ಪದ್ಮಶ್ರೀ ಪ್ರಶಸ್ತಿ ವಿನಮ್ರವಾಗಿ ನಿರಾಕರಿಸಿದ ಸಿದ್ದೇಶ್ವರ ಶ್ರೀಗಳು..!!

ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯನ್ನು ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಗೌರವಯುತವಾಗಿ ನಿರಕಾರಿಸಿದ್ದಾರೆ.

ನನ್ನ ಜೀವನದಲ್ಲಿ ಯಾವುದೇ ಪ್ರಶಸ್ತಿ ಸ್ವೀಕರಿಸಿಲ್ಲ. ಕೇಂದ್ರ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಮೇಲೆ ಅಪಾರ ಗೌರವವಿದೆ. ಆದರೆ, ನಾನೇನು ಅಂತಹ ಮಹಾಸಾಧನೆ ಮಾಡಿದ್ದೇನೆ? ಆಧ್ಯಾತ್ಮಿಕ ಚಿಂತನೆ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಉತ್ತಮ ಬದುಕು ರೂಪಿಸಿಕೊಳ್ಳಲು ಸಣ್ಣದೊಂದು ಪ್ರಯತ್ನ ಮಾಡುತ್ತಿದ್ದೇನೆ. ನಾನೊಬ್ಬ ಸರಳಜೀವಿ ಎಂದು ಅವರು ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸರ್ಕಾರದಿಂದ ತಮಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಪ್ರಶಸ್ತಿ ಘೋಷಣೆಯಾಗಿದೆ ಎಂದು ಭಕ್ತರ ಬಾಯಿಯಿಂದ ತಿಳಿದುಕೊಂಡೆ. ಆಧ್ಯಾತ್ಮಿಕ ಬೋಧನೆ ಮೂಲಕ ಜನರನ್ನು ಸುಖಮಯ ಜೀವನದತ್ತ ಕೊಂಡೊಯ್ಯುವ ಉದ್ದೇಶ ನನ್ನದು ಎಂದರು.

 

ಸಿದ್ದೇಶ್ವರ ಶ್ರೀಗಳ ಪರಿಚಯ:

ವಿಜಯಪುರ ಜಿಲ್ಲೆ ಬಿಜ್ಜರಗಿಯ ಸಿದ್ಧೇಶ್ವರ ಶ್ರೀಗಳ ಸರಳ ನಡೆ-ನುಡಿ, ಪ್ರವಚನ ಬಾಳಿಗೆ ಬುತ್ತಿ ಇದ್ದಂತೆ. 1940 ಸೆ.5ರಂದು ಬಿಜ್ಜರಗಿಯ ಓಗಪ್ಪ ಸಿದಗೊಂಡ ಬಿರಾದಾರ ಪಾಟೀಲ ಹಾಗೂ ಸಂಗಮ್ಮಳ ಮೊದಲ ಪುತ್ರರಾಗಿ ಜನಿಸಿದ ಸಿದ್ಧೇಶ್ವರ ಶ್ರೀಗಳ ಪೂರ್ವಾಶ್ರಮದ ಹೆಸರು ಸಿದಗೊಂಡಪ್ಪ. ಓಗಪ್ಪ ಅದ್ಭುತ ಕಲಾವಿದ. ವ್ಯಕ್ತಿಯನ್ನು ನೋಡಿ ಚಿತ್ರ ಬಿಡಿಸುವ ಮಹಾನ್ ಕಲಾವಿದ.

ಅದಕ್ಕಾಗಿ ಅವರನ್ನು ಅಂದಿನ ಕಾಲದ ಜನ ‘ಜೀವಂತ ಕ್ಯಾಮರಾ’ ಎನ್ನುತ್ತಿದ್ದರು. 1957ರಲ್ಲಿ ಮಲ್ಲಿಕಾರ್ಜುನ ಶ್ರೀಗಳು ಚಡಚಣದಲ್ಲಿ ಪ್ರವಚನ ಆರಂಭಿಸಿದಾಗ, ಸಿದಗೊಂಡನನ್ನು ತಮ್ಮೊಂದಿಗೆ ಕರೆದೊಯ್ದಿದ್ದರು. ಅಲ್ಲಿನ ಪ್ರೌಢಶಾಲೆಗೆ ಸಿದಗೊಂಡನನ್ನು ಸೇರಿಸಿ ಮುಂದಿನ ಶಿಕ್ಷಣ ಪೂರೈಸಲು ಆಜ್ಞಾಪಿಸಿದರು.

1958ರಲ್ಲಿ ಚಡಚಣದಲ್ಲಿ ಪ್ರವಚನ ಮುಕ್ತಾಯ ಸಮಾರಂಭದಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳು ಸಿದಗೊಂಡನನ್ನು ಅಧಿಕೃತ ಶಿಷ್ಯನನ್ನಾಗಿ ಸ್ವೀಕರಿಸುವ ಮೂಲಕ ‘ಸಿದ್ಧೇಶ್ವರ’ ಎಂದು ನಾಮಕರಣ ಮಾಡಿದರು.

ಮೂಲ: ವಿಜಯವಾಣಿ

Post Author: Ravi Yadav