ಜೇಬಿನೊಳಗೆ ಭಗವದ್ಗೀತೆಯ ಹಾಳೆ ಇಟ್ಟುಕೊಂಡು ಹೋರಾಡುತ್ತಿದ್ದ ಆ ವೀರಯೋಧ ಕಾಶ್ಮೀರ ನಮ್ಮ ಕೈಗಿಟ್ಟು ಹೆಣವಾದ….!

ಜೇಬಿನೊಳಗೆ ಭಗವದ್ಗೀತೆಯ ಹಾಳೆ ಇಟ್ಟುಕೊಂಡು ಹೋರಾಡುತ್ತಿದ್ದ ಆ ವೀರಯೋಧ ಕಾಶ್ಮೀರ ನಮ್ಮ ಕೈಗಿಟ್ಟು ಹೆಣವಾದ….!

0

1923 ಜನವರಿ 31ರಂದು ಹಿಮಚಲ್ ಪ್ರದೇಶದ ಪಾಲಂ ಜಿಲ್ಲೆಯಲ್ಲಿ ಯೋಧರನ್ನೇ ತುಂಬಿಕೊಂಡಿರುವ ಕುಟುಂಬವೊಂದರಲ್ಲಿ ಸೋಮನಾಥ್ ಎನ್ನುವಾತ ಜನಿಸುತ್ತಾನೆ. ಸೋಮನಾಥ್ ಚಿಕ್ಕವಯಸ್ಸಿನಿಂದಲೂ ಒಬ್ಬ ಉತ್ತಮ ಆಟಗಾರನಾಗಿದ್ದರು. ಸೋಮನಾಥ್ ಅವರ ಅಪ್ಪ ಮೇಜರ್ ಜನರಲ್ ಅಮರ್‌ನಾಥ್ ಶರ್ಮಾ ಮಿಲಿಟರಿಯಲ್ಲಿ ವೈದ್ಯಕೀಯ ಸೇವೆಯ ಮುಖ್ಯಸ್ಥರಾಗಿದ್ದವರು. ಒಬ್ಬ ಸಹೋದರ ಲೆಫ್ಟಿನೆಂಟ್ ಜನರಲ್ ಸುರೀಂದರ್‌ನಾಥ್ ಶರ್ಮಾ ಸೇನೆಯಲ್ಲೇ ಮುಖ್ಯ ಎಂಜಿನಿಯರ್ ಆಗಿದ್ದರು. ಇನ್ನೊಬ್ಬ ವಿಶ್ವನಾಥ್ ಶರ್ಮಾ 1988ರಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿ ನಿವೃತ್ತರಾದವರು. ಸಹೋದರಿ ಮೇಜರ್ ಕಮಲಾ ತಿವಾರಿ ಸೇನೆಯಲ್ಲೇ ವೈದ್ಯೆಯಾಗಿದ್ದರು.

ಆದರೆ ಸೋಮನಾಥರ ಮೇಲೆ ಬಹುವಾಗಿ ಪ್ರಭಾವ ಬೀರಿದ್ದು ಜಪಾನಿ ಸೇನೆಯ ಜತೆ ನಡೆದ ಕಾಳಗದಲ್ಲಿ ಪ್ರಾಣಾರ್ಪಣೆ ಮಾಡಿದ ಚಿಕ್ಕಪ್ಪ ಕ್ಯಾಪ್ಟನ್ ಕೃಷ್ಣದತ್ ವಾಸುದೇವ್. ಚಿಕ್ಕಪ್ಪನಂತೆ ತಾನೂ ರಣರಂಗದಲ್ಲಿ ಹೋರಾಡಬೇಕೆಂಬ ತುಡಿತವನ್ನಿಟ್ಟುಕೊಂಡಿದ್ದ ಸೋಮನಾಥ, 11ನೇ ವರ್ಷಕ್ಕೆ ಅಂದರೆ 1934ರಲ್ಲಿ ರಾಯಲ್ ಇಂಡಿಯನ್ ಮಿಲಿಟರಿ ಅಕಾಡೆಮಿ ಸೇರಿಕೊಂಡ.

ಏಳು ವರ್ಷಗಳ ಕಾಲ ಪರಿಶ್ರಮಪಟ್ಟು ಓದಿ ತೇರ್ಗಡೆಯಾದ ಸೋಮನಾಥರನ್ನು 1942 ಫೆಬ್ರವರಿ 22ರಂದು ಬ್ರಿಟಿಷ್ ಸೇನೆಯ ‘ಹೈದರಾಬಾದ್ ರೆಜಿಮೆಂಟ್’ ಗೆ ಸೇರ್ಪಡೆ ಮಾಡಲಾಯಿತು. ಅದರ ಬೆನ್ನಲ್ಲೇ ಮೊದಲ ಸತ್ವಪರೀಕ್ಷೆಯೂ ಎದುರಾಯಿತು. ಅದಾಗಲೇ ಎರಡನೇ ಮಹಾಯುದ್ಧ ಆರಂಭವಾಗಿ ಮೂರು ವರ್ಷಗಳಾಗಿದ್ದವು. ಭಾರತವನ್ನಾಳುತ್ತಿದ್ದ ಬ್ರಿಟಿಷರನ್ನು ಜಪಾನಿ ಸೇನೆ ನಿದ್ದೆಗೆಡಿಸಿತ್ತು. ಬರ್ಮಾ ಮೂಲಕ ಭಾರತದ ಮೇಲೆ ಆಕ್ರಮಣ ಮಾಡಲು ಯತ್ನಿಸುತ್ತಿದ್ದ ಜಪಾನಿ ಸೇನೆಯನ್ನು ಅರಕ್ಕಾನ್‌ನಲ್ಲಿ ಎದುರಿಸಲಾಯಿತು. ಆ ಕಾರ್ಯಾಚರಣೆಯಲ್ಲಿ ಬ್ರಿಟಿಷ್ ಸೇನೆಯನ್ನು ಮುನ್ನಡೆಸು ತ್ತಿದ್ದವರು ನಮ್ಮ ಜನರಲ್ ಕೆ.ಎಸ್. ತಿಮ್ಮಯ್ಯ. ಅಂತಹ ವೀರಸೇನಾನಿಯ ಕೆಳಗೆ ಯುವ ಲೆಫ್ಟಿನೆಂಟ್ ಸೋಮನಾಥ ಶರ್ಮಾ ಮೊದಲ ಯುದ್ಧಪಾಠ ಕಲಿಯಲಾರಂಭಿಸಿದರು. 1945ರ, ಸೆಪ್ಟೆಂಬರ್‌ನಲ್ಲಿ ಜಪಾನ್ ಶರಣಾಗುವುದರೊಂದಿಗೆ ಸೋಮನಾಥ ಶರ್ಮಾ ಮುರಿದ ಕೈಯೊಂದಿಗೆ ದೇಶಕ್ಕೆ ವಾಪಸ್ಸಾದರು.

ಅದು ಮನೆಯವರಿರಲಿ, ಸ್ನೇಹಿತರಿರಲಿ ಎಲ್ಲರೂ ಆತನನ್ನು ಪ್ರೀತಿಯಿಂದ ಪುಟ್ಟದಾಗಿ ‘ಸೋಮ್’ ಎಂದೇ ಕರೆಯುತ್ತಿದ್ದರು. ಸೋಮನಾಥನಿಗೆ ಅಚ್ಚುಮೆಚ್ಚಿನ ವಿಷಯವೆಂದರೆ ಅಜ್ಜ ಪಂಡಿತ್ ದೌಲತ್ ರಾಮ್ ಅವರು ಹೇಳುತ್ತಿದ್ದ ಭಗವದ್ಗೀತೆಯ ಕಥೆಗಳು. 1943ರಲ್ಲಿ ತನ್ನ ತಂದೆಗೆ ಬರೆದ ಪತ್ರವೊಂದರಲ್ಲಿ ಸೋಮನಾಥ್ “ನಾನು ಸಿಕ್ಕ ಕರ್ತವ್ಯವನ್ನು ಚಾಚುತಪ್ಪದೆ ಪಾಲಿಸುತ್ತಿದ್ದೇನೆ. ಈ ಮದ್ಯೆ ಸಾವಿನ ಕ್ಷಣಿಕ ಬಯವೂ ಇದೆ. ಆದರೆ ಯಾವಾಗ ಭಗವದ್ಗೀತೆಯನ್ನು ನೆನೆಸಿಕೊಳ್ಳುತೇನೋ ಆಗ ನನ್ನ ಭಯ ಮಾಯವಾಗುತ್ತದೆ. ಜಗದೊಡೆಯ ಕೃಷ್ಣ ‘ಆತ್ಮ ಅಮರ’ ಎಂದಿದ್ದಾನೆ ಅಲ್ಲವೇ ಹಾಗಿದ್ದಾಗ ನನ್ನ ದೇಹ ನಷ್ಟವಾದರೇನು? ಅಪ್ಪ, ಮಾತುಕೊಡುತ್ತೇನೆ ನಿಮಿಗ್ಯಾವ ಅಂಜಿಕೆಯೂ ಬೇಡ, ನಿಮ್ಮ ಮಗ ಸಾವಿಗೆ ಹೆದರದೆ ವೀರಾವೇಶದಿಂದ ಹೊರಾಡಿ ಒಬ್ಬ ಮಾದರಿ ಸೈನಿಕನಾಗುತ್ತಾನೆ.!!”

ಅದೇ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಆಘಾತವುಂಟಾಗುವ ಲಕ್ಷಣಗಳು ಗೋಚರಿಸಲಾರಂಭಿಸಿದವು. 1947ರ ಅಕ್ಟೋಬರ್ ತಿಂಗಳಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಸಂದೇಶವೊಂದು ಬಂತು. ಪಾಕಿಸ್ತಾನ ಕಾಶ್ಮೀರದ ಗಡಿಯತ್ತ ತನ್ನ ಶಸ್ತ್ರಸಜ್ಜಿತ ಪಡೆಯನ್ನು ನಿಯೋಜಿಸುತ್ತಿರುವ ಸುದ್ದಿ ಅದಾಗಿತ್ತು.ಆದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲು ಜಮ್ಮು-ಕಾಶ್ಮೀರ ಭಾರತದ ಭಾಗವಾಗಿರಲಿಲ್ಲ. ಒಂದೆಡೆ ರಾಜ ಹರಿಸಿಂಗ್ ಕಾಶ್ಮೀರವನ್ನು ಭಾರತದೊಂದಿಗೇ ವಿಲೀನಗೊಳಿಸಲು ನಿರಾಕರಿಸಿದರೆ, ಪಾಕ್ ವಿರುದ್ಧ ಆಯಾಚಿತವಾಗಿ ಕ್ರಮಕೈಗೊಳ್ಳಲು ಪ್ರಧಾನಿ ನೆಹರು ಒಪ್ಪದಾದರು. ಆದರೆ ಕೇವಲ ಎರಡೇ ವಾರಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಅಕ್ಟೋಬರ್ 22ರಂದು ವೇಷ ಬದಲಾಯಿಸಿಕೊಂಡಿದ್ದ ಪಾಕಿಸ್ತಾನಿ ಸೈನಿಕರು ಜಮ್ಮು-ಕಾಶ್ಮೀರಕ್ಕೆ ಸೇರಿದ್ದ ಮುಜಫರಾಬಾದ್ ಮೇಲೆ ಆಕ್ರಮಣ ಮಾಡಿ, ಆಸ್ತಿ-ಪಾಸ್ತಿಗೆ ಬೆಂಕಿ ಹಚ್ಚಿ ಉರಿಯನ್ನು ವಶಪಡಿಸಿಕೊಂಡು 50ಕೀ.ಮಿ ದೂರದಲ್ಲಿದ್ದ ಶ್ರೀನಗರದ ವಿದ್ಯುತ್ ಸಂಪರ್ಕವನ್ನೇ ಕಡಿದು ಕತ್ತಲಲ್ಲಿ ಮುಳುಗಿಸಿದರು.

ಈ ರೀತಿ ನಾಟಕೀಯ ತಿರುವು ಪಡೆದುಕೊಂಡ ಪರಿಸ್ಥಿತಿಯ ಮೇಲೆ ನಿಗಾಯಿಟ್ಟಿದ್ದ ಆಗಿನ ಗೃಹ ಸಚಿವ ಸರ್ದಾರ್ ಪಟೇಲರು ತಮ್ಮ ಆಪ್ತ ಸಹಚರ ವಿ.ಪಿ. ಮೆನನ್ ಅವರನ್ನು ಜಮ್ಮು-ಕಾಶ್ಮೀರಕ್ಕೆ ಕಳುಹಿಸಿ ಭಾರತದೊಂದಿಗೆ ವಿಲೀನಗೊಳ್ಳುವ ಪ್ರಸ್ತಾವಕ್ಕೆ ಸಹಿಹಾಕಲು ಮಹಾರಾಜ ಹರಿಸಿಂಗ್ ಅವರ ಮನವೊಲಿಸಿದರು. ಅಲ್ಲದೆ ವಿಲೀನ ಪತ್ರಕ್ಕೆ ಸಹಿಯನ್ನೂ ಹಾಕಿಸಿಕೊಂಡರು. ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸಲು ದಿಲ್ಲಿಯಲ್ಲಿ ಆಗಿನ ಭಾರತದ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಅವರ ಕಚೇರಿಯಲ್ಲಿ ಐತಿಹಾಸಿಕ ಸಭೆ ಏರ್ಪಾಡಾಯಿತು. ಆದರೆ ಅಂತಹ ಗಂಭೀರ ಸನ್ನಿವೇಶದಲ್ಲೂ ‘ವಿಶ್ವಸಂಸ್ಥೆ, ರಷ್ಯಾ, ಆಫ್ರಿಕಾ, ದೇವರುದಿಂಡಿರು’ ಅಂತ ನೆಹರು ಹುಂಬತನದಿಂದ ಮಾತನಾಡುತ್ತಿದ್ದರು. ಆದರೆ ತಾಳ್ಮೆ ಕಳೆದುಕೊಂಡ ಸರ್ದಾರ್ ಪಟೇಲ್, “ಜವಾಹರ್, ನಿನಗೆ ಕಾಶ್ಮೀರ ಬೇಕೋ ಅಥವಾ ಕಾಶ್ಮೀರವನ್ನು ಧಾರೆ ಎರೆಯುತ್ತೀಯೋ?” ಎಂದು ಏರು ಧ್ವನಿಯಲ್ಲಿ ಕೇಳಿದರು. ಸರ್ದಾರ್ ಮಾತಿಗೆ ಹೆದರಿದ ನೆಹರು “ಖಂಡಿತ, ನನಗೆ ಕಾಶ್ಮೀರ ಬೇಕು” ಎಂದರು. ಹಾಗಾದರೆ “ಅನುಮತಿ ಕೊಡು” ಎಂದು ಮತ್ತೆ ಗದರಿಸಿದರು. ನೆಹರು ಅನುಮತಿಯೂ ದೊರೆಯಿತು. ಎಲ್ಲವೂ ತ್ವರಿತವಾಗಿ ಸಂಭವಿಸಲಾರಂಭಿಸಿದವು.

ಮರುದಿನ ಬೆಳಗ್ಗೆ ದಿಲ್ಲಿಯ ಪಾಲಂ ಏರ್‌ಪೋರ್ಟ್ ನಿಂದ ಶ್ರೀನಗರಕ್ಕೆ ಸೇನೆ ಹಾಗೂ ಯುದ್ಧ ಸಾಮಗ್ರಿಗಳನ್ನು ಕಳುಹಿಸಿಕೊಡಲಾಯಿತು. ಹಾಗೆ ಶ್ರೀನಗರಕ್ಕೆ ಆಗಮಿಸಿದ ಯುವ ಸೈನಿಕ ಈ ಸೋಮನಾಥ್. “ಭಾರತೀಯ ಸೈನಿಕರ ಮುಖದಲ್ಲಿ ಅಂಥದ್ದೊಂದು ಉತ್ಸಾಹ, ಏನಾದರೂ ಮಾಡಬೇಕೆಂಬ ಛಲವನ್ನು ಹಿಂದೆಂದೂ ಕಂಡಿರಲಿಲ್ಲ.

1947 ನವೆಂಬರ್ 3ರಂದು ಪಾಕಿಸ್ತಾನದ ವಿರುದ್ಧ ಯುದ್ಧ ಪ್ರಾರಂಭವಾಗಿಯೇ ಬಿಟ್ಟಿತು.ಕೈ ತುಂಡಾಗಿದ್ದ ಸೋಮನಾಥಿಗೆ ಶ್ರೀನಗರದ ವಿಮಾನ ನಿಲ್ದಾಣದ ಭದ್ರತಾ ಜವಾಬ್ದಾರಿ ವಹಿಸಲಾಯಿತು. ಪಾಕಿಸ್ತಾನಿ ಸೈನಿಕರು ಶ್ರೀನಗರಕ್ಕೆ ತೀರಾ ಸಮೀಪದಲ್ಲಿರುವ ಬದ್ಗಾಂವರೆಗೂ ಆಗಮಿಸಿದರು. ಒಂದು ವೇಳೆ, ಶ್ರೀನಗರ ವಿಮಾನ ನಿಲ್ದಾಣವೇನಾದರೂ ಪಾಕಿಸ್ತಾನಿ ಸೈನಿಕರ ಕೈವಶವಾದರೆ ಅಲ್ಲಿಗೆ ಕಾಶ್ಮೀರ ಶಾಶ್ವತವಾಗಿ ಭಾರತದ ಕೈತಪ್ಪಿಹೋದಂತೆಯೇ.

ಅಷ್ಟಕ್ಕೂ ವಿಮಾನ ನಿಲ್ದಾಣ ಕೈತಪ್ಪಿದರೆ ಕಾದಾಡುತ್ತಿದ್ದ ನಮ್ಮ ಸೇನೆಗೆ ಯುದ್ಧಸಾಮಗ್ರಿಗಳನ್ನು ಪೂರೈಸುವುದಕ್ಕೇ ಕುತ್ತು ಎದುರಾಗುತ್ತಿತ್ತು. ಸೋಲು ಖಚಿತವಾಗುತ್ತಿತ್ತು. ಶ್ರೀನಗರಕ್ಕೆ ಕಾಲಿಡುವವರೆಗೂ ಕೈಕಟ್ಟಿಕೊಂಡು ಕುಳಿತರೆ ಅಪಾಯ ಖಂಡಿತ ಎಂದರಿತ ಸೋಮನಾಥ ಶರ್ಮಾ, ಕೈ ಮುರಿದಿರುವುದನ್ನೂ ಲೆಕ್ಕಿಸದೇ ಸೇನಾ ತುಕಡಿಯನ್ನು ಕೊಂಡೊಯ್ದು ಬದ್ಗಾಂನಲ್ಲೇ ಶತ್ರುವಿಗೆ ಸವಾಲೆಸೆದರು. ಆದರೆ ಬೃಹತ್ ಸಂಖ್ಯೆಯಲ್ಲಿದ್ದ ಪಾಕಿಸ್ತಾನಿ ಸೈನಿಕರು ನಮ್ಮ ಒಬ್ಬ ಸೈನಿಕನಿಗೆ ಪ್ರತಿಯಾಗಿ ಸುಮಾರು ಜನರಿದ್ದರು! ಆದರೂ ತುರ್ತು ಪಡೆ ಆಗಮಿಸುವವರೆಗೂ ಹೋರಾಡಬೇಕಾಗಿತ್ತು. ಶತ್ರು ಒಂದು ಇಂಚೂ ಮುಂದೆ ಬಾರದಂತೆ ತಡೆಯಬೇಕಿತ್ತು. ಮಧ್ಯಾಹ್ಮ 2.30ಕ್ಕೆ ಕಾದಾಟ ಆರಂಭವಾಯಿತು. “ಶತ್ರುಗಳು ನಮ್ಮಿಂದ ಕೇವಲ 50 ಯಾರ್ಡ್ ದೂರದಲ್ಲಿದ್ದಾರೆ, ಭಾರೀ ಸಂಖ್ಯೆಯಲ್ಲೂ ಇದ್ದಾರೆ. ಆದರೇನಂತೆ ಕೊನೆಯ ಶತ್ರುವನ್ನು ಕೆಳಗೆ ಕೆಡವುವವರೆಗೂ, ಕಡೆಯ ಸುತ್ತಿನ ಗುಂಡು ಮುಗಿಯುವವರೆಗೂ ಹೋರಾಡುವೆ” ಎಂಬ ವೈರ್‌ಲೆಸ್ ಸಂದೇಶ ಕಳುಹಿಸಿದ ಸೋಮನಾಥ ಶರ್ಮಾ ಮುರಿದ ಕೈಯಲ್ಲೇ ಬಂದೂಕು ಹಿಡಿದು ಶತ್ರುವಿನ ಮೇಲೆ ಮುಗಿಬಿದ್ದರು. ಅದೇ ಅವರ ಕೊನೆಯ ಸಂದೇಶವೂ ಆಗಿತ್ತು! ಕಾದಾಟದಲ್ಲಿ ಹೈದರಾಬಾದ್ ರೆಜಿಮೆಂಟ್‌ನ ಅರ್ಧಕ್ಕರ್ಧ ಸೈನಿಕರು ಹತರಾದರು.

ಆದರೇನಂತೆ 200ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನೂ ಕೊಂದುಹಾಕಿದ ಭಾರತೀಯ ಯೋಧರು, ಶತ್ರುಗಳು ಮುಂದೆ ಹೆಜ್ಜೆ ಹಾಕಲು ಬಿಡಲಿಲ್ಲ. ಅಷ್ಟರಲ್ಲಿ ಸಾಯಂಕಾಲವಾಯಿತು, ತುರ್ತುಪಡೆಯೂ ಆಗಮಿಸಿತು. ಪಾಕಿಸ್ತಾನವನ್ನು ಮಟ್ಟಹಾಕಲಾಯಿತು. ಆದರೆ ಶತ್ರುಗಳನ್ನು ತಡೆದು ನಿಲ್ಲಿಸಿದ ಮೇಜರ್ ಸೋಮನಾಥ್ ಶರ್ಮಾ ಹೆಣವಾಗಿದ್ದರು. ಇತಿಹಾಸದ ಪುಟದಲ್ಲಿ ಅವರ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗಿತ್ತು.

ಮೂರು ದಿನಗಳ ನಂತರ ಅವರ ದೇಹ ಪತ್ತೆಯಾಯಿತು. ತೀವ್ರ ಗುಂಡೇಟುಗಳಿಂದಾಗಿ ವಿರೂಪಗೊಂಡಿದ್ದ ದೇಹ ಅವರದ್ದೇ ಎಂದು ಸಾರಿ ಹೇಳಿದ್ದು ಎದೆಯ ಜೇಬಿನಲ್ಲಿದ್ದ ಭಗವದ್ಗೀತೆಯ ಹಾಳೆಗಳು! ಪವಿತ್ರ ಭಗವದ್ಗೀತೆಯ ಬಗ್ಗೆ ಅಪೂರ್ವಾದ ಪ್ರೀತಿ ಶ್ರದ್ದೆ ಹೊಂದಿದ್ದ ಸೋಮನಾಥ್, ಗೀತೆಯಜೊತೆಗೆ ಉಸಿರು ಕಳಕೊಂಡದ್ದು ವಿಶೇಷ. ಅದುವರೆಗೂ ಯುದ್ಧ ಕಾಲದಲ್ಲಿ ತೋರುವ ಶೌರ್ಯಕ್ಕಾಗಿ ನೀಡುತ್ತಿದ್ದ ಅತಿದೊಡ್ಡ ಗೌರವವೆಂದರೆ ‘ವಿಕ್ಟೋರಿಯಾ ಕ್ರಾಸ್’ ಆಗಿತ್ತು. ಆದರೆ ಸ್ವಾತಂತ್ರ್ಯಾ ನಂತರ ದಾಸ್ಯದ ಸಂಕೇತವಾಗಿದ್ದ ವಿಕ್ಟೋರಿಯಾ ಕ್ರಾಸ್ ಬದಲು ‘ಪರಮವೀರ ಚಕ್ರ’ವನ್ನು ರೂಪಿಸಲಾಯಿತು. ಪರಮವೀರ ಚಕ್ರ ಪಡೆದ ಮೊದಲ ಭಾರತೀಯ ಮೇಜರ್ ಸೋಮನಾಥ್ ಶರ್ಮರಾದರು. ಸೋಮನಾಥ್ 1999ರಲ್ಲಿ ಮರಣೋತ್ತರವಾಗಿ ಪರಮವೀರ ಚಕ್ರ ಪಡೆದ ಕಾರ್ಗಿಲ್ ಕಲಿ ಧೀರ ವಿಕ್ರಂ ಬಾತ್ರಾ ಇಬ್ಬರೂ ಹಿಮಾಚಲ ಪ್ರದೇಶದ ಪಾಲಂಪುರ ಊರಿನವರು.

ಇಂತಹ ವೀರ ಯೋಧನನ್ನು ರಕ್ಷಕನಾಗಿ ಪಡೆದ ನಾವೇ ಭಾಗ್ಯವಂತರು! ಪವಿತ್ರ ಭಗವದ್ಗೀತೆ ತನ್ನ ಉಸಿರು ಎಂದು ಅದುಕೊಂಡಿದ್ದ ಸೋಮ್ ಅಮರ,ಅಜರಾಮರ.!

✍ಸಚಿನ್ ಜೈನ್ ಹಳೆಯೂರ್