ಚಿನ್ನ ಗೆದ್ದ ಓಟಗಾರ್ತಿ ಗೆ ವಿಶೇಷ ರೀತಿಯಲ್ಲಿ ಬನ್ನೇರುಘಟ್ಟ ಉದ್ಯಾನವನ ಗೌರವ ಸಲ್ಲಿಸಿದ್ದು ಹೇಗೆ ಗೊತ್ತಾ??

ಕಳೆದ ಕೆಲವು ದಿನಗಳ ಹಿಂದಷ್ಟೇ ಹಿಮಾ ದಾಸ್ ರವರು ಕೇವಲ 20 ದಿನಗಳ ಅಂತರದಲ್ಲಿ 5 ಚಿನ್ನದ ಪದಕಗಳನ್ನು ಗೆದ್ದಿದ್ದರು. ಆದರೆ ಕ್ರಿಕೆಟ್ ಕ್ರೀಡೆಯನ್ನು ಒಂದು ಧರ್ಮದಂತೆ ಬೆಳೆಸಿರುವ ಭಾರತದಲ್ಲಿ ಈ ಸಾಧನೆ ಹಲವಾರು ಜನರ ಕಣ್ಣಿಗೆ ಕಾಣಲಿಲ್ಲ, ಅದರಲ್ಲಿಯೂ ಕೇವಲ ಒಂದು ಪಂದ್ಯದಲ್ಲಿ ಒಬ್ಬ ಬ್ಯಾಟ್ಸ್ಮನ್ ಸೆಂಚುರಿ ಹೊಡೆದರೆ, ವಿಶೇಷ ಕಾರ್ಯಕ್ರಮಗಳನ್ನು ನಡೆಸಿ, ಜನರಿಗೆ ಸಾಕು ಎನ್ನುವಷ್ಟು ಸುದ್ದಿಗಳನ್ನು ಪ್ರಸಾರ ಮಾಡುವ ಮಾಧ್ಯಮಗಳ ಕಣ್ಣಿಗೆ ಬೀಳಲೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೊಂಚ ಸದ್ದು ಮಾಡಿತಾದರೂ, ಫೇಸ್ ಬುಕ್ ಹಾಗೂ ಟ್ವಿಟರ್ ಬಳಕೆದಾರರನ್ನು ಹೊರತುಪಡಿಸಿ ಅದೆಷ್ಟೊ ಜನರಿಗೆ ಹೀಮಾದಾಸ್ ರವರ ಸಾಧನೆ ತಿಳಿಯಲಿಲ್ಲ. ಹೀಗಿರುವಾಗ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನ ವಿಶೇಷ ರೀತಿಯಲ್ಲಿ ಹಿಮಾ ದಾಸ್ ರವರಿಗೆ ಗೌರವ ಸಲ್ಲಿಸಿದೆ.

ಈ ವಿಷಯದ ಕುರಿತು ಮಾತನಾಡಿರುವ ಬನ್ನೇರುಘಟ್ಟ ಉದ್ಯಾನವನದ ಮುಖ್ಯಸ್ಥ ವಿಪಿನ್ ಸಿಂಗ್ ರವರು, ಕಳೆದ ಭಾನುವಾರ ಇಡೀ ಭಾರತದಲ್ಲಿ ಅಂತರಾಷ್ಟ್ರೀಯ ಹುಲಿ ದಿನವನ್ನು ಬಹಳ ಸಂತಸದಿಂದ ಆಚರಣೆ ಮಾಡಿದೆ, ಹುಲಿಗಳ ಸಂಖ್ಯೆ ಭಾರತದಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ ಇಂತಹ ಸಂದರ್ಭದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜನಿಸಿರುವ ರಾಯಲ್ ಬೆಂಗಾಲ್ ಹುಲಿ ಮರಿಗೆ ಭಾರತದ ಧಿಂಗ್ ಎಕ್ಸ್ಪ್ರೆಸ್ ಎಂದೇ ಬಿರುದು ಪಡೆದುಕೊಂಡಿರುವ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅವರ ಹೆಸರನ್ನು ಇಡಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಈ ರಾಯಲ್ ಬೆಂಗಾಲ್ ಹುಲಿಯು ಕಳೆದ ಆರು ತಿಂಗಳ ಹಿಂದೆ ಇದೇ ಉದ್ಯಾನವನದಲ್ಲಿ ಜನಿಸಿತ್ತು, ಇದೀಗ ಹಿಮಾ ದಾಸ್ ಅವರಿಗೆ ವಿಶೇಷ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಹುಲಿಗೆ ಹಿಮಾದಾಸ್ ರವರ ಹೆಸರನ್ನು ಇಡಲಾಗಿದೆ.

Facebook Comments

Post Author: RAVI