ಕರ್ನಾಟಕ ಶೈಲಿಯ ಖಾರ ಪೊಂಗಲ್ ಅನ್ನು ಸುಲಭವಾಗಿ ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ??

ಕರ್ನಾಟಕ ಶೈಲಿಯ ಖಾರ ಪೊಂಗಲ್ ಅನ್ನು ಸುಲಭವಾಗಿ ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಕರ್ನಾಟಕ ಶೈಲಿಯ ಖಾರ ಪೊಂಗಲ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಖಾರ ಪೊಂಗಲ್ ಮಾಡಲು ಬೇಕಾಗುವ ಸಾಮಗ್ರಿಗಳು: ಅರ್ಧ ಬಟ್ಟಲು ಹೆಸರುಬೇಳೆ, ಅರ್ಧ ಬಟ್ಟಲು ಅಕ್ಕಿ, ಕಾಲು ಚಮಚ ಅರಿಶಿನ ಪುಡಿ, ಅರ್ಧ ಬಟ್ಟಲು ತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಜೀರಿಗೆ ಪುಡಿ, 3 ಚಮಚ ತುಪ್ಪ, ಸ್ವಲ್ಪ ಗೋಡಂಬಿ, ಸ್ವಲ್ಪ ಶುಂಠಿ, 3 – 4 ಹಸಿಮೆಣಸಿನಕಾಯಿ, 1 ಚಮಚ ಜೀರಿಗೆ, 7 – 8 ಕರಿಮೆಣಸು, ಕಾಲು ಚಮಚ ಇಂಗು, ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು, ಅರ್ಧ ನಿಂಬೆಹಣ್ಣು.

ಖಾರ ಪೊಂಗಲ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಅರ್ಧ ಬಟ್ಟಲು ಹೆಸರುಬೇಳೆ ಮತ್ತು ಅರ್ಧ ಬಟ್ಟಲು ಅಕ್ಕಿಯನ್ನು ಹಾಕಿ ಸ್ವಲ್ಪ ಬಣ್ಣ ತಿರುಗುವವರೆಗೆ ಫ್ರೈ ಮಾಡಿ ಒಂದು ಬಟ್ಟಲಿಗೆ ಹಾಕಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ನೀರಿನಿಂದ 2 – 3 ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಕುಕ್ಕರನ್ನು ಇಟ್ಟುಕೊಂಡು ಅದಕ್ಕೆ ತೊಳೆದುಕೊಂಡ ಅಕ್ಕಿ ಹಾಗೂ ಹೆಸರುಬೇಳೆ, 2 ಬಟ್ಟಲು ನೀರು, ಸ್ವಲ್ಪ ಅರಿಶಿನವನ್ನು ಹಾಕಿ ಕುಕ್ಕರ್ ಮುಚ್ಚಳ ವನ್ನು ಮುಚ್ಚಿ 2 ವಿಷಲ್ ಆಗಿಸಿಕೊಂಡು ತಣ್ಣಗಾಗಲು ಬಿಡಿ. ಕುಕ್ಕರ್ ತಣ್ಣಗಾದ ನಂತರ ಇದಕ್ಕೆ ಮತ್ತೆ ಎರಡುವರೆ ಬಟ್ಟಲು ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.

ತದನಂತರ ಇದಕ್ಕೆ ಅರ್ಧ ಬಟ್ಟಲಿನಷ್ಟು ತೆಂಗಿನಕಾಯಿತುರಿ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮತ್ತೆ ಗ್ಯಾಸ್ ಮೇಲೆ ಕುಕ್ಕರ್ ನನ್ನು ಇಟ್ಟು ಕುದಿಯಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಸಣ್ಣ ಬಾಂಡಲಿಯನ್ನು ಇಟ್ಟುಕೊಂಡು ಅದಕ್ಕೆ 3 ಚಮಚದಷ್ಟು ತುಪ್ಪವನ್ನು ಹಾಕಿ ಕಾಯಲು ಬಿಡಿ. ತುಪ್ಪ ಕಾದ ನಂತರ ಅದಕ್ಕೆ ಸ್ವಲ್ಪ ಗೋಡಂಬಿ ಹಾಕಿ 10 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ತುರಿದ ಶುಂಠಿ, ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿ, 1 ಚಮಚ ಜೀರಿಗೆ, 7 – 8 ಕಾಳುಮೆಣಸನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಕಾಲು ಚಮಚದಷ್ಟು ಇಂಗು ವನ್ನು ಹಾಕಿ ಮತ್ತೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಕರಿಬೇವನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಕುಕ್ಕರ್ ನಲ್ಲಿರುವ ಅನ್ನಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ನಿಂಬೆಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿದರೆ ಕರ್ನಾಟಕ ಶೈಲಿಯ ಖಾರ ಪೊಂಗಲ್ ಸವಿಯಲು ಸಿದ್ಧ.