ರಾತ್ರಿ ಉಳಿದ ಅನ್ನವನ್ನು ಚೆಲ್ಲದೇ ಬೆಳಗ್ಗೆ ಹೊಸ ರೀತಿಯ ತಿಂಡಿ ಹೀಗೆ ಮಾಡಿ ನೋಡಿ, ಎಲ್ಲರೂ ಇಷ್ಟ ಪಡ್ತಾರೆ.

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ನಾವು ರಾತ್ರಿ ಅನ್ನ ಹೆಚ್ಚಾಗಿ ಉಳಿದರೆ ಅದನ್ನು ಮರುದಿನ ಬಳಸದೇ ಹಾಗೆಯೇ ಬಿಸಾಡುತ್ತೇವೆ. ಆಹಾರವನ್ನು ಬಿಸಾಡುವುದು ತಪ್ಪು, ಅದರಲ್ಲೂ ಅನ್ನದಂಥ ವಿಷಯವನ್ನು ನಾವು ಬಿಸಾಡುವ ಬದಲು ಅದರಿಂದ ಬೇರೆ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು. ರುಚಿಯಾದ ಈ ತಿನಿಸಿನಿಂದ ಹೊಟ್ಟೆಯೂ ತುಂಬುತ್ತದೆ, ಆಹಾರ ವೇಸ್ಟ್ ಮಾಡುವುದೂ ತಪ್ಪುತ್ತದೆ. ಬನ್ನಿ ಹಾಗಾದರೆ ಉಳಿದ ಅನ್ನದಿಂದ ಹೇಗೆ ಉಪಹಾರ ತಯಾರಿಸಬಹುದು ನೋಡೋಣ.

ಅತೀ ಕಡಿಮೆ ಸಮಯದಲ್ಲಿ, ಕಡಿಮೆ ಕಡಿಮೆ ಸಾಮಗ್ರಿಗಳನ್ನು ಬಳಸಿ ತಯಾರಿಸಬಹುದಾದ ಉಪಹಾರ ಇದು. ಇದನ್ನು ತಯಾರಿಸುವುದು ಕೂಡ ತುಂಬಾನೇ ಸುಲಭ. ಈ ಹೆಸರು ಬೇಳೆ ಅನ್ನ ತಿನ್ನಲು ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಕೂಡ ಅಷ್ಟೇ ಉತ್ತಮ. ದೇಹದ ಉಷ್ಣಾಂಶ ಕಡಿಮೆ ಗೊಳಿಸಲು, ದೇಹ ತಂಪಾಗಿಡಲು ತುಂಬಾನೇ ಸಹಕಾರಿಯಾಗಿದೆ.

ಮೊದಲು ಒಂದು ಪಾತ್ರೆಯಲ್ಲಿ ಒಂದು ಕಪ್ ಹೆಸರು ಬೇಳೆಯನ್ನು ಹಾಕಿ. ಇದಕ್ಕೆ ಚಿಟಿಕೆ ಅರಿಶಿನ, ನಾಲ್ಕು ಒಣಮೆಣಸಿನ ಕಾಯಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಜೊತೆಗೆ ಬೇಕಾಗುವಷ್ಟು ನೀರನ್ನು ಹಾಕಿ ಬೇಯಿಸಿಕೊಳ್ಳಿ. ಕುಕ್ಕರ್ ನಲ್ಲಿಯೂ ಕೂಡ ಬೇಳೆಯನ್ನು ಬೇಯಿಸಿಕೊಳ್ಳಬಹುದು. ನಂತರ ರಾತ್ರಿ ಉಳಿದ ಅನ್ನವನ್ನ ಎತ್ತಿಟ್ಟುಕೊಳ್ಳಿ. ಕೈಯಿಂದ ಅನ್ನದ ಅಗಳು ಉದುರುದುರಾಗುವಂತೆ ಮಾಡಿ. ಈಗ ಒಂದು ಕುಕ್ಕರ್ ಗೆ ಒಂದು ಚಮಚೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ, ಚಿಟಿಕೆ ಸಾಸಿವೆ, ಕರಿಬೇವು, ಹಾಗೂ ನಾಲ್ಕು ಹಸಿಮೆಣಸನ್ನು ಹೆಚ್ಚಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ.

ಈ ಮಿಶ್ರಣಕ್ಕೆ ಈಗಾಗಲೆ ಬೇಯಿಸಿಕೊಂಡ ಹೆಸರುಬೇಳೆಯನ್ನ ನೀರು ಸಮೇತ ಹಾಕಬೇಕು. ನಂತರ ಈ ಮಿಶ್ರಣಕ್ಕೆ ಅದಕ್ಕೆ ಒಂದು ಚಮಚ ಮೆಣಸಿನ ಪುಡಿ, ಜೀರಿಗೆ ಪುಡಿ, ಹಾಗೂ ಸ್ವಲ್ಪ ಕಾಯಿ ತುರಿ ಸೇರಿಸಿ ಕುದಿಸಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಅನ್ನವನ್ನ ಸೇರಿಸಿ. ಉಪ್ಪನ್ನೂ ಹಾಕಿ, ಅಗತ್ಯವಿದ್ದಷ್ಟು ನೀರು ಹಾಕಿ ಕುಕ್ಕರ್ ಮುಚ್ಚಿ ಮೂರು ವಿಷಲ್ ಕೂಗಿಸಿ. ಕುಕ್ಕರ್ ಆರಿದ ನಂತರ ಒಂದು ಪ್ಲೇಟ್ ಗೆ ಹಾಕಿ ಸರ್ವ್ ಮಾಡಿ. ಎಷ್ಟು ರುಚಿಯಾದ ಉಪಹಾರ ಎಂಬುದನ್ನು ನೀವೇ ಸವಿದು ನೋಡಿ.