ಅಟ್ಟ ಖಾರ / ಉತ್ತರ ಕರ್ನಾಟಕದ ಸ್ಪೆಷಲ್ ಬೇಳೆ ಹಾಕಿ ಮಾಡುವ ಅಟ್ಟಖಾರ ಹೇಗೆ ಮಾಡುವುದು ಗೊತ್ತೇ??

ಅಟ್ಟ ಖಾರ / ಉತ್ತರ ಕರ್ನಾಟಕದ ಸ್ಪೆಷಲ್ ಬೇಳೆ ಹಾಕಿ ಮಾಡುವ ಅಟ್ಟಖಾರ ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಉತ್ತರ ಕರ್ನಾಟಕದಲ್ಲಿ ಊಟಕ್ಕೆ ಸಾಕಷ್ಟು ಬಗೆಯ ಪಲ್ಯ, ಸಾರುಗಳನ್ನ ಮಾಡುತ್ತಾರೆ. ಅದರಲ್ಲೂ ಖಾರಾ ಬಳಸುವುದರಲ್ಲಂತೂ ಉತ್ತರ ಕರ್ನಾಟಕದ ಮಂದಿ ಎತ್ತಿದ ಕೈ. ಜೋಳದ ರೊಟ್ಟಿ ಹಾಗೂ ಅದಕ್ಕೆ ಹೊಂದುಕೊಂಡ ವಿವಿಧ ಖಾರಾ ಚಟ್ನಿ, ಪಲ್ಯಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಅಂಥ ಒಂದು ಅದ್ಭುತ ರುಚಿಯನ್ನು ಹೊಂದಿರುವ ವಿಶೇಷವಾದ ಅಟ್ಟ ಖಾರಾ ಮಾಡೋಡು ಹೇಗೆ? ಇಲ್ಲಿದೆ ರೆಸಿಪಿ.

ಅಟ್ಟ ಖಾರಾ ಮಾಡೋದಕ್ಕೆ ಬೇಕಾಗುವ ಸಾಮಗ್ರಿಗಳು: ಮಸೂರ್ ದಾಲ್-ಅರ್ಧ ಕಪ್, ಹಸಿಮೆಣಸು -250 ಗ್ರಾಂ, ಗುರೆಳ್ಳು ಪುಡಿ – ಸ್ವಲ್ಪ, ಇಂಗು ಹಾಗೂ ಕೊಬ್ಬರಿ ಸ್ವಲ್ಪ. ಹುಣಸೇ ಹಣ್ಣು, ಬೆಲ್ಲ ಸ್ವಲ್ಪ, ಬೆಳ್ಳುಳ್ಳಿ ಸ್ವಲ್ಪ, ಅರಿಶಿನ, ಸಾಸಿವೆ, ಜೀರಿಗೆ, ಸಣ್ಣ ಗಾತ್ರದ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವು ಹೆಚ್ಚಿಟ್ಟುಕೊಂಡಿದ್ದು, ಉಪ್ಪು ರುಚಿಗೆ.

ಅಟ್ಟ ಖಾರ ಮಾಡೋದು ಹೀಗೆ: ಮಸೂರ್ ಬೇಳೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿಡಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಹಸಿಮೆಣಸು ಹೆಚ್ಚಿಕೊಂಡಿದ್ದು, ಬೆಳ್ಳುಳ್ಳಿ, ಹಾಗೂ ಕೊಬ್ಬರಿ ಹಾಕಿ ಹುರಿಯಿರಿ. ಕಡಿಮೆ ಖಾರಾ ಇರುವ ಮೆಣಸು ತೆಗೆದುಕೊಳ್ಳಬಹುದು. ನಂತರ ಉಪ್ಪನ್ನು ಹಾಕಿ ಹುರಿದುಕೊಂಡ ಮಿಶ್ರಣವನ್ನು ಕುಟ್ಟಿ ಪುಡಿ ಮಾಡಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಸಾಸಿವೆ, ಇಂಗು, ಜೀರಿಗೆ ಹಾಕಿ. ನಂತರ ಹೆಚ್ಚಿಟ್ಟುಕೊಂಡ ಕರಿಬೇವು ಹಾಕಿ ಹುರಿಯಿರಿ, ನಂತರ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಅರಿಶಿನ, ಗುರೆಳ್ಳು ಪುಡಿ, ಬೆಲ್ಲ ಹಾಗೂ ಹುಣಸೇ ಹಣ್ಣನ್ನು ಹಾಕಿ ಮತ್ತೆ ಚೆನ್ನಾಗಿ ಹುರಿಯಿರಿ. ಇದಕ್ಕೆ ನೆನೆಸಿಕೊಂಡ ಮಸೂರ್ ಬೇಳೆಯನ್ನು ಹಾಕಿ. ಮಸೂರ್ ಬೆಳೆ ಬದಲು ಹೆಸರು ಬೇಳೆ ಬಳಸಬಹುದು. ಇದನ್ನು ಸ್ವಲ್ಪ ಹುರಿದು ನಂತರ ಕುಟ್ಟಿಕೊಂಡ ಹಸಿಮೆಣಸನ್ನು ಹಾಕಿ ಮಿಶ್ರಣ ಮಾಡಿ. ಇದನ್ನು ಒಂದು 10 ನಿಮಿಷಗಳ ಕಾಲ ಬೇಯಿಸಿ. ಕೊನೆಯಲ್ಲಿ ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ. ಇದು ಚೆನ್ನಾಗಿ ಮಿಶ್ರಣಗೊಂಡಾಗ ಬಾಣಲೆಯಲ್ಲಿ ಎಣ್ಣೆಬಿಡಲು ಶುರುವಾಗುತ್ತದೆ. ಆಗ ಬಾಣಲೆಯನ್ನು ಕೆಳಗಿಳಿಸಿ. ಈ ಅಟ್ಟ ಖಾರಾ ರೊಟ್ಟಿ, ದೋಸೆ, ಅನ್ನ ಎಲ್ಲದಕ್ಕೂ ಸೂಪರ್ ಕಾಂಬಿನೇಷನ್. ಸ್ನೇಹಿತರೆ ಇನ್ಯಾಕ್ ತಡ ನಿಮ್ಮನೆಯಲ್ಲೂ ಒಮ್ಮೆ ಮಾಡಿ ನೋಡಿ ಖಾರವಾದ ಅಟ್ಟ ಖಾರಾ!