ಮನೆಯಲ್ಲಿಯೇ ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಕ್ಷೇತ್ರದ ತಿಳಿ ಸಾರು ಹೇಗೆ ಮಾಡುವುದು ಗೊತ್ತೇ??

ಮನೆಯಲ್ಲಿಯೇ ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಕ್ಷೇತ್ರದ ತಿಳಿ ಸಾರು ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾವು ನೀವು ಎಲ್ಲರೂ ಕೂಡ ಪ್ರವಾಸಕ್ಕೆ ಹೋದಾಗ ನಾವು ಪ್ರವಾಸಕ್ಕೆ ಬಂದಿದ್ದೇವೆ ಐಷಾರಾಮಿ ಹೋಟೆಲ್ ನಲ್ಲಿ ಊಟ ಮಾಡೋಣ ಪ್ರವಾಸಕ್ಕೆ ಬಂದಿರುವಾಗ ವಿವಿಧ ರೀತಿಯ ರುಚಿ ಅಡುಗೆಯನ್ನು ತಿನ್ನೋಣವೆಂದು ಆಲೋಚನೆ ಮಾಡುವುದು ಜಾಸ್ತಿ. ಆದರೆ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಮಾತ್ರ ಎಲ್ಲರ ಆಲೋಚನೆಯೂ ಕೂಡ ಒಂದೇ ಆಗಿರುತ್ತದೆ. ಅದುವೇ ಧರ್ಮಸ್ಥಳಕ್ಕೆ ಬಂದಿದ್ದೇವೆ ಇಲ್ಲಿನ ಅನ್ನಪೂರ್ಣ ಭೋಜನಶಾಲೆಯಲ್ಲಿ ಸ್ವಾಮಿ ಪ್ರಸಾದ ತಿಂದು ದೇವರ ಕೃಪೆಗೆ ಪಾತ್ರರಾಗೋಣ ಹಾಗೂ ಅಂತಹ ಅದ್ಭುತ ರುಚಿಯನ್ನು ನಾವು ಹೇಗಿದ್ದರೂ ಮಾಡಲು ಸಾಧ್ಯವಿಲ್ಲ ಎಂದು ಸವಿದು ಬರುತ್ತೇವೆ.

ಹಾಗಿದ್ದರೆ ಧರ್ಮಸ್ಥಳದಲ್ಲಿ ಆ ರುಚಿ ಹೇಗೆ ಬರುತ್ತದೆ, ಅಲ್ಲಿ ಮಾಡುವ ತಿಳಿ ಸಾಂಬಾರ್ ಅನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳುವ ಆಸಕ್ತಿ ನಿಮಗಿದೆಯೇ? ಖಂಡಿತಾ ಈ ಲೇಖನದಲ್ಲಿ ನಿಮಗೆ ಉತ್ತರ ಸಿಗುತ್ತದೆ, ಹಾಗಿದ್ದರೆ ಇನ್ಯಾಕೆ ತಡ ಬನ್ನಿ ಧರ್ಮಸ್ಥಳದ ತಿಳಿ ಸಾಂಬಾರ್ ಹೇಗೆ ಮಾಡುವುದು ಎಂಬುದನ್ನು ನೋಡೋಣ.

ತಿಳಿಸಾರು ಮಾಡಲು ಬೇಕಾಗುವ ಪದಾರ್ಥಗಳು: 1 ಚಮಚ ಧನಿಯಾ, 1 ಚಮಚ ಜೀರಿಗೆ, ಕಾಲು ಚಮಚದಷ್ಟು ಮೆಂತ್ಯ ಕಾಳು, 1 ಚಮಚ ಕಾಳುಮೆಣಸು, 5 – 6 ಬ್ಯಾಡಿಗೆ ಮೆಣಸಿನಕಾಯಿ, 1 ಬಟ್ಟಲು ತೆಂಗಿನಕಾಯಿತುರಿ, 1 ಬಟ್ಟಲು ತೊಗರಿ ಬೇಳೆ(100 ಗ್ರಾಂ), ನಿಂಬೆಹಣ್ಣಿನ ಗಾತ್ರದ ಹುಣಸೆಹಣ್ಣು, ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ, ಸಾಸಿವೆ, ಸ್ವಲ್ಪ ಇಂಗು, 3 – 4 ಒಣಮೆಣಸಿನಕಾಯಿ, ಕರಿಬೇವು.

ತಿಳಿಸಾರು ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚ ಧನಿಯಾ, 1 ಚಮಚ ಜೀರಿಗೆ, ಕಾಲು ಚಮಚ ಮೆಂತ್ಯವನ್ನು ಹಾಕಿ ಅರ್ಧ ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಇದಕ್ಕೆ 1 ಚಮಚದಷ್ಟು ಕಾಳುಮೆಣಸು ಹಾಕಿ 2 ನಿಮಿಷಗಳ ಕಾಲ ಹುರಿದುಕೊಳ್ಳಿ. ಮತ್ತೆ ಇದಕ್ಕೆ 5 – 6 ಬ್ಯಾಡಗಿ ಮೆಣಸಿನಕಾಯಿಯನ್ನು ಹಾಕಿ ಮೆಣಸಿನಕಾಯಿ ಗರಿಗರಿ ಆಗುವವರೆಗೂ ಹುರಿದುಕೊಂಡು ತಣ್ಣಗಾಗಲು ಬಿಡಿ. ನಂತರ ಇದನ್ನು ಒಂದು ಸಣ್ಣ ಮಿಕ್ಸಿ ಜಾರಿಗೆ ಹಾಕಿ ಪುಡಿಮಾಡಿಕೊಳ್ಳಿ.

ನಂತರ ಇದಕ್ಕೆ 1 ಬಟ್ಟಲು ತೆಂಗಿನಕಾಯಿತುರಿ ಹಾಗೂ ಅರ್ಧ ಬಟ್ಟಲಿನಷ್ಟು ನೀರನ್ನು ಹಾಕಿ ಮಸಾಲೆ ರೀತಿಯಲ್ಲಿ ರುಬ್ಬಿಕೊಳ್ಳಿ. ಮತ್ತೊಮ್ಮೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ ರುಬ್ಬಿದ ಮಸಾಲೆ, ಒಂದುವರೆ ಲೀಟರ್ ನಷ್ಟು ನೀರು, ಬೇಯಿಸಿಕೊಂಡ ತೊಗರಿಬೇಳೆ, ಹುಣಸೆ ರಸ , ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 5 – 6 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ. ನಂತರ ಮತ್ತೊಂದು ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಸಾಸಿವೆ, ಇಂಗು, 3 – 4 ಒಣಮೆಣಸಿನಕಾಯಿ, ಕರಿಬೇವುವನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಕುದಿಯುತ್ತಿರುವ ಸಾರಿಗೆ ಮಿಕ್ಸ್ ಮಾಡಿದರೆ ಧರ್ಮಸ್ಥಳ ದೇವಸ್ಥಾನ ಶೈಲಿಯ ತಿಳಿಸಾರು ಸವಿಯಲು ಸಿದ್ಧ.