ಚಿಟಿಕೆಯಷ್ಟು ಸುಲಭವಾಗಿ ಮನೆಯಲ್ಲಿ ಮಾಡಿ ಈರುಳ್ಳಿ ಚಟ್ನಿ, ಎಲ್ಲರೂ ಜಾಸ್ತಿ ಊಟ ಮಾಡ್ತಾರೆ.

ಚಿಟಿಕೆಯಷ್ಟು ಸುಲಭವಾಗಿ ಮನೆಯಲ್ಲಿ ಮಾಡಿ ಈರುಳ್ಳಿ ಚಟ್ನಿ, ಎಲ್ಲರೂ ಜಾಸ್ತಿ ಊಟ ಮಾಡ್ತಾರೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಈರುಳ್ಳಿ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಈರುಳ್ಳಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು: 1 ದೊಡ್ಡ ಈರುಳ್ಳಿ, ಸ್ವಲ್ಪ ಕರಿಬೇವು, 1 ಚಮಚ ಉದ್ದಿನಬೇಳೆ, 1 ಚಮಚ ಧನಿಯಾ, 2 ಗಡ್ಡೆ ಬೆಳ್ಳುಳ್ಳಿ, ಕಾಲು ಚಮಚ ಮೆಂತ್ಯ, ಸ್ವಲ್ಪ ಎಣ್ಣೆ, ಸ್ವಲ್ಪ ಸಾಸಿವೆ, ಸ್ವಲ್ಪ ಇಂಗು, ದೊಡ್ಡ ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು, 15 ಬ್ಯಾಡಿಗೆ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು.

ಈರುಳ್ಳಿ ಚಟ್ನಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 3 ಚಮಚದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಮೆಂತ್ಯ, ಉದ್ದಿನಬೇಳೆ, ಧನಿಯಾವನ್ನು ಹಾಕಿ ಉದ್ದಿನಬೇಳೆ ಸ್ವಲ್ಪ ಬಣ್ಣ ತಿರುಗುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿಕೊಂಡು ಎಣ್ಣೆಯನ್ನು ಬಾಣಲಿಯಲ್ಲಿ ಬಿಟ್ಟು ಉಳಿದ ಪದಾರ್ಥವನ್ನು ಒಂದು ಬಟ್ಟಲಿಗೆ ಹಾಕಿಕೊಂಡು ತಣ್ಣಗಾಗಲು ಬಿಡಿ.

ನಂತರ ಇದಕ್ಕೆ ಮಧ್ಯಮ ಗಾತ್ರದಲ್ಲಿ ಹಚ್ಚಿದ ಈರುಳ್ಳಿ, ಕರಿಬೇವು, ಬೆಳ್ಳುಳ್ಳಿ, ಹುಣಸೆಹಣ್ಣು ಹಾಗೂ ಸ್ವಲ್ಪ ಉಪ್ಪನ್ನು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಮೊದಲು ಫ್ರೈ ಮಾಡಿಕೊಂಡ ಮಿಶ್ರಣವನ್ನು ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಿ. ತದನಂತರ ಅದೇ ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ 3 ಚಮಚದಷ್ಟು ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಸ್ವಲ್ಪ ಕರಿಬೇವು, ಸ್ವಲ್ಪ ಇಂಗನ್ನು ಹಾಕಿ ಫ್ರೈ ಮಾಡಿಕೊಂಡು ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿದರೆ ಈರುಳ್ಳಿ ಚಟ್ನಿ ಸವಿಯಲು ಸಿದ್ದ.