“ಹ್ಯಾಪಿ ವುಮೆನ್ಸ್ ಡೇ” ಎಂದು ಶುಭ ಕೋರುವ ಮುನ್ನ ಮಹಿಳಾ ದಿನಾಚರಣೆ ಬಗ್ಗೆ ನಿಮಗೆಷ್ಟು ಗೊತ್ತು.?

0

“ಹ್ಯಾಪಿ ವುಮೆನ್ಸ್ ಡೇ” ಎಂದು ಶುಭ ಕೋರಿದರು ಒಬ್ಬ ಹಿತಚಿಂತಕರು. ವಿದ್ಯೆ, ಕ್ರೀಡೆ, ರಾಜಕೀಯ, ಕಲೆ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮನಾಗಿ ನಿಂತು ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ ಬದುಕುತ್ತಿರುವ ಮಹಿಳೆಯರ ನೆನಪಾಗಿ ಮನ ಹರುಷಗೊಂಡಿತು. ಅಂಥವರು ಬೆರಳೆಣಿಕೆಯಷ್ಟು ಮಾತ್ರ. ಆದರೆ ನಿತ್ಯ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ, ಭ್ರೂಣ ಹತ್ಯೆ, ವೇಶ್ಯಾವಾಟಿಕೆ, ಆಸಿಡ್ ದಾಳಿ, ವರದಕ್ಷಿಣೆ ಹಿಂಸೆ, ಬಲಿ ಇವೂ ಕಣ್ಮುಂದೆ ಹಾಯ್ದು ‘ಮಹಿಳಾ ದಿನಾಚರಣೆ’ಗೆ ಅರ್ಥವಿದೆಯೇ ಎಂಬ ಕಟುಸತ್ಯ ಮನವನು ಇರಿಯಿತು. ಈ ದಿನಾಚರಣೆ ಬರೀ ಕ್ಯಾಲೆಂಡರ್‍, ಸಭೆ-ಸಮಾರಂಭಗಳಲ್ಲಿ ನಡೆಸುವ ಒಂದು ದಿನದ ಆಚರಣೆ ಮಾತ್ರ. ಈ ದಿನದ ಬಗ್ಗೆ ಅದೆಷ್ಟು ಮಹಿಳೆಯರಿಗೆ ಗೊತ್ತು?

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಪ್ರತಿ ವರ್ಷ ಮಾರ್ಚಿ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.

1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು.

ಕ್ಲಾರಾ ಜೆಟ್‌ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ೧೯೧೧ರಲ್ಲಿ ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಈ ಸಮ್ಮೇಳನದಲ್ಲಿ ಫಿನ್ಲೆಂಡ್‌ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಜೆಟ್‌ಕಿನ್‌ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.

1911ರಲ್ಲಿ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಕ್ಕೂ ಮೊದಲು 1903ರಲ್ಲಿ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡವು.

1908ರ ಫೆಬ್ರುವರಿ ಕೊನೆಯ ಭಾನುವಾರ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ನಂತರ 1909ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000ದಿಂದ 30,000ದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು. ಮಹಿಳೆಯರ ಟ್ರೇಡ್ ಯೂನಿ ಯನ್ ಲೀಗ್‌ನವರು ಜಾಮೀನು ನೀಡಿ ಬಂಧಿತ ಕೆಲಸ ಗಾರರನ್ನು ಬಿಡಿಸಿಕೊಂಡರು. ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್‌ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದರು.

ವಿಶ್ವಸಂಸ್ಥೆ 1975ರಲ್ಲಿ ಈ ದಿನವನ್ನು “ವಿಶ್ವ ಮಹಿಳಾ ದಿನ” ಎಂದು ಘೋಷಿಸಿತು. ದುಡಿವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಕ್ಕೆ “ಮಹಿಳಾ ದಿನ” ಆಚರಿಸಲಾಗುತ್ತದೆ. ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ.

ಬಹುತೇಕ ಪ್ರಮುಖ ಹುದ್ದೆಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ರಾರಾಜಿಸುತ್ತಿದ್ದಾಳೆ. ಇವತ್ತು ಮಹಿಳೆ ಉತ್ತಮ ಶಿಕ್ಷಣ ಪಡೆಯುತ್ತಿದ್ದಾಳೆ. ಒಳಮನೆ ಮಾತ್ರವೇ ಅಲ್ಲ ಹೊರ ಜಗತ್ತಿನ ಅರಿವೂ ಆಕೆಗೆ ಆಗಿದೆ. ಯಾರನ್ನು ಹೇಗೆ ಎಲ್ಲಿ ನಿಭಾಯಿಸಬೇಕೆಂಬ ಕಲೆಯೂ ಕರಗತವಾಗಿದೆ. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ತಾಳ್ಮೆ ಮತ್ತು ಚಾಕಚಕ್ಯತೆ ಆಕೆಯ ರಕ್ತದಲ್ಲೇ ಇದೆ. ಅದಕ್ಕೀಗ ವೇದಿಕೆ ದೊರಕುತ್ತಿದೆಯಷ್ಟೆ. ಆದರೆ ಇಡೀ ದಿನ ಮನೆಯಲ್ಲಿ ದುಡಿಯುವ ಹೆಂಡತಿ/ತಾಯಿ/ಅಕ್ಕ-ತಂಗಿಯರ ಪರಿಶ್ರಮಕ್ಕೂ ಒಂದು ಪ್ರೋತ್ಸಾಹ, ಶಹಬಾಸ್‍ಗಿರಿ ಸಿಗಬೇಕು, ಹೌದಲ್ಲವೇ?

ವಿಶ್ವಸಂಸ್ಥೆ 1975ರಲ್ಲಿ ಈ ದಿನವನ್ನು “ವಿಶ್ವ ಮಹಿಳಾ ದಿನ” ಎಂದು ಘೋಷಿಸಿತು. ದುಡಿವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಕ್ಕೆ “ಮಹಿಳಾ ದಿನ” ಆಚರಿಸಲಾಗುತ್ತದೆ. ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ. [ಸಹನೆಯ ಸಾಕಾರ ಮೂರ್ತಿಗಿರಲಿ ನಮ್ಮದೊಂದು ಸಲಾಮ್]

ಉದ್ಯೋಗ ಕ್ಷೇತ್ರದಲ್ಲಿ ಹೆಣ್ಣು ಗಂಡಿಗೆ ಸರಿಸಮಾನ ಎಂದು ತೋರಿಸಿಕೊಂಡಿದ್ದರೂ, ಹಲವೆಡೆಗಳಲ್ಲಿ ಇನ್ನೂ ನಡೆಯುತ್ತಿರುವ ಲಿಂಗ ತಾರತಮ್ಯ, ಹೆಣ್ಣು ಭ್ರೂಣಹತ್ಯೆ, ಅತ್ಯಾಚಾರ ಇವುಗಳನ್ನು ತಡೆಯಬೇಕು. ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ಮೌಲ್ಯಗಳು ನಮ್ಮ ಸಮಾಜದ ಕಣ್ಣುಗಳಾಗಬೇಕು. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪುರುಷರ ನೈತಿಕ ಬೆಂಬಲ ದೊರಕಬೇಕು.

‘ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ತತ್ರ ದೇವತಾಃ’ ಎಂಬ ಮಾತು ಕೇವಲ ಮಾತಾಗಿಯೇ ಇರಬಾರದು, ಅದನ್ನು ಆಚರಣೆಗೆ ತರಬೇಕು. ಆಗ ಮಾತ್ರ ಈ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಒಂದು ಒಳ್ಳೆಯ ಸ್ಥಾನ ಸಿಗಲು ಸಾಧ್ಯ. ಹೀಗಾದಲ್ಲಿ ಮಾತ್ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶ ಅರ್ಥಪೂರ್ಣ. ಮಹಿಳೆಯರಿಗೆ “ಮಹಿಳಾ ದಿನಾಚರಣೆಯ ಶುಭಾಶಯಗಳು”.