ಶಿವಾಜಿಯ ಪುಣ್ಯನಾಮವನ್ನು ಸ್ಮರಿಸಿ

ಶಿವಾಜಿಯ ಪುಣ್ಯನಾಮವನ್ನು ಸ್ಮರಿಸಿ

ಭಾರತೀಯರೇ !ಎಲ್ಲ ದಿಶೆಗಳಿಂದಲೂ ಒಂದುಗೂಡಿ ಶಿವಾಜಿಯ ಪುಣ್ಯನಾಮವನ್ನು ಗೌರವದಿಂದ ಸ್ಮರಿಸಿ

0

ಶಿವಾಜಿಯ ಪುಣ್ಯನಾಮವನ್ನು ಸ್ಮರಿಸಿ

ಭಾರತೀಯರೇ !ಎಲ್ಲ ದಿಶೆಗಳಿಂದಲೂ ಒಂದುಗೂಡಿ ಶಿವಾಜಿಯ ಪುಣ್ಯನಾಮವನ್ನು ಗೌರವದಿಂದ ಸ್ಮರಿಸಿ

’ಹೋಳಾಗಿ ಹರಿದುಹಂಚಿಹೋಗಿದ್ದ ಭಾರತವನ್ನು ಒಂದು ಧರ್ಮರಾಜ್ಯದ ಸೂತ್ರದಲ್ಲಿ ಒಂದುಗೂಡಿಸುವೆನು.’

ಓ ಶಿವಾಜಿರಾಜನೇ,

ಆದಾವ ಹಳೆಯ ಶತಮಾನದ ಅಪ್ರಸಿದ್ಧ ದಿನ, ಮಹಾರಾಷ್ಟ್ರದ ಅದಾವ ಪರ್ವತ ಶಿಖರದ ಅರಣ್ಯದಘೋರ ಅಂಧಕಾರದಲ್ಲಿ ಕುಳಿತಿದ್ದ ನಿನ್ನಲ್ಲಿ ವಿದ್ಯುಲ್ಲತೆಯಂತೆ ಈ ಭಾವನೆ ಹೊಳೆದಿದ್ದಿತೋ ತಿಳಿಯದು.

ಅನಂತರ ಒಂದು ದಿನ, ಮಹಾರಾಷ್ಟ್ರ ಪ್ರಾಂತದಿಂದ ನಿನ್ನ ಖಡ್ಗದ ತುದಿಯು ವಿದ್ಯುತ್ ಪ್ರಕಾಶದಂತಹ ಜಗಜಗಿಸುವ ಅಕ್ಷರಗಳಲ್ಲಿ ಈ ಮಹಾಮಂತ್ರವನ್ನು ದಿಗ್ದಿಗಂತಗಳಲ್ಲಿ,ಯುಗ ಯುಗಗಳಿಗಾಗಿ ಅಂಕಿತಗೊಳಿಸಿತು. ಸಂಧ್ಯಾ ಪ್ರಳಯದಲ್ಲಿ ಹಣ್ಣಾದ ಹಳದಿ ಎಲೆಯಂತೆ ಮೊಗಲರಶಿರಸ್ತ್ರಾಣ ಹಾರಿಹೋಯಿತು. ಪುರಾತನ ಆ ಗರ್ಜನೆಯಲ್ಲಡಗಿದ್ದ ಸಂದೇಶವನ್ನು ಆ ದಿನವೂ ವಂಗಪ್ರದೇಶವು ಕೇಳಲಾರದಾಯಿತು.

ಓ ಇತಿಹಾಸವೆ ! ಓ ಮಿಥ್ಯಾಭಾಷಿಯೇ !!

ಸಾಕು ನಿನ್ನ ಹರಟೆ. ವಿಧಿಯ ಧೃಢನಿಲುವು ನಿನ್ನ ಅಂದಾಜಿನ ಮೇಲೆ ಖಂಡಿತವಾಗಿಯೂ ವಿಜಯಗಳಿಸುವುದು. ಅಮರವಾಗಿರುವುದನ್ನು ನಿನ್ನ ಅಮರವಾಣಿಯು ತಗ್ಗಿಸಲಾಗದು. ನಿಜವಾದ ತಪಸ್ಸಿಗೆ ಮೂರುಲೋಕಗಳಲ್ಲೂ ಯಾರೂ ಹಾನಿಮಾಡಲಾರರೆಂಬುದನ್ನು ಖಚಿತವಾಗಿ ತಿಳಿದುಕೋ.

ಓ ರಾಜತಪಸ್ವಿ ವೀರನೇ ! (ಶಿವಾಜಿ)

ನಿನ್ನ ಆ ಪವಿತ್ರ ಭಾವನೆಯನ್ನು ವಿಧಾತನ ಅಕ್ಷಯ ಭಂಡಾರದಲ್ಲಿ ಸೇರಿಸಲಾಗಿದೆ. ಕಾಲವು ಅದರ ಒಂದು ಕಣವನ್ನೂ ಅಪಹರಿಸಲಾರದು. ನಿನ್ನ ಆ ಪ್ರಾಣೋತ್ಸರ್ಗವು ಸ್ವದೇಶಲಕ್ಷ್ಮಿಯ ದೇವಾಲಯದಲ್ಲಿ ಮಾಡಿದ ಪ್ರಾಮಾಣಿಕ ಸಾಧನೆ. ಯಾರಿಗೂ ತಿಳಿದಿಲ್ಲ ಆದರೂ ಅದು ಭಾರತದಯುಗ-ಯುಗಗಳಿಗಾಗಿ ಒಂದು ನಿಕ್ಷೇಪದ ರೂಪವನ್ನು ತಾಳಿದೆ.

ಓ ರಾಜಯೋಗಿಯೇ !

ವರ್ಷಋತುವಿನಲ್ಲಿ ಪರ್ವತಗಳ ಗರ್ಭದಿಂದ ಒಸರು ಚಿಮ್ಮಿ ಹರಿಯುವಂತೆ, ಪರ್ವತಗಳ ಗುಹೆಗಳಲ್ಲಿ ಅಪ್ರಸಿದ್ಧ ಮತ್ತು ಅಜ್ಞಾತವಾಗಿದ್ದ ನೀನು ಅಕಲ್ಪಿತವಾಗಿಪ್ರತ್ಯಕ್ಷನಾದೆ. ಒಂದು ಕಾಲದಲ್ಲಿ ಇಡೀ ಗಗನಮಂಡಲವನ್ನು ವ್ಯಾಪಿಸಿದ್ದ ಆ ಧ್ವಜವು, ಇಷ್ಟು ಸಮಯದವರೆಗೆ ಅದೃಶ್ಯವಾಗಿ ಹೇಗೆ ಉಳಿಯುವಂತಾಯಿತೆಂದು ಇಡೀ ಜಗತ್ತಿಗೆ ಆಶ್ಚರ್ಯವಾಯಿತು !

ವಂಗ ಪ್ರದೇಶದ ಪ್ರಾಂಗಣದಲ್ಲಿ ನಿನ್ನ ಜಯಭೇರಿಯ ನಿನಾದ ! ಆ ಅಭೂತಪೂರ್ವ ಘಟನೆಯನ್ನು ನೋಡಿ ಪೂರ್ವ ಭಾರತದ ನನ್ನಂತಹ ಕವಿಯು ಅದೇ ರೀತಿ ಆಶ್ಚರ್ಯಚಕಿತವಾಗಿದ್ದಾನೆ!! ಮೂರು ಶತಮಾನಗಳ ಗಾಢಾಂಧಕಾರವನ್ನು ಭೇದಿಸಿಕೊಂಡು ನಿನ್ನ ಪುಣ್ಯಪ್ರತಾಪವು ನವಕಿರಣಗಳ ಪ್ರಕಾಶದಂತೆ ಇಂದು ಪೂರ್ವವನ್ನು ಅದೆಂತು ಮತ್ತೊಮ್ಮೆ ದೇದೀಪ್ಯಮಾನಗೊಳಿಸುತ್ತಿದೆ !!!

ಶತಶತಮಾನಗಳವರೆಗೆ ವಿಸ್ಮೃತಿಯ ಗರ್ಭದಲ್ಲಿದ್ದರೂ ಸತ್ಯವೆಂದೂ ಸಾಯದು, ಉಪೇಕ್ಷಿತವಾಗದು. ಅಪಮಾನಿಸಲ್ಪಟ್ಟರೂ ಅಲುಗಾಡದು. ಆಘಾತಗಳಲ್ಲೂ ನಿಶ್ಚಲವಾಗಿಯೂ ಭದ್ರವಾಗಿಯೂ ಇರುವುದು. ಎಂದೋ ಅಳಿದುಹೋಗಿದೆಯೆಂದು ಎಲ್ಲರೂ ತಿಳೆದುಕೊಂಡಿರುವ ಅದೇ ಸತ್ಯ ಇಂದು ಪೂಜ್ಯ ಅತಿಯ ವೇಷ ಧರಿಸಿ ಭಾರತದ ದ್ವಾರದಲ್ಲಿ ಬಂದು ನಿಂತಿದೆ.

ಓ ಧರ್ಮರಾಜನೇ !

ಮಹಾರಾಷ್ಟ್ರ ಪ್ರಾಂತದಿಂದ ಅಂದು ನೀನು ಆಹ್ವಾನವಿತ್ತಾಗ, ನಾವು ನಿನ್ನನ್ನು ಒಬ್ಬ ರಾಜನೆಂದು ಗುರುತಿಸಲಿಲ್ಲ. ನಿನ್ನನ್ನು ಗುರುತಿಸಲಿಲ್ಲ. ನಿನ್ನನ್ನು ಗೌರವಿಸಲಿಲ್ಲ. ಆ ಭೈರವನಾದದ ಬಗ್ಗೆ ಶ್ರದ್ಧೆಯನ್ನು ವ್ಯಕ್ತಪಡಿಸಲಿಲ್ಲ. ನಿನ್ನ ಕೃಪಾಣದ ಕಾಂತಿ ವಂಗ ಆಕಾಶದಲ್ಲಿ ಒಂದು ದಿನ ಮಿಂಚಿದಾಗ ಭಯದಿಂದಾಗಿ, ಆ ಘೋರ ದುರ್ದಿನಗಳಲ್ಲಿ, ಆ ತಾಂಡವಲೀಲೆಯ ರಹಸ್ಯವನ್ನು ನಾವು ತಿಳಿಯದಾದೆವು.

ಓ ಅಮರಮೂರ್ತಿಯೇ

ಇಂದು ನೀನು ತಲೆಯೆತ್ತಿ ಮೃತ್ಯುಸಿಂಹಾಸನದಲ್ಲಿ ವಿರಾಜಮಾನನಾಗಿರುವೆ. ಆ ರಾಜಕಿರೀಟದ ಶೋಭೆ, ಅದರ ದಿವ್ಯ ಪ್ರಕಾಶ ಯಾವ ಕಾಲದಲ್ಲೂ ಅಳಿಯದು.

ಓ ರಾಜನೇ !

ಇಂದು ನಿನ್ನನ್ನು ನಾವು ಸಾಮ್ರಾಟನ ರೂಪದಲ್ಲಿ ಗುರುತಿಸಿದೆವು. ವಂಗಭೂಮಿಯ ಎಂಟು ಕೋಟಿ ಸುಪುತ್ರರು ಇಂದು ರಾಜ-ಕರವನ್ನು ಹಿಡಿದು ನಿನ್ನೆದುರು ನಿಂತಿದ್ದಾರೆ. ಆಂದು ನಿನ್ನ ಕಥೆ ಕೇಳಿರಲಿಲ್ಲ. ಆದರೆ ಇಂದು ನಿನ್ನ ಆದೇಶ ಸಿಗುತ್ತಲೇ ನಾನು ನತಮಸ್ತಕವಾಗುತ್ತಿದ್ದೇನೆ. ನಿನ್ನನ್ನು ಸ್ಮರಿಸಿ, ಇಡೀ ಭಾರತದ ಜನಕೋಟಿಯು ಕಂಠದಲ್ಲಿ ಕಂಠ, ಹೃದಯದಲ್ಲಿ ಹೃದಯವನ್ನು ಜೊತೆಗೂಡಿಸಿ ಒಗ್ಗೂಡುವರು. ಬೈರಾಗಿಯ ಉತ್ತರೀಯದ ಧ್ವಜವನ್ನು ಮಾಡಿ ಹಾರಿಸುವರು. “ಭಾರತದಲ್ಲೊಂದು ಧರ್ಮರಾಜ್ಯ ಸ್ಥಾಪಿತವಾದೀತು !” ಈ ಮಹಾವಚನಕ್ಕೆ ನಾವು ಶರಣುಹೋಗುವೆವು.

ಓ ವಂಗವಾಸಿಗಳೇ !

ಮರಾಠರೊಂದಿಗೆ ಸ್ವರಗೂಡಿಸಿ ‘ಶಿವಾಜಿ ಕೀ ಜೈ’ ಎನ್ನಿ. ಶಿವಾಜಿ ಮಹೋತ್ಸವವನ್ನು ಆಚರಿಸಲು ಮರಾಠರ ಜೊತೆಜೊತೆಗೇ ಹೆಜ್ಜೆಹಾಕಿ. ಓ ಭಾರತವಾಸಿಗಳೇ ! ನೀವು ಭಾರತದ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಹೀಗೆ ಎಲ್ಲ ದಿಶೆಗಳಿಂದಲೂ ಒಟ್ಟುಗೂಡಿ ಶಿವಾಜಿಯ ಪುಣ್ಯನಾಮದ ಗೌರವದ ಆನಂದವನ್ನು ಸವಿಯಿರಿ.

– ರವೀಂದ್ರನಾಥ ಠಾಕೂರ್