ಪಾಕಿಸ್ತಾನದ ಸಂಸದೆಯಾಗಿ ಹಿಂದು ಮಹಿಳೆ ಆಯ್ಕೆ..!!

ಪಾಕಿಸ್ತಾನದ ಸಂಸದೆಯಾಗಿ ಹಿಂದು ಮಹಿಳೆ ಆಯ್ಕೆ..!!

0

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಸಂಸದೆಯೊಬ್ಬರು ಮೇಲ್ಮನೆಗೆ ಆಯ್ಕೆ ಆಗಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಕೃಷ್ಣಕುಮಾರಿ ಕೊಹ್ಲಿ ಅವರನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮೇಲ್ಮನೆಗೆ ಆಯ್ಕೆ ಮಾಡಿದೆ.

ಸಿಂಧ್ ಪ್ರಾಂತ್ಯದ ಥಾರ್ ಪ್ರದೇಶಕ್ಕೆ ಸೇರಿದ 39 ವರ್ಷದ ಕೊಹ್ಲಿ ಮಾರ್ಚ್ 3ರಂದು ನಡೆದ ಚುನಾವಣೆಯಲ್ಲಿ ಜಯಗಳಿಸಿದ್ದರು. ಮಾಧ್ಯಮಗಳಲ್ಲಿ ಆರಂಭದಲ್ಲಿ ಕೃಷ್ಣಕುಮಾರಿ ಮೊದಲ ಹಿಂದೂ ಸಂಸದೆಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿಗಳು ಪ್ರಕಟವಾಗಿತ್ತು. ಆದರೆ ಕೃಷ್ಣಕುಮಾರಿ ಕೊಹ್ಲಿಗಿಂತಲೂ ಹಿಂದೆ ರತ್ನ ಭಗವನ್ ದಾಸ್ ಎಂಬವರು ಮೇಲ್ಮಗೆ ಆಯ್ಕೆ ಆಗಿದ್ದರು. ಪಿಪಿಪಿಯಿಂದ ಆಯ್ಕೆ ಆಗಿದ್ದ ಅವರು 2012ರ ವರೆಗೆ ಮೇಲ್ಮನೆಯ ಸದಸ್ಯರಾಗಿದ್ದರು.

1979ರ ಫೆಬ್ರವರಿಯಲ್ಲಿ ಜನಿಸಿದ ಕೃಷ್ಣಕುಮಾರಿ ಕೊಹ್ಲಿ 16ನೇ ವಯಸ್ಸಿನಲ್ಲಿ 9ನೇ ತರಗತಿ ಓದುತ್ತಿದ್ದಾಗ ಮದುವೆಯಾಗಿದ್ದರು. ಮದುವೆಯಾದ ನಂತರ ಓದು ಮುಂದುವರಿಸಿ 2013ರಲ್ಲಿ ಸಮಾಜಶಾಸ್ತ್ರದಲ್ಲಿ ಸಿಂಧ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 20 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನದಲ್ಲಿ 2% ಹಿಂದೂ ಧರ್ಮದವರಿದ್ದಾರೆ.