಮಾಡಿ ಎಂದು ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.‌