ಬಿಜೆಪಿ ಸರ್ಕಾರದ ಕನಸು ನುಚ್ಚುನೂರು: ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ ಹೈ ಕಮಾಂಡ್

ಬಿಜೆಪಿ ಸರ್ಕಾರದ ಕನಸು ನುಚ್ಚುನೂರು: ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ ಹೈ ಕಮಾಂಡ್

0

ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚನೆಯಾಗಿದೆ. ಅತ್ಯಧಿಕ ಸ್ಥಾನ ಗಳಿಸಿದ್ದ ಕಾರಣ ಬಿಜೆಪಿಯ ಬಿ.ಎಸ್. ಯಡಿಯೂರಪ್ಪನವರು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಿದ ಮೇರೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಾದರು ನಿರೀಕ್ಷಿಸಿದಂತೆ ಶಾಸಕರ ಬೆಂಬಲ ಸಿಗದ ಕಾರಣ ಬಹುಮತ ಸಾಬೀತಿಗೂ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬಳಿಕ ರಚನೆಯಾದ ಮೈತ್ರಿಕೂಟ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಜೆಡಿಎಸ್ ನ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನ ಜಿ. ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ನಂತರ ಪ್ರಮುಖ ಖಾತೆಗಳ ಹಂಚಿಕೆಗೆ ಉಭಯ ಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆದಿದ್ದು, ಅದು ಬಗೆಹರಿದು ಸಚಿವ ಸಂಪುಟ ರಚನೆಯಾಗಿತ್ತು.

ಇದಾದ ಬಳಿಕ ಉಭಯ ಪಕ್ಷಗಳಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಅದರಲ್ಲೂ ಕಾಂಗ್ರೆಸ್ ಪಕ್ಷ ಇದರಿಂದ ತತ್ತರಿಸಿದೆ. ಮಾಜಿ ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಹತ್ತಕ್ಕೂ ಅಧಿಕ ಶಾಸಕರು ಒಟ್ಟಾಗಿ ಸಭೆ ನಡೆಸುತ್ತಿರುವುದು ಮೈತ್ರಿಕೂಟದ ಸರ್ಕಾರವನ್ನು ಕಂಗೆಡಿಸಿದೆ. ಬಂಡಾಯವನ್ನು ಮೊದಲೇ ನಿರೀಕ್ಷಿಸಿದ್ದ ರಾಜ್ಯ ಬಿಜೆಪಿ ನಾಯಕರು ಮತ್ತೊಮ್ಮೆ ಸರ್ಕಾರ ರಚನೆಯ ಕನಸು ಕಾಣುತ್ತಿರುವ ಮಧ್ಯೆ ಪಕ್ಷದ ಕೇಂದ್ರ ವರಿಷ್ಠರು ಖಡಕ್ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕೇಂದ್ರ ಬಿಜೆಪಿ ವರಿಷ್ಠರು, ಯಾವುದೇ ಕಾರಣಕ್ಕೂ ಜೆಡಿಎಸ್, ಕಾಂಗ್ರೆಸ್ ಅತೃಪ್ತ ಶಾಸಕರನ್ನು ಸಂಪರ್ಕಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರ ರಚನೆಗೆ ಮುಂದಾದರೆ ಕೆಟ್ಟ ಹೆಸರು ಪಡೆದುಕೊಳ್ಳಬೇಕಾಗುತ್ತದೆ ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರವಾಗಿದ್ದು, ಅಲ್ಲದೆ ಬಿಜೆಪಿ ಹೆಸರನ್ನು ಬಳಸಿಕೊಂಡು ಭಿನ್ನಮತೀಯರು ತಮ್ಮ ಬೇಳೆ ಬೇಯಿಸಿಕೊಳ್ಳಬಹುದೆಂಬ ಆತಂಕವೂ ಇದರ ಹಿಂದಿದೆ ಎನ್ನಲಾಗಿದೆ.

ಹೀಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಸೂಚನೆಯ ಹಿನ್ನಲೆಯಲ್ಲಿ ಈಗ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದು, ಅತೃಪ್ತ ಶಾಸಕರು ಯಾವುದೇ ಬೇಡಿಕೆಯನ್ನಿಡದೆ ಬೇಷರತ್ತಾಗಿ ಪಕ್ಷಕ್ಕೆ ಬಂದರೆ ಮಾತ್ರ ಪರಿಗಣಿಸಲು ತೀರ್ಮಾನಿಸಿದ್ದಾರೆನ್ನಲಾಗಿದೆ.