ಅಕ್ಕಿ ನೆನೆಸಲು ಮರೆತಿರಾ?? ಪರವಾಗಿಲ್ಲ, ಹೀಗೆ ಕೇವಲ ಹತ್ತು ನಿಮಿಷಗಳಲ್ಲಿ ಮಾಡಿ ಸೆಟ್ ದೋಸೆ. ಹೇಗೆ ಗೊತ್ತಾ??

ಅಕ್ಕಿ ನೆನೆಸಲು ಮರೆತಿರಾ?? ಪರವಾಗಿಲ್ಲ, ಹೀಗೆ ಕೇವಲ ಹತ್ತು ನಿಮಿಷಗಳಲ್ಲಿ ಮಾಡಿ ಸೆಟ್ ದೋಸೆ. ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕೇವಲ ಹತ್ತು ನಿಮಿಷಗಳಲ್ಲಿ ಅಕ್ಕಿಹಿಟ್ಟನ್ನು ಉಪಯೋಗಿಸಿಕೊಂಡು ಮಾಡುವ ಸೆಟ್ ದೋಸೆ ಮತ್ತು ಕಡಲೆಬೇಳೆ ಚಟ್ನಿ ಮಾಡುವ ವಿಧಾನವನ್ನು ಇಂದು ನಿಮಗೆ ತಿಳಿಸಲಾಗಿದೆ. ಸೆಟ್ ದೋಸೆ ಮತ್ತು ಕಡಲೆಬೇಳೆ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು: ಕಾಲು ಬಟ್ಟಲು ಸಣ್ಣ ರವೆ, ಅರ್ಧ ಬಟ್ಟಲು ಅವಲಕ್ಕಿ, ಕಾಲು ಬಟ್ಟಲು ಮೊಸರು, 2 ಚಮಚ ಕಡಲೆ ಬೇಳೆ, 4 ಒಣಮೆಣಸಿನಕಾಯಿ, 2 ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, ಕಾಲು ಬಟ್ಟಲು ತೆಂಗಿನತುರಿ, ಸ್ವಲ್ಪ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ,ಸ್ವಲ್ಪ ಸಾಸುವೆ, ಒಂದು ಚಮಚ ಉದ್ದಿನಬೇಳೆ,೧ ಬಟ್ಟಲು ಅಕ್ಕಿಹಿಟ್ಟು, 1 ಚಮಚ ಸಕ್ಕರೆ ಪುಡಿ, ಕಾಲು ಚಮಚ ಅಡುಗೆ ಸೋಡಾ.

ಸೆಟ್ ದೋಸೆ ಮತ್ತು ಕಡಲೆಬೇಳೆ ಚಟ್ನಿ ಮಾಡುವ ವಿಧಾನ: ಮೊದಲಿಗೆ ಕಡಲೆಬೇಳೆ ಚಟ್ನಿ ಮಾಡುವ ವಿಧಾನ: ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಕಡಲೆಬೇಳೆಯನ್ನು ಹಾಕಿ ಅರ್ಧ ನಿಮಿಷಗಳ ಕಾಲ ಹುರಿದುಕೊಳ್ಳಿ. ನಂತರ ಇದಕ್ಕೆ 2 ಒಣಮೆಣಸಿನಕಾಯಿ, 2 ಬೆಳ್ಳುಳ್ಳಿ, ಸ್ವಲ್ಪ ಕರಿಬೇವು ಹಾಕಿ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹುರಿದ ಮಿಶ್ರಣ, ತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ .ಎಣ್ಣೆ ಕಾದ ನಂತರ ಸಾಸಿವೆ, ಉದ್ದಿನಬೇಳೆ, ೨ ಒಣಮೆಣಸಿನಕಾಯಿ, ನಾಲ್ಕು ಎಲೆ ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ರುಬ್ಬಿದ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿದರೆ ಕಡಲೆಬೇಳೆ ಚಟ್ನಿ ಸಿದ್ಧವಾಗುತ್ತದೆ.

ಸೆಟ್ ದೋಸೆ ಮಾಡುವ ವಿಧಾನ: ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಕಾಲು ಬಟ್ಟಲಷ್ಟು ರವೆ, ಅರ್ಧ ಬಟ್ಟಲಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹತ್ತು ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ಮತ್ತೊಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಅರ್ಧ ಬಟ್ಟಲಿನಷ್ಟು 2 – 3 ಬಾರಿ ನೀರಿನಿಂದ ತೊಳೆದ ಅವಲಕ್ಕಿ,ಕಾಲು ಬಟ್ಟಲು ಮೊಸರನ್ನು ಹಾಕಿ ಮಿಕ್ಸ್ ಮಾಡಿ ಹತ್ತು ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ನೆನೆದ ಅವಲಕ್ಕಿ ಮತ್ತು ನೆನೆದ ರವೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ 1 ಬಟ್ಟಲು ಅಕ್ಕಿಹಿಟ್ಟು, ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ.ತದನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು,1 ಚಮಚ ಸಕ್ಕರೆಪುಡಿ, ಕಾಲು ಚಮಚ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ದೋಸೆ ಹಿಟ್ಟು ರೆಡಿಯಾಗುತ್ತದೆ. ಕೊನೆಯದಾಗಿ ಪ್ಯಾನ್ ಅಥವಾ ತವಾದ ಮೇಲೆ ದಪ್ಪದಾಗಿ ದೋಸೆ ಹಾಕಿದರೆ ಸೆಟ್ ದೋಸೆ ಸವಿಯಲು ಸಿದ್ದ.