ಬಿಜೆಪಿ ಸಿಎಂ ಅಭ್ಯರ್ಥಿ – ಅಂತಿಮ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿದ ಹೈ ಕಮಾಂಡ್ ಮುಖ್ಯಸ್ಥ

ಬಿಜೆಪಿ ಸಿಎಂ ಅಭ್ಯರ್ಥಿ – ಅಂತಿಮ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿದ ಹೈ ಕಮಾಂಡ್ ಮುಖ್ಯಸ್ಥ

0

‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಡಿ ಎಂದು ನನ್ನ ಬಳಿ ಬಂದು ಹೇಳುವ ತಾಕತ್ತು ಅನಂತ ಕುಮಾರ್‌ ಮತ್ತು ಬಿ.ಎಲ್.ಸಂತೋಷ್‌ ಅವರಿಗೆ ಇದೆಯೇ?’.

ಈ ರೀತಿ ಹೇಳಿದವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ. ಭಾನುವಾರ ಅವರು ತಮ್ಮ ಆಪ್ತರ ಬಳಿ ಮನದ ಮಾತನ್ನು ಹೇಳಿಕೊಂಡಿದ್ದಾರೆ.

ವರುಣಾದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್‌ ತಪ್ಪಿಸಲು ಈ ಇಬ್ಬರು ನಾಯಕರು ಕಾರಣರು ಎಂಬ ವದಂತಿ ಹಬ್ಬಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಮತ್ತೆ ಇವರು ಅಡ್ಡಿಪಡಿಸಬಹುದು ಎಂಬುದಾಗಿ ಸಂಶಯ ವ್ಯಕ್ತವಾಗಿರುವ ಬಗ್ಗೆ ಸಮಜಾಯಿಷಿ ನೀಡಿರುವ ಶಾ, ‘ಆ ರೀತಿ ನಮ್ಮ ಬಳಿ ಬಂದು ಮಾತನಾಡುವ ತಾಕತ್ತು ಅವರಲ್ಲಿ ಇದೆಯೇ’ ಎಂದು ಮರು ಪ್ರಶ್ನೆ ಹಾಕಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿ.ಎಸ್‌.ಯಡಿಯೂರಪ್ಪ ಬಿಟ್ಟು ಬೇರೆ ಯಾರನ್ನೂ ಮುಖ್ಯಮಂತ್ರಿ ಮಾಡುವ ಪ್ರಶ್ನೆಯೇ ಇಲ್ಲ. ಈ ವಿಚಾರದಲ್ಲಿ ಪಕ್ಷದ ಇತರ ಯಾವುದೇ ನಾಯಕರು ಮಧ್ಯ ಪ್ರವೇಶಿಸಲು ಅವಕಾಶವೇ ಇಲ್ಲ. ಯಾವುದೇ ನಾಯಕರು ಬಿಎಸ್‌ವೈ ನಾಯಕತ್ವ ಪ್ರಶ್ನಿಸುವಂತಿಲ್ಲ’ ಎಂದು ಹೇಳಿದ್ದಾರೆ.

‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸುವ ತೀರ್ಮಾನವನ್ನು ನಾವು ತೆಗೆದುಕೊಂಡಿದ್ದೇವೆ. ಒಂದು ವೇಳೆ ನಾವು ಅದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ದೇಶದಲ್ಲಿ ನಮ್ಮ ವಿಶ್ವಾಸಾರ್ಹತೆಗೇ ಧಕ್ಕೆ ಬರುತ್ತದೆ. ಮುಂದೆ ನಮ್ಮನ್ನು ಯಾರು ನಂಬುತ್ತಾರೆ’ ಎಂದಿದ್ದಾರೆ.

ಜನಾರ್ದನ ರೆಡ್ಡಿ ಸಹೋದರರು ತಾವಾಗಿಯೇ ಶ್ರೀರಾಮುಲು ಮತ್ತು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಿದ್ದರೆ ಅದಕ್ಕೆ ಏಕೆ ಆಕ್ಷೇಪ ವ್ಯಕ್ತಪಡಿಸಬೇಕು? ಮುಂಚೂಣಿಯಲ್ಲಿ ನಿಲ್ಲದೇ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರೆ, ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಅನುಕೂಲ ಆಗುತ್ತದೆ. ಪ್ರತಿಯೊಬ್ಬ ಅಭ್ಯರ್ಥಿಯ ಗೆಲುವೂ ಮುಖ್ಯ. ಹೀಗಾಗಿ ಎಲ್ಲ ಶಕ್ತಿಗಳನ್ನೂ ಬಳಸಿಕೊಳ್ಳಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜರ್ನಾದನ ರೆಡ್ಡಿ ಗಣಿ ಹಗರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಯಾವ ತೀರ್ಮಾನ ಪ್ರಕಟಿಸುತ್ತದೆಯೋ ಅದನ್ನು ಪಕ್ಷ ಗೌರವಿಸುತ್ತದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ನೆರವು ನೀಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನೂ ಅವರಿಗೆ ನೀಡಲಾಗುವುದು ಎಂದವರು ಹೇಳಿದ್ದಾರೆ.

ಅನಂತಕುಮಾರ್‌ ಹೆಗಡೆ ಅವರ ವಿವಾದಾತ್ಮಕ ಹೇಳಿಕೆಗಳಿಗಾಗಿ ಅವರನ್ನು ದೂರ ಇಡುವ ಅಗತ್ಯವಿಲ್ಲ. ಹಿಂದೆಯೂ ಅವರು ಇಂತಹುದೇ ಹೇಳಿಕೆಗಳನ್ನು ನೀಡುತ್ತಿದ್ದರು. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅವರು ಜನಪ್ರಿಯರಾಗಿದ್ದಾರೆ. ಆದ್ದರಿಂದ ಅವರನ್ನು ಹತ್ತಿಕ್ಕುವ ಕೆಲಸ ಮಾಡಬಾರದು ಎಂಬ ಸೂಚನೆಯನ್ನೂ ಅಮಿತ್‌ ಶಾ ನೀಡಿದ್ದಾರೆ.

ರಾಜ್ಯದಲ್ಲಿ ಸರ್ಕಾರದ ವಿರೋಧಿ ಅಲೆ ಇದೆ ಎಂಬುದು ಜನರ ಮಧ್ಯ ಓಡಾಡಿದವರಿಗೆ ಗೊತ್ತಾಗುತ್ತದೆ. ಸಮೀಕ್ಷೆಗಳು ಬಿಜೆಪಿ ಮತ್ತು ಕಾಂಗ್ರೆಸ್‌ ಸಮ ಬಲದಲ್ಲಿ ಇವೆ ಎಂದು ತೋರಿಸಬಹುದು. ಆದರೆ, ನನ್ನ ನಿರೀಕ್ಷೆಯ ಪ್ರಕಾರ, ಬಿಜೆಪಿ ಮಿಷನ್‌ 150ಕ್ಕೆ ಹತ್ತಿರ ಬಂದು ನಿಲ್ಲುತ್ತದೆ. ಮತದಾನೋತ್ತರ ಸಮೀಕ್ಷೆಯಲ್ಲಿ ಸತ್ಯಾಂಶ ಹೊರಗೆ ಬರುತ್ತದೆ. ಆದ್ದರಿಂದ ಧೈರ್ಯವಾಗಿ ಇರಬೇಕು ಎಂದು ಮುಖಂಡರಿಗೆ ಸೂಚಿಸಿದರು.

ಕೃಪೆ: ವಾಟ್ಸಪ್ಪ್