ಮುಂಬೈ ನಿಂದ ಪುಣೆಗೆ ಜಸ್ಟ್ 25 ನಿಮಿಷ ಸಾಕು- ಹೈಪರ್‍ಲೂಪ್ ಪಡೆಯುವಲ್ಲಿ ಭಾರತವೇ ಮೊದಲ ದೇಶ..!!ಏನಿದು ಹೈಪರ್‍ಲೂಪ್..?

ಮುಂಬೈ ನಿಂದ ಪುಣೆಗೆ ಜಸ್ಟ್ 25 ನಿಮಿಷ ಸಾಕು- ಹೈಪರ್‍ಲೂಪ್ ಪಡೆಯುವಲ್ಲಿ ಭಾರತವೇ ಮೊದಲ ದೇಶ..!!ಏನಿದು ಹೈಪರ್‍ಲೂಪ್..?

0

ನವದೆಹಲಿ: ಮುಂಬೈನಿಂದ ಪುಣೆಗೆ ಕೇವಲ 25 ನಿಮಿಷಗಳಲ್ಲಿ ಪ್ರಯಾಣ ಮಾಡಲು ನೆರವಾಗುವ ಹೈಪರ್‍ಲೂಪ್ ಸಂಚಾರ ವ್ಯವಸ್ಥೆ ನಿರ್ಮಿಸಲು ರಿಚರ್ಡ್ ಬ್ರಾನ್ಸನ್ ಅವರ ವರ್ಜಿನ್ ಹೈಪರ್‍ಲೂಪ್ ಒನ್, ಮಹಾರಾಷ್ಟ್ರ ಸರ್ಕಾರದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.

ಮಹಾರಾಷ್ಟ್ರ ಹೂಡಿಕೆದಾರರ ಸಮಾವೇಶದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ. ಈ ಯೋಜನೆಯಿಂದ ಭಾರತದ ಪ್ರಮುಖ ನಗರಗಳ ನಡುವಿನ ಪ್ರಯಾಣ ಸಮಯ ಸುಮಾರು 2 ಗಂಟೆಯಷ್ಟು ಕಡಿಮೆಯಾಗಲಿದೆ. ರಾಷ್ಟ್ರೀಯ ಹೈಪರ್‍ಲೂಪ್ ನೆಟ್ವರ್ಕ್ ಭಾಗವಾಗಿ ಪುಣೆ-ಮುಂಬೈ ಮಾರ್ಗ ಮೊದಲ ಹಂತದಲ್ಲಿ ನಿರ್ಮಾಣವಾಗಲಿದೆ.

ಭಾರತವೇ ಮೊದಲಿಗ?: ಹೈಪರ್‍ಲೂಪ್ ಯೋಜನೆಯ ಅನುಷ್ಠಾನಕ್ಕೆ ವಿಶ್ವದ ಹಲವು ಭಾಗಗಳಲ್ಲಿ ಇನ್ನೂ ಪರೀಕ್ಷೆಗಳು ನಡೆಯುತ್ತಿವೆ. ಆದರೂ ಈವರೆಗೆ ಮಾನವ ಸಹಿತ ಹೈಪರ್‍ಲೂಪ್ ರೈಲಿನ ಪರೀಕ್ಷಾರ್ಥ ಸಂಚಾರ ನಡೆದಿಲ್ಲ. ಈ ಕ್ರಾಂತಿಕಾರಿ ಸಂಚಾರ ವ್ಯವಸ್ಥೆಯನ್ನ ಅಳವಡಿಸಿಕೊಳ್ಳುವಲ್ಲಿ ಭಾರತವೇ ಮೊದಲ ರಾಷ್ಟ್ರವಾಗುವ ನಿರೀಕ್ಷೆ ಇದೆ.

ಯೋಜನೆಗೆ ಎಷ್ಟು ಸಮಯ ಬೇಕು? ವೆಚ್ಛ ಎಷ್ಟು?: ಯೋಜನೆಗೆ ತಗುಲುವ ವೆಚ್ಛ ಹಾಗೂ ಯಾವಾಗ ಚಾಲನೆ ದೊರೆಯಲಿದೆ ಎಂಬ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಪತ್ರಿಕೆಯೊಂದರ ವರದಿಯ ಪ್ರಕಾರ ಪರೀಕ್ಷಾರ್ಥ ಸಂಚಾರ ಪೂರ್ಣಗೊಳ್ಳಲು 3 ವರ್ಷ ಸಮಯ ಹಿಡಿಯಲಿದ್ದು, ವಾಣಿಜ್ಯ ಚಟುವಟಿಕೆ ಆರಂಭಿಸಲು 6 ವರ್ಷ ಹಿಡಿಯಲಿದೆ.

ಸದ್ಯಕ್ಕೆ ಮುಂಬೈ ಪುಣೆ ನಡುವೆ ಸಂಚರಿಸಲು 3 ಗಂಟೆ ಸಮಯ ಹಿಡಿಯುತ್ತದೆ. ಹೈಪರ್‍ಲೂಪ್ ಯೋಜನೆಯಿಂದಾಗ ಇದು 25 ನಿಮಿಷಕ್ಕೆ ಇಳಿಯಲಿದೆ. ಅಲ್ಲದೆ ಇಷ್ಟೇ ದೂರಕ್ಕೆ ಹೈ ಸ್ಪೀಡ್ ರೈಲ್ವೆ ಲೈನ್ ನಿರ್ಮಿಸಲು ಬೇಕಾಗುವ ವೆಚ್ಛಕ್ಕೆ ಹೋಲಿಸಿದ್ರೆ ಹೈಪರ್‍ಲೂಪ್ ನಿರ್ಮಾಣಕ್ಕೆ ಕಡಿಮೆ ವೆಚ್ಛ ತಗುಲಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಕಳೆದ ವರ್ಷ ಆಂಧ್ರಪ್ರದೇಶದ ಸರ್ಕಾರ ವಿಜಯವಾಡ ಮತ್ತು ಅಮರಾವತಿ ನಗರಗಳನ್ನ ಸಂಪರ್ಕಿಸಲು ಅಮರಿಕದ ಹೈಪರ್‍ಲೂಪ್ ಟ್ರಾನ್ಸ್‍ಪೋರ್ಟೇಷನ್ ಟೆಕ್ನಾಲಾಜೀಸ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಪ್ರಸ್ತುತ ಈ ಎರಡು ನಗರಗಳ ನಡುವಿನ ಪ್ರಯಾಣ ಸಮಯ 1 ಗಂಟೆ ಇದ್ದು, ಹೈಪರ್‍ಲೂಪ್ ನಿಂದ ಕೇವಲ 6 ನಿಮಿಷಗಳಿಗೆ ಇಳಿಯಲಿದೆ.

ಏನಿದು ಹೈಪರ್‍ಲೂಪ್?: ಹೈಪರ್‍ಲೂಪ್ ಮುಂದಿನ ಪೀಳಿಗೆಯ ರೈಲ್ವೇ ವ್ಯವಸ್ಥೆಯಾಗಿದ್ದು, ಅಯಸ್ಕಾಂತಿಯ ಶಕ್ತಿಯಿಂದ ಸಂಚರಿಸುತ್ತದೆ. ಗಂಟೆಗೆ 1126 ಕಿ.ಮೀ ವೇಗ ಇರಲಿದೆ ಎಂದು ನಿರೀಕ್ಷಿಸಬಹುದಾಗಿದೆ. ಕೊಳವೆಯಾಕಾರದ ಈ ವಾಹನ ಶಬ್ದದ ವೇಗದಲ್ಲಿ ಚಲಿಸಲಿದೆ ಎಂದು ವರದಿಯಾಗಿದೆ. ಪ್ರಸ್ತುತ ಭಾರತದಲ್ಲಿ ಅತ್ಯಂತ ವೇಗದ ರೈಲು ಟಾಲ್ಗೋ ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. ಆದ್ರೆ ಇದು ಇನ್ನೂ ಪರೀಕ್ಷಾರ್ಥ ಸಂಚಾರದಡಿ ಇದೆ.

ಲಾಭ ಏನು?:

ಪ್ರಸ್ತಾವಿತ 149 ಕಿಮಿ ಇರೋ ಪುಣೆ-ಮುಂಬೈ ಮಾರ್ಗಕ್ಕೆ ಬರೋದಾದ್ರೆ ಇದು ಪುಣೆ, ನವೀಮುಂಬೆ ಅಂತರಾಷ್ಟ್ರಿಯ ವಿಮಾನ ನಿಲ್ದಾಣ ಹಾಗೂ ಮುಂಬೈ ನಗರಗಳನ್ನ ಸಂಪರ್ಕಿಸಲಿದ್ದು, 25 ನಿಮಿಷ ಪ್ರಯಾಣ ಸಮಯ ಇರಲಿದೆ. ರಿಚರ್ಡ್ ಬ್ರಾನ್ಸನ್ ಅವರ ಪ್ರಕಾರ ಈ ವ್ಯವಸ್ಥೆಯಿಂದ 2.6 ಕೋಟಿ ಜನರಿಗೆ ನೆರವಾಗಲಿದ್ದು, 9 ಕೋಟಿ ಗಂಟೆಗೂ ಹೆಚ್ಚು ಪ್ರಯಾಣ ಸಮಯ ಉಳಿತಾಯವಾಗಲಿದೆ. ಮಾರ್ಗವು ಸಂಪುರ್ಣವಾಗಿ ವಿದ್ಯುತ್ ಶಕ್ತಿಯಿಂದ ಕೂಡಿರಲಿದ್ದು, ವರ್ಷಕ್ಕೆ 1.5 ಲಕ್ಷ ಟನ್‍ನಷ್ಟು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನ ಕಡಿಮೆ ಮಾಡಲಿದೆ.