ಕೊನೆಗೂ ಪ್ರೀತಿ ಸೋತಿತ್ತು ಸ್ನೇಹ ಗೆದ್ದಿತ್ತು !!

ಅವನ ಹೆಸರು ಕೇಳಿದರೂ ಸಾಕು ನನ್ನ ಮನ ಅರಳಿ ನಿಲ್ಲುತ್ತಿತ್ತು. ಹೃದಯ ರೆಕ್ಕೆ ಕಟ್ಟಿ ಹಾರುತ್ತಿತ್ತು. ಅವನಾಡುವ ಮಾತು,ಅವನದೇ ಆದ ಸ್ಟೈಲ್, ಆ ಲುಕ್ ಗೆ ದಿಲ್ ಕೊಟ್ಟು ಫಿದಾ ಆಗಿದ್ದೆ. ಮೊದಲ ಸಲ ಪ್ರೀತಿಯ ಮಳೆಯಲ್ಲಿ ನೆನೆದಿದ್ದೆ.

ಅವನ ಹೆಸರು ಕೇಳಿದರೂ ಸಾಕು ನನ್ನ ಮನ ಅರಳಿ ನಿಲ್ಲುತ್ತಿತ್ತು. ಹೃದಯ ರೆಕ್ಕೆ ಕಟ್ಟಿ ಹಾರುತ್ತಿತ್ತು. ಅವನಾಡುವ ಮಾತು,ಅವನದೇ ಆದ ಸ್ಟೈಲ್, ಆ ಲುಕ್ ಗೆ ದಿಲ್ ಕೊಟ್ಟು ಫಿದಾ ಆಗಿದ್ದೆ. ಮೊದಲ ಸಲ ಪ್ರೀತಿಯ ಮಳೆಯಲ್ಲಿ ನೆನೆದಿದ್ದೆ. ತನ್ನ ಸೆಳೆತದಿಂದ ಮೋಡಿ ಮಾಡಿದ ಹುಡುಗ ಮನವೆಂಬ ಮಂದಿರದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದ. ಒಟ್ಟಿನಲ್ಲಿ ತುಂಬಾ ಖುಷಿಯಲ್ಲಿದ್ದೆ. ಸ್ವಲ್ಪ ದಿನಗಳ ನಂತರ ನಮ್ಮ ಪಕ್ಕದ ಮನೆಯ ಹುಡುಗಿಯ ಜತೆ ನನ್ನ ಕನಸಿನ ಹುಡುಗನ ದರ್ಶನ.

ಒಮ್ಮೆ ದಂಗಾಗಿ ಹೋದೆ. ಅಂವ ಬಂದಿರುವುದು ನನಗಾಗಿಯೇ? ಅವನು ನನ್ನ ಇಷ್ಟಪಡುತ್ತಿರುವನೇ?ಅವನ ಮನದಲ್ಲಿ ನಾನಿದ್ದೇನಾ? ಪಶ್ನೆಗಳ ಸುರಿಮಳೆ ಹೊಯ್ಯವ ಮುನ್ನವೇ ತಲ್ಲಣದ ಉತ್ತರ ಮಿಂಚಂತೆ ಎರಗಿ ಬಂದಿತ್ತು. ನನ್ನ ಮನಸು ಕದ್ದಿದ್ದ ಹುಡುಗ ಆಗಲೇ ನನ್ನ ಪಕ್ಕದ ರೂಮ್ ಹುಡುಗಿಯ ಮನಗೆದ್ದಿದ್ದ. ಅವಳಿಗೆ ಮನಸು ಕೊಟ್ಟಿದ್ದ. ಅವಳನ್ನು ತನಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದ. ಇದೆಲ್ಲಾ ಗೊತ್ತಾದಾಗ ನನ್ನಷ್ಟಕ್ಕೆ ನಾ ಕುಸಿದಿದ್ದೆ. ಕನಸಿನ ಬಲೂನು ಪ್ರೀತಿಯ ರಂಗು ತುಂಬುವ ಮೊದಲೇ ಒಡೆದು ಚೂರಾಗಿತ್ತು. ಪ್ರೀತಿಯ ಗೋಪುರ ಕಟ್ಟುವ ಮೊದಲೇ ಸಮಾಧಿಯಾಗಿತ್ತು.

ಚಿಕ್ಕಂದಿನಿಂದಲೂ ಬಯಸಿದ್ದೆಲ್ಲಾ ನಾ ಪಡೆದಿದ್ದೆ. ನಾ ಎಣಿಸಿದ್ದೆಲ್ಲ ನನ್ನದಾಗತ್ತೆಯೆಂಬ ಹುಚ್ಚು ಕಲ್ಪನೆಯಿಂದ ಹೊರಗೆ ಬಂದೆ. ಹರೆಯದ ಹೊಸ್ತಿಲಲ್ಲಿ ಆಗ ತಾನೇ ಅರಳಿದ ಪ್ರೇಮದ ಮೊಗ್ಗು ಚಿಗುರುವ ಮೊದಲೇ ಬಾಡಿತ್ತು. ಮೊದಲ ಬಾರಿಗೆ ನನ್ನ ಮೊದಲ ಪ್ರೀತಿ ಸೋತಿತ್ತು. ಆದ್ರೆ ಅವನಿಗೆ ಸೋತ ಆ ಕ್ಷಣಗಳು ಮಾತ್ರ ನನ್ನೆದೆಯಲ್ಲಿ ಅಚ್ಚಳಿಯದೇ ಕುಳಿತಿತ್ತು. ಹದಯ ಬಿರಿದರೂ ಮಾತು ಮೂಕವಾದರೂ ಪ್ರೀತಿಯ ಅನುಭೂತಿ ಸದಾ ನಿನ್ನ ನೆನಪನ್ನು ಹೊತ್ತು ತರುತ್ತಿತ್ತು. ಆ ಸವಿ ಸವಿ ನೆನಪೇ ಪ್ರೀತಿಯ ಗಾಯ ಭರಿಸಲು ನೆರವಾಯಿತು. ದಿನಗಳು ಕಳೆದಂತೆ ಅವನ ಗೆಳತಿ ನಂಗೂ ಗೆಳತಿಯಾದಳು. ಕಡಿಮೆ ಅವಧಿಯಲ್ಲಿ ಮೂವರೂ ಬೆಸ್ಟ್ ಫ್ರೆಂಡ್ಸ್ ಆದೆವು.ಅವರ ಸಂತೋಷದಲ್ಲಿ ನಾ ಹರುಷವಾಗಿ ದುಖದಲ್ಲಿ ಕಂಬನಿಯ ಒರೆಸಿ ನನ್ನೆ ನಾ ಮರೆಯುವೆ.

ಆದರೂ ಅವನು ನನ್ನ ಬಳಿ ಮನತುಂಬಿ ನಗುವಾಗ, ಪ್ರೀತಿಸಿದವಳಿಗಿಂತ ಹೆಚ್ಚು ನನ್ನ ನಂಬುವಾಗ ಅದ್ಯಾವುದೊ ದೂರದ ಭಾವ ಬೇಡವೆಂದರೂ ಕಾಡುತ್ತದೆ. ಅವನು ಪದೇಪದೆ ಯು ಆರ್ ಮೈ ಬೆಸ್ಟ್ ಫ್ರೆಂಡ್ ಅಂದಾಗ ಮನಸು ತೆರೆಮರೆಯಲ್ಲಿ ಮೌನ ರೋದನ ಮಾಡುತ್ತದೆ. ಇದೆಲ್ಲಾ ಆಗಿ ಹತ್ತು ವರುಷಗಳು ಕಳೆದರೂ ನನ್ನ ಮನದಲ್ಲಿ ಮಾತ್ರ ಇಂದಿಗೂ ಅವನು ಮರೆಯದ ಮಾಣಿಕ್ಯವಾಗಿದ್ದಾನೆ. ಅವನ ಮನಸ್ಸಲ್ಲೂ ನಾನಿದ್ದೇನೆ ಇಂದಿಗೂ ಒಳ್ಳೆಯ ಗೆಳತಿಯಾಗಿ.