ಖೂಬಾ,ಮಾಲೀಕಯ್ಯ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಮತ್ತೆ ಐದಾರು ಕೈ ಶಾಸಕರು ಕಮಲ ತೆಕ್ಕೆಗೆ ?ಯಾರೆಲ್ಲ ಗೊತ್ತಾ..!??

ಖೂಬಾ,ಮಾಲೀಕಯ್ಯ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಮತ್ತೆ ಐದಾರು ಕೈ ಶಾಸಕರು ಕಮಲ ತೆಕ್ಕೆಗೆ ?ಯಾರೆಲ್ಲ ಗೊತ್ತಾ..!??

0

ಹೈದರಾಬಾದ್ ಕರ್ನಾಟಕದ ಮತ್ತೊಬ್ಬ ಶಾಸಕ ಮಲ್ಲಿಕಾರ್ಜುನ ಖೂಬಾ ಕೇಸರಿ ಪಡೆ ಸೇರಲು ಮುಂದಾಗಿದ್ದಾರೆ. ಹೀಗಾಗಿ ಹೈಕ ರಾಜಕೀಯ ಇನ್ನಷ್ಟು ರಂಗೇರತೊಡಗಿದೆ. ಬಸವಕಲ್ಯಾಣ ಶಾಸಕರಾಗಿರುವ ಅವರು ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ.

‘ನಾನು ಜೆಡಿಎಸ್ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಬೆಂಗಳೂರಿಗೆ ತೆರಳಿ ಸ್ಪೀಕರ್ ಅವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಸುದ್ದಿಗಾರರಿಗೆ ಖೂಬಾ ತಿಳಿಸಿದರು.

ಬಿಜೆಪಿ ವರಿಷ್ಠರು ಸೂಚಿಸುವ ಯಾವುದೇ ಸಮಯದಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರುವೆ. ಜೆಡಿಎಸ್ನ ಸುಮಾರು 15 ಸಾವಿರ ಕಾರ್ಯಕರ್ತರು ನಮ್ಮೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದರು.

ಯಾವುದೇ ಬೇಡಿಕೆ ಹಾಗೂ ಷರತ್ತು ಇಲ್ಲದೆ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರುತ್ತಿದ್ದೇನೆ. ವರಿಷ್ಠರು ಟಿಕೆಟ್ ನೀಡಿದರೆ ಚುನಾವಣೆಗೆ ಸ್ಪರ್ಧಿಸುವೆ. ಇಲ್ಲವಾದರೆ ಸಾಮಾನ್ಯ ಕಾರ್ಯಕರ್ತನಂತೆ ಪಕ್ಷ ಸಂಘಟನೆ ಮಾಡುತ್ತೇನೆ.

| ಮಲ್ಲಿಕಾರ್ಜುನ ಖೂಬಾ ಶಾಸಕ

ಮಾಲೀಕಯ್ಯಗೆ ಬೆಂಬಲಿಗರ ಸಹಮತ

ಅಫಜಲಪುರ: ಶಾಸಕ ಮಾಲೀಕಯ್ಯ ಗುತ್ತೇದಾರ್ ಕೇಸರಿಪಡೆ ಸೇರಲು ಕ್ಷೇತ್ರದಲ್ಲಿರುವ ಬೆಂಬಲಿಗರು ಒಪ್ಪಿಗೆ ಸೂಚಿಸಿದ್ದಾರೆ. ನೀವು ಯಾವ ಪಕ್ಷದಲ್ಲಿ ಇರುತ್ತೀರೋ, ನಿಮ್ಮ ಹಿಂದೆ ನಾವಿರುತ್ತೇವೆ. ಈ ಬಗ್ಗೆ ಅನುಮಾನವೇ ಬೇಡ. ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ. ಬಿಜೆಪಿಯಿಂದ ನಿಂತರೂ ಗೆಲ್ಲಿಸುತ್ತೇವೆ ಎಂದು ಬೆಂಬಲಿಗರು ಭರವಸೆ ನೀಡಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುತ್ತೇದಾರ್, ಬಿಎಸ್ವೈ ಅವರು ನನಗೆ ಎಂಎಲ್ಸಿ, ಮಾಜಿ ಶಾಸಕ ಎಂ.ವೈ.ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ನೀಡುವುದಾಗಿ ತಿಳಿಸಿದ್ದರು. ಅದಕ್ಕೆ ನಾನು ಒಪ್ಪಿಗೆ ನೀಡಿದ್ದೆ. ಆದರೆ ನನ್ನ ಕಾರ್ಯಕರ್ತರು ನೀವೇ ಬಿಜೆಪಿಯಿಂದ ವಿಧಾನಸಭೆ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದ್ದರಿಂದ ವಿಧಾನಸಭೆ ಚುನಾವಣೆಗೆ ನಿಲ್ಲುತ್ತಿದ್ದೇನೆ. ನನ್ನ ಸಹೋದರ ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಕಾಂಗ್ರೆಸ್ನಲ್ಲೇ ಇರಲಿದ್ದಾರೆ ಎಂಬ ವರದಿ ಮಾಧ್ಯಮಗಳಲ್ಲಿ ಬಂದಿದೆ. ನಿತಿನ್ ಸೇರಿ ನಾವೆಲ್ಲರೂ ಒಂದೇ. ನನ್ನ ತಮ್ಮಂದಿರೂ ನನ್ನ ನಿರ್ಣಯಕ್ಕೆ ಬದ್ಧರಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಭಾಧ್ಯಕ್ಷರನ್ನು ಮಂಗಳವಾರ ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಹೀಗಾಗಿ ಕಾಂಗ್ರೆಸ್ಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸದು.

| ಮಾಲೀಕಯ್ಯ ಗುತ್ತೇದಾರ್ ಶಾಸಕ

ಮತ್ತಷ್ಟು ಶಾಸಕರು ಕಮಲ ತೆಕ್ಕೆಗೆ

ನಾನೊಬ್ಬನೇ ಅಲ್ಲ. ಇನ್ನೂ ಐದಾರು ಕಾಂಗ್ರೆಸ್ ಶಾಸಕರು ಅತಿ ಶೀಘ್ರ ಕಮಲದ ತೆಕ್ಕೆಗೆ ಬರಲಿದ್ದಾರೆ. ಕಾಂಗ್ರೆಸ್ನಲ್ಲಿನ ಉಸಿರುಗಟ್ಟುವ ವಾತಾವರಣಕ್ಕೆ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದಾರೆ. ಹೈದರಾಬಾದ್ ಕರ್ನಾಟಕದ ಐದಾರು ಶಾಸಕರು, 10-15 ಮಾಜಿ ಶಾಸಕರು ಕಾಂಗ್ರೆಸ್ ತೊರೆದು ಶೀಘ್ರದಲ್ಲಿ ಬಿಜೆಪಿ ಸೇರಲಿದ್ದಾರೆ. ಆದರೆ ಹೆಸರು ಹೇಳೋದಿಲ್ಲ ಎಂದು ಮಾಲೀಕಯ್ಯ ಗುತ್ತೇದಾರ್ ತಿಳಿಸಿದ್ದಾರೆ.

ಕೃಪೆ:ವಿಜಯ ವಾಣಿ