ರೇಷನ್ ಅಕ್ಕಿ ಬಳಸಿ, ಹೋಟೆಲ್ ಶೈಲಿಯ ಮಸಾಲಾ ದೋಸೆ ಸುಲಭವಾಗಿ ಮಾಡುವುದು ಹೇಗೆ ಗೊತ್ತೇ??

ರೇಷನ್ ಅಕ್ಕಿ ಬಳಸಿ, ಹೋಟೆಲ್ ಶೈಲಿಯ ಮಸಾಲಾ ದೋಸೆ ಸುಲಭವಾಗಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ರೇಷನ್ ಅಕ್ಕಿಯನ್ನು ಉಪಯೋಗಿಸಿಕೊಂಡು ಹೋಟೆಲ್ ಶೈಲಿಯ ಮಸಾಲದೋಸೆ ಜೊತೆಗೆ ದೋಸೆಗೆ ಹಚ್ಚುವ ಕೆಂಪು ಚಟ್ನಿ ಮತ್ತು ಪಲ್ಯ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ.

ಮಸಾಲದೋಸೆ ಜೊತೆಗೆ ದೊಸೆಗೆ ಹಚ್ಚುವ ಕೆಂಪು ಚಟ್ನಿ ಮತ್ತು ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು: 1 ಲೋಟ ಅಕ್ಕಿ, ಕಾಲು ಲೋಟಕ್ಕಿಂತ ಸ್ವಲ್ಪ ಜಾಸ್ತಿ ಉದ್ದಿನಬೇಳೆ, 2 ಚಮಚ ಕಡಲೆ ಬೇಳೆ, 1 ಚಮಚ ಮೆಂತ್ಯ, 4 ಚಮಚ ಪೇಪರ್ ಅವಲಕ್ಕಿ, ರುಚಿಗೆ ತಕಷ್ಟು ಉಪ್ಪು, ಸ್ವಲ್ಪ ಎಣ್ಣೆ, ಅರ್ಧ ಚಮಚ ಸಾಸಿವೆ, 2 ಈರುಳ್ಳಿ, ಅರ್ಧ ಚಮಚ ಶುಂಠಿ, 5 ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, ಕಾಲು ಚಮಚದಷ್ಟು ಅರಿಶಿಣ ಪುಡಿ, 3 ಆಲೂಗೆಡ್ಡೆ, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಚಮಚ ನಿಂಬೆ ಹಣ್ಣಿನ ರಸ ಅರ್ಧ ಬಟ್ಟಲು ತೆಂಗಿನಕಾಯಿ ತುರಿ, 2 ಚಮಚ ಕಡಲೆ, ಸ್ವಲ್ಪ ಹುಣಸೆ ಹಣ್ಣು, 1 ಒಣಮೆಣಸಿನಕಾಯಿ, ಅರ್ಧ ಚಮಚ ಜೀರಿಗೆ, 8 ಬೆಳ್ಳುಳ್ಳಿ, 6 ಬ್ಯಾಡಿಗೆ ಮೆಣಸಿನಕಾಯಿ, ಸ್ವಲ್ಪ ಬೆಣ್ಣೆ.

ಮಸಾಲದೋಸೆ ಜೊತೆಗೆ ದೊಸೆಗೆ ಹಚ್ಚುವ ಕೆಂಪು ಚಟ್ನಿ ಮತ್ತು ಪಲ್ಯ ಮಾಡುವ ವಿಧಾನ: ಮೊದಲಿಗೆ ದೋಸೆ ಹಿಟ್ಟು ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಗೆ 1 ಲೋಟ ರೇಷನ್ ಅಕ್ಕಿಯನ್ನು ಹಾಕಿಕೊಳ್ಳಿ. ಕಾಲು ಲೋಟಕ್ಕಿಂತ ಸ್ವಲ್ಪ ಜಾಸ್ತಿ ಉದ್ದಿನಬೇಳೆ, 1 ಚಮಚ ಕಡಲೆ ಬೇಳೆ, 1 ಚಮಚ ಮೆಂತ್ಯ ವನ್ನು ಹಾಕಿ ನಾಲ್ಕು ಬಾರಿ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ನೀರಿನಿಂದ ತೊಳೆದ ನಂತರ ಮತ್ತೆ 2 ಲೋಟ ನೀರನ್ನು ಹಾಕಿ 5 – 6 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಮತ್ತೊಂದು ಕಡೆ ಒಂದು ಬಟ್ಟಲಿಗೆ 4 ಚಮಚದಷ್ಟು ಪೇಪರ್ ಅವಲಕ್ಕಿ ಹಾಗೂ ನೀರನ್ನು ಹಾಕಿ 10 ನಿಮಿಷಗಳ ಕಾಲ ನೆನೆಯಲು ಬಿಡಿ. 6 ಗಂಟೆಗಳ ನಂತರ ಒಂದು ಮಿಕ್ಸಿ ಜಾರನ್ನು ತೆಗೆದುಕೊಂಡು ಅದಕ್ಕೆ ನೆನೆಸಿದ ಅಕ್ಕಿ ಹಾಗೂ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ಮತ್ತೊಂದು ಬಾರಿ ಅಕ್ಕಿಯನ್ನು ರುಬ್ಬುವಾಗ ಅದರ ಜೊತೆಗೆ ನೆನೆಸಿದ ಪೇಪರ್ ಅವಲಕ್ಕಿಯನ್ನು ಸಹ ಹಾಕಿ ರುಬ್ಬಿಕೊಂಡು ಅದೇ ಪಾತ್ರೆಗೆ ಹಾಕಿಕೊಂಡು 5 – 10 ನಿಮಿಷಗಳ ಕಾಲ ಕೈನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಅರ್ಧ ಚಮಚದಷ್ಟು ಉಪ್ಪನ್ನು ಹಾಕಿ ಮತ್ತೆ ಮಿಕ್ಸ್ ಮಾಡಿಕೊಂಡು 10 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಮತ್ತೆ ಮಿಕ್ಸ್ ಮಾಡಿಕೊಂಡರೆ ದೋಸೆ ಹಿಟ್ಟು ಸಿದ್ದವಾಗುತ್ತದೆ.

ಎರಡನೆಯದು ಪಲ್ಯ ಮಾಡುವ ವಿಧಾನ: ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ 1 ಚಮಚ ಕಡ್ಲೆಬೇಳೆ, 1 ಚಮಚ ಉದ್ದಿನಬೇಳೆ, ಕಾಲು ಚಮಚ ಸಾಸಿವೆಯನ್ನು ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಉದ್ದವಾಗಿ ಹಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚದಷ್ಟು ಸಣ್ಣಗೆ ಹಚ್ಚಿದ ಶುಂಠಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ 3 ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಕಾಲು ಚಮಚದಷ್ಟು ಅರಿಶಿಣ ಪುಡಿಯನ್ನು ಹಾಕಿ ಮತ್ತೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಬೇಯಿಸಿ ಸ್ಮಾಶ್ ಮಾಡಿದ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ 1 ಚಮಚದಷ್ಟು ನಿಂಬೆ ಹಣ್ಣು ಹಾಕಿ ಮಿಕ್ಸ್ ಮಾಡಿದರೆ ಆಲೂಗಡ್ಡೆ ಪಲ್ಯ ರೆಡಿಯಾಗುತ್ತದೆ.

ಮೂರನೆಯದು ತೆಂಗಿನಕಾಯಿ ಮತ್ತು ಕಡಲೆ ಚಟ್ನಿ: ಮೊದಲು ಒಂದು ಮಿಕ್ಸಿ ಜಾರನ್ನು ತೆಗೆದುಕೊಂಡು ಅದಕ್ಕೆ ಅರ್ಧ ಬಟ್ಟಲಿನಷ್ಟು ತೆಂಗಿನಕಾಯಿತುರಿ, 2 ಹಸಿಮೆಣಸಿನಕಾಯಿ, 1 ಪೀಸ್ ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಚಮಚ ಕಡಲೆ, 1 ಪೀಸ್ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟು ಅದಕ್ಕೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಕಾಲು ಚಮಚ ಸಾಸಿವೆ, 1 ಚಮಚ ಉದ್ದಿನಬೇಳೆ, 1 ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ಬಟ್ಟಲಿಗೆ ಹಾಕಿ ಮಿಕ್ಸ್ ಮಾಡಿದರೆ ತೆಂಗಿನಕಾಯಿ ಮತ್ತು ಕಡಲೆ ಚಟ್ನಿ ಸವಿಯಲು ಸಿದ್ಧ.

ಕೆಂಪು ಚಟ್ನಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಅರ್ಧ ಚಮಚ ಜೀರಿಗೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 8 ಬೆಳ್ಳುಳ್ಳಿ ಹಾಕಿ 1 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 6 ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ 1 ನಿಮಿಷಗಳ ಕಾಲ ಮತ್ತೆ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣ, 1 ಚಮಚ ಕಡಲೆ, ಸ್ವಲ್ಪ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡರೆ ಕೆಂಪು ಚಟ್ನಿ ಸಿದ್ದವಾಗುತ್ತದೆ.

ಮಸಾಲ ದೋಸೆ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ತವಾವನ್ನು ಇಟ್ಟು ಸ್ವಲ್ಪ ಎಣ್ಣೆಯನ್ನು ಸವರಿ ಕಾಯಲು ಬಿಡಿ. ತವಾ ಕಾದ ನಂತರ ದೋಸೆ ಹಿಟ್ಟನ್ನು ಹಾಕಿ ಸವರಿಕೊಂಡು ಅದರ ಮೇಲೆ ಒಂದು ಮುಚ್ಚಳವನ್ನು ಮುಚ್ಚಿ 30 ಸೆಕೆಂಡ್ ಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ.ನಂತರ ಅರ್ಧ ಚಮಚದಷ್ಟು ಎಣ್ಣೆಯನ್ನು ದೋಸೆಯ ಮೇಲೆ ಹಾಕಿಕೊಳ್ಳಿ. ತದನಂತರ ದೋಸೆ ಮೇಲೆ 1 ಚಮಚದಷ್ಟು ಕೆಂಪು ಚಟ್ನಿ ಮತ್ತು 1 ಚಮಚದಷ್ಟು ಬೆಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ದೋಸೆಗೆ ಸವರಿಕೊಳ್ಳಿ. ನಂತರ ಮತ್ತೆ ಅರ್ಧ ಚಮಚದಷ್ಟು ಎಣ್ಣೆಯನ್ನು ದೋಸೆ ಮೇಲೆ ಹಾಕಿಕೊಳ್ಳಿ. ಕೊನೆಯದಾಗಿ ದೋಸೆಯ ಮಧ್ಯಭಾಗದಲ್ಲಿ ಸ್ವಲ್ಪ ಪಲ್ಯವನ್ನು ಇಟ್ಟು ಮಸಾಲದೋಸೆ ಆಕಾರದಲ್ಲಿ ಮಡಿಚಿದರೆ ಹೋಟೆಲ್ ಶೈಲಿಯ ಮಸಾಲ ದೋಸೆ ಸವಿಯಲು ಸಿದ್ದ.