ಬ್ರೇಕಿಂಗ್ ನ್ಯೂಸ್: ಇತಿಹಾಸದಲ್ಲೇ ಮೊದಲ ಬಾರಿಗೆ ಸಿಜೆಐ ವಿರುದ್ಧ ಮಹಾಭಿಯೋಗ ನಿಲುವಳಿ ಇಂದು ಪ್ರಸ್ತಾವ ಸಾದ್ಯತೆ..!? ಮಹಾಭಿಯೋಗ ಪ್ರಕ್ರಿಯೆ ಹೇಗೆ ನಡೆಯುತ್ತೆ ಗೊತ್ತಾ..!?

ಬ್ರೇಕಿಂಗ್ ನ್ಯೂಸ್: ಇತಿಹಾಸದಲ್ಲೇ ಮೊದಲ ಬಾರಿಗೆ ಸಿಜೆಐ ವಿರುದ್ಧ ಮಹಾಭಿಯೋಗ ನಿಲುವಳಿ ಇಂದು ಪ್ರಸ್ತಾವ ಸಾದ್ಯತೆ..!? ಮಹಾಭಿಯೋಗ ಪ್ರಕ್ರಿಯೆ ಹೇಗೆ ನಡೆಯುತ್ತೆ ಗೊತ್ತಾ..!?

0

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಸಂಸತ್ತಿನಲ್ಲಿ ಮಹಾಭಿಯೋಗ ನಿಲುವಳಿ ಮಂಡಿಸುವ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಪ್ರಯತ್ನಕ್ಕೆ ಮರುಚಾಲನೆ ಸಿಕ್ಕಿದೆ. ಸುಪ್ರೀಂಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳು ಜನವರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಎತ್ತಿದ್ದ ಆಕ್ಷೇಪಗಳಿಗೆ ಸೂಕ್ತ ಪರಿಹಾರ ಒದಗಿಸಲು ಮುಖ್ಯ ನ್ಯಾ. ಮಿಶ್ರಾ ವಿಫಲರಾಗಿದ್ದಾರೆ ಎಂಬುದು ವಿಪಕ್ಷಗಳ ಆರೋಪವಾಗಿದೆ.

ಜನವರಿಯಲ್ಲೇ ಮಿಶ್ರಾ ವಿರುದ್ಧ ಎಡಪಕ್ಷಗಳು ಮಹಾಭಿಯೋಗಕ್ಕೆ ಸಿದ್ಧತೆ ನಡೆಸಿದ್ದವಾದರೂ ನ್ಯಾಯಮೂರ್ತಿಗಳೇ ವಿವಾದಕ್ಕೆ ತಾತ್ಕಾಲಿಕ ತೆರೆ ಎಳೆದಿದ್ದರಿಂದಾಗಿ ಪ್ರಯತ್ನ ಫಲಕೊಟ್ಟಿರಲಿಲ್ಲ.

ಇದೀಗ ಪ್ರಸಾದ್ ಶಿಕ್ಷಣ ಸಂಸ್ಥೆಯ(ವೈದ್ಯಕೀಯ ಕಾಲೇಜಿಗೆ ಅನುಮತಿ)ವಿಚಾರದಲ್ಲಿ ಮಿಶ್ರಾ ಕೈವಾಡವಿದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್, ಎನ್​ಸಿಪಿ, ಸಿಪಿಎಂ ಸೇರಿ ಹಲವು ಪಕ್ಷಗಳು ಒಂದಾಗಿದೆ. ಮಹಾಭಿಯೋಗ ಸಂಬಂಧ ಕಳೆದೊಂದು ವಾರದಿಂದ ಚರ್ಚೆ ನಡೆಸುತ್ತಿವೆ.

ಸಮಾನಮನಸ್ಕ ಪಕ್ಷಗಳ ಬೆಂಬಲ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಇನ್ನೂ ಹಲವು ಬಾರಿ ಚರ್ಚೆಗಳು ಮುಂದುವರಿಯವ ಸಾಧ್ಯತೆ ಇದೆ ಎನ್ನಲಾಗಿದೆ. ಕಾಂಗ್ರೆಸ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಮಹಾಭಿಯೋಗ ನಿಲುವಳಿಗೆ ಸಹಿ ಹಾಕುವುದಕ್ಕೆ ಕೆಲವು ಕಾಂಗ್ರೆಸ್ ಕಾಂಗ್ರೆಸ್ ನಾಯಕರು ಒಪ್ಪಿಗೆ ಸೂಚಿಸಿಲ್ಲ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ .

ಇಂದು ಬಜೆಟ್ ಕಲಾಪದ ಕೊನೆಯ ದಿನವಾಗಿದ್ದು ಸಿಜೆಐ ಹಾಭಿಯೋಗ ನಿಲುವಳಿ ಇಂದು ಪ್ರಸ್ತಾವ ಸಾದ್ಯತೆ ಎಂದು ಹೇಳಲಾಗುತ್ತಿದೆ.

ಅಷ್ಟಕು ಮಹಾಭಿಯೋಗ ಪ್ರಕ್ರಿಯೆ ಹೇಗೆ ನಡೆಯುತ್ತೆ..!!

ಮಹಾಭಿಯೋಗ ಮಂಡನೆಗೆ ಸಂವಿಧಾನದ 124ನೇ ಪರಿಚ್ಛೇದದ ಪ್ರಕಾರ ಅವಕಾಶವಿದೆ. ನಿಲುವಳಿ ಮಂಡಿಸಲು ಲೋಕಸಭೆಯ ಕನಿಷ್ಠ 100 ಸದಸ್ಯರು ಅಥವಾ ರಾಜ್ಯಸಭೆಯ ಕನಿಷ್ಠ 50 ಸದಸ್ಯರ ಅನುಮೋದನೆ ಪಡೆಯಬೇಕು.

ಪ್ರತಿಪಕ್ಷಗಳು ಮಂಡಿಸುವ ಮಹಾಭಿಯೋಗ ನಿಲುವಳಿಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಸಭಾಧ್ಯಕ್ಷರು ಅಥವಾ ಸಭಾಪತಿಗೆ ಇರುತ್ತದೆ.

ನಿಲುವಳಿ ಸೂಚನೆ ಸ್ವೀಕೃತವಾದಲ್ಲಿ, ಆರೋಪಗಳ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್​ನ ತಲಾ ಒಬ್ಬರು ನ್ಯಾಯಮೂರ್ತಿಗಳು ಮತ್ತು ನ್ಯಾಯಶಾಸ್ತ್ರ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತದೆ. ಈ ಸಮಿತಿ ದೋಷಾರೋಪ ಪಟ್ಟಿ ಸಿದ್ಧಪಡಿಸಿಕೊಂಡು, ನ್ಯಾಯಪೀಠದ ರೀತಿಯಲ್ಲಿ ವಾದಿ ಮತ್ತು ಪ್ರತಿವಾದಿಗಳ ಹೇಳಿಕೆಗಳನ್ನು ಪಡೆದುಕೊಳ್ಳುತ್ತದೆ. ಅಗತ್ಯವೆನಿಸಿದಲ್ಲಿ ವಾದಿ ಮತ್ತು ಪ್ರತಿವಾದಿಗಳ ಪಾಟೀಸವಾಲು ನಡೆಸುತ್ತದೆ.

ವಿಚಾರಣೆಯಲ್ಲಿ ಆರೋಪ ಸಾಬೀತಾದ ಪಕ್ಷದಲ್ಲಿ ಸಮಿತಿಯು ನಿಲುವಳಿಯನ್ನು ಎತ್ತಿಹಿಡಿಯುತ್ತದೆ. ಸರ್ಕಾರವು ಅದನ್ನು ಸದನದಲ್ಲಿ ಮಂಡಿಸಿ, ಮತಕ್ಕೆ ಹಾಕುತ್ತದೆ. ಮತಕ್ಕೆ ಹಾಕಿದ ಸಂದರ್ಭದಲ್ಲಿ ಸದನದಲ್ಲಿ ಉಪಸ್ಥಿತರಿರುವ ಒಟ್ಟು ಸದಸ್ಯರ 3ನೇ 2 ಭಾಗದಷ್ಟು ಸದಸ್ಯರ ಅನುಮೋದನೆ ದೊರೆಯಬೇಕು.

ಬಳಿಕ ಮಹಾಭಿಯೋಗದ ನಿಲುವಳಿಯನ್ನು ರಾಷ್ಟ್ರಪತಿಗಳ ಸಹಿಗೆ ರವಾನಿಸಲಾಗುತ್ತದೆ. ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳನ್ನು ವಜಾಗೊಳಿಸುವ ಅಧಿಕಾರ ರಾಷ್ಟ್ರಪತಿಗಷ್ಟೇ ಇದೆ.