ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ, ಹೇರಳವಾಗಿ ಸಿಗುವ ಆಹಾರಗಳು ! ಭಾಗ 1

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ, ಹೇರಳವಾಗಿ ಸಿಗುವ ಆಹಾರಗಳು ! ಭಾಗ 1

ನಮಸ್ಕಾರ ಸ್ನೇಹಿತರೇ, ಪ್ರತಿಯೊಂದು ದೇಹಕ್ಕೂ ತನ್ನದೇ ಆದ ರೋಗ ನಿರೋಧಕ ಶಕ್ತಿ ಇರುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ನಿಮ್ಮ ದೇಹದಲ್ಲಿ ಒಳಹೊಕ್ಕುವ ವೈರಸ್ಗಳನ್ನು ತಡೆಯುವಲ್ಲಿ ರೋಗ ನಿರೋಧಕ ಶಕ್ತಿಯದ್ದೇ ನಿರ್ಣಾಯಕ ಪಾತ್ರ. ಅದಕ್ಕಾಗಿ ವಿಶೇಷ ಲೇಖನದ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಆಹಾರಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ. (ಮೊದಲ ಭಾಗ).

ಸಿಟ್ರಸ್ ಹಣ್ಣುಗಳು: ಶೀತಾ, ಕೆಮ್ಮು ಇತರ ಕಾಯಿಲೆಗಳಿಗೆ ವಿಟಮಿನ್-ಸಿ ಎಂಬುದು ರಾಮಬಾಣ. ಇದನ್ನು ನೀವು ಶಾಲೆಯ ಪುಸ್ತಕಗಳಲ್ಲಿ ಓದಿರುತ್ತೀರಿ. ವಿಟಮಿನ್ ಸಿ ಯು ನಿಮ್ಮ ದೇಹದಲ್ಲಿ ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸಿ ಸೋಂಕುಗಳ ವಿರುದ್ಧ ಹೋರಾಡಲು ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ವಿಟಮಿನ್ ಸಿ ಯು ದ್ರಾಕ್ಷಿ, ಕಿತ್ತಳೆ ಹಾಗೂ ನಿಂಬೆ ಹಣ್ಣಿನಲ್ಲಿ ಹೇರಳವಾಗಿ ದೊರೆಯುತ್ತದೆ. ಇನ್ನು ಕೆಲವು ಹಣ್ಣುಗಳಲ್ಲಿ ದೊರೆಯುತ್ತದೆಯಾದರೂ ಈ ಮೂರು ಹಣ್ಣುಗಳು ಬಹಳ ಸುಲಭವಾಗಿ ಜನರ ಕೈಗೆಟುಕುತ್ತದೆ.

ಕೆಂಪು ದೊಡ್ಡ ಮೆಣಸಿನಕಾಯಿ– ಈ ಕೆಂಪು ದೊಡ್ಡ ಮೆಣಸಿನ ಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ನಿಂಬೆಹಣ್ಣು, ಕಿತ್ತಳೆ ಹಾಗೂ ದ್ರಾಕ್ಷಿ ಹಣ್ಣಿಗೆ ಹೋಲಿಸಿಕೊಂಡರೆ ವಿಟಮಿನ್-ಸಿ ಹೆಚ್ಚಾಗಿರುವ ಕಾರಣ ಇದು ಕೇವಲ ರೋಗ ನಿರೋಧಕ ಶಕ್ತಿಯಾಗಿ ಅಷ್ಟೇ ಅಲ್ಲದೇ ನಿಮ್ಮ ತ್ವಚೆ ಹಾಗೂ ಕಣ್ಣುಗಳನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ.

ಕೋಸುಗೆಡ್ಡೆ(ಗೋಬಿ)– ಕೋಸುಗೆಡ್ಡೆ ಜೀವಸತ್ವಗಳು ಹಾಗೂ ಖನಿಜಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ. ವಿಟಮಿನ್ ಎ, ಸಿ, ಇ ಹಾಗೂ ಅನೇಕ ಉತ್ಕರ್ಷಣ ನಿರೋಧಕಗಳು ಮತ್ತು ಕಬ್ಬಿಣದ ಅಂಶಗಳಿಂದ ತುಂಬಿದ್ದು ನೀವು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದರೆ ಸಾಧ್ಯವಾದಷ್ಟು ಕಡಿಮೆ ಬೇಯಿಸಿ ತಿನ್ನಬೇಕು. ಹೀಗೆ ಮಾಡಿದ್ದಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾಗಿರುವ ಫೈಬರ್, ವಿಟಮಿನ್ ಗಳನ್ನು ಹೇರಳವಾಗಿ ನೀಡುತ್ತದೆ.

ಬೆಳ್ಳುಳ್ಳಿ: ಇಡೀ ಪ್ರಪಂಚದಲ್ಲಿ ಇರುವ ಪ್ರತಿಯೊಂದು ಪಾಕಪದ್ಧತಿಯಲ್ಲಿ ಬೆಳ್ಳುಳ್ಳಿಯದ್ದು ಮಹತ್ವದ ಪಾತ್ರ, ಅದರಲ್ಲಿಯೂ ಭಾರತದ ಮಸಾಲಾ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಇದ್ದೇ ಇರುತ್ತದೆ. ಈ ಬೆಳ್ಳುಳ್ಳಿಯು ನಿಮಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ರಕ್ತದ ಒತ್ತಡವನ್ನು ಕಡಿಮೆ ಮಾಡಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಲಿಸಿನ್, ಸಲ್ಫರ್ ಗಳನ್ನು ದೇಹಕ್ಕೆ ಒದಗಿಸುತ್ತದೆ.

ಶುಂಠಿ: ನಿಮ್ಮ ದೇಹದ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ತಕ್ಷಣ ನಿಮ್ಮ ಮನೆಯ ಹಿರಿಯರು ಮೊದಲು ಮನೆಯಲ್ಲಿ ತಯಾರಿ ಮಾಡುವುದು ಶುಂಠಿ ಆಧಾರಿತ ಆಹಾರ. ಈ ಶುಂಠಿಯು ಬಹಳ ಆರೋಗ್ಯಕರ ಗುಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಯಾವುದೇ ಉರಿಯೂತ, ಗಂಟಲು ನೋವು, ಹಾಗೂ ನಿಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡಲು ಬೇಕಾದಂತಹ ಸತ್ವಗಳನ್ನು ಈ ಶುಂಠಿ ಒದಗಿಸುತ್ತದೆ.

ಪಾಲಕ್ ಸೊಪ್ಪು: ಈ ಸೊಪ್ಪಿನಲ್ಲಿ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ, ಉತ್ಕರ್ಷಣ ನಿರೋಧಕ ಶಕ್ತಿ ಹೆಚ್ಚಿರುವ ಕಾರಣ ನಿಮ್ಮ ದೇಹಕ್ಕೆ ಯಾವುದೇ ಸೋಂಕು ತಾಗದಂತೆ ತಡೆಯಲು ಇದು ಬಹಳ ಸಹಕಾರಿಯಾಗಿದೆ. ಇದನ್ನು ಸಾಧ್ಯವಾದಷ್ಟು ಕಡಿಮೆ ಬೇಯಿಸಿದರೆ ಅದರಲ್ಲಿರುವ ಪೋಷಕಾಂಶಗಳು ಹಾಗೆಯೇ ಉಳಿಯುತ್ತವೆ ಹಾಗೂ ನಿಮ್ಮ ದೇಹಕ್ಕೆ ಅಗತ್ಯವಾದ ಬಹುತೇಕ ಪೋಷಕಾಂಶಗಳನ್ನು ಒದಗಿಸುತ್ತದೆ.

ಇನ್ನು ಹಲವಾರು ಆಹಾರಗಳನ್ನು ಮುಂದಿನ ಲೇಖನದಲ್ಲಿ ತಿಳಿಸುತ್ತೇವೆ. ಧನ್ಯವಾದಗಳು