ಬಿಸಿ ಅನ್ನಕ್ಕೆ, ರೊಟ್ಟಿಗೆ ಏನ್ ರುಚಿ ಅಂತ್ತೀರಾ. ಈ ಹುರಿಗಡಲೆ ಚಟ್ನಿ ಒಂದಿದ್ರೆ ಸಾಕು ವಾರ ಪೂರ್ತಿ ಅದೇ ಸಾಕು. ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಹುರಿಗಡಲೆ ಚಟ್ನಿ ಅತ್ಯಂತ ರುಚಿಕರವಾದ ಚಟ್ನಿಗಳಲ್ಲಿ ಒಂದು. ಅದು ಮಾಡುವುದಕ್ಕೂ ಸುಲಭ ಹಾಗೂ ನೀವು ಕೆಡದಂತೆ ತಿಂಗಳವರೆಗೆ ಶೇಖರಿಸಿಟ್ಟುಕೊಳ್ಳಬಹುದು. ಅಡುಗೆ ಮಾಡಲು ಬರದವರು ಕೂಡ ಈ ಚಟ್ನಿಯನ್ನು ಸುಲಭವಾಗಿ ಮಾಡಬಹುದು. ಹೇಗೆ? ಇಲ್ಲಿದೆ ರೆಸಿಪಿ.

ಹುರಿಗಡಲೆ ಚಟ್ನಿ ಮಾಡಲು ಬೇಕಾಗಿರುವ ಸಾಮಗ್ರಿಗಳು: ಹುರಿಗಡಲೆ (ಪುಟಾಣಿ ಬೇಳೆ) ಒಂದು ಕಪ್, ಬೆಳ್ಳುಳ್ಳಿ ೧೦ ಎಸಳುಗಳು, ಹುಣಸೆಹಣ್ಣು ಸ್ವಲ್ಪ ಒಂದು ಚಮಚ ಎಣ್ಣೆ ಬ್ಯಾಡಗಿ ಮೆಣಸು ೪-೫ ಗುಂಟೂರು ಮೆಣಸು ೫-೬ (ನಿಮ್ಮ ಅಗತ್ಯ ಖಾರಕ್ಕೆ ತಕ್ಕಷ್ಟು), ಕರಿಬೇವಿನ ಎಲೆ ಸ್ವಲ್ಪ, ಜೀರಿಗೆ ಅರ್ಧ ಚಮಚ, ಇಂಗು ಕಾಲು ಚಮಚ, ಅರಿಶಿನ ಅರ್ಧ ಚಮಚ, ಒಂದು ಕಪ್ ಕೊಬ್ಬರಿ ತುರಿ, ಬೆಲ್ಲ ಒಂದು ಚಮಚ.

ಮಾಡುವ ವಿಧಾನ: ಮೊದಲು ಹುರಿಗಡಲೆಯನ್ನು ಒಂದು ಪ್ಯಾನ್ ಗೆ ಹಾಕಿ ಸ್ವಲ್ಪ ಬಿಸಿ ಮಾಡಿ ತೆಗೆದಿಡಿ, ನಂತರ ಅದೇ ಪ್ಯಾನ್ ಗ್ ಸ್ವಲ್ಪ ಎಣ್ಣೆ ಹಾಕಿ ಬೆಳ್ಳುಳ್ಳಿ ಹಾಗೂ ಸ್ವಲ್ಪ ಹುಣಸೆಹಣ್ಣನ್ನು ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ. ನಂತರ ಅದೇ ಪಾತ್ರೆಗೆ ಒಣಮೆಣಸನ್ನು ಹಾಕಿ ಹುರಿಯಬೇಕು, ಹಾಗೆಯೇ ಕರಿಬೇವಿನ ಎಲೆಯನ್ನು ಹುರಿದುಕೊಳ್ಳಬೇಕು. ನಂತರ ಜೀರಿಗೆ, ಇಂಗು, ಅರಿಶಿನ (ಮೇಲೆ ಹೇಳಿದ ಅಳತೆಯಷ್ಟು) ಪುಡಿಯನ್ನು ಹುರಿದುಕೊಳ್ಳಿ. ಇದಕ್ಕೆ ಒಂದು ಕಪ್ ಒಣ ಕೊಬ್ಬರಿ ತುರಿಯನ್ನೂ ಸೇರಿಸಿ ಹುರಿದುಕೊಳ್ಳಿ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಎಲ್ಲಾ ಸಾಮಗ್ರಿಗಳನ್ನು ಸ್ವಲ್ಪ ಎಣ್ಣೆಯೊಂದಿಗೆ ಪ್ರತ್ಯೇಕವಾಗಿಯೇ ಹುರಿದುಕೊಳ್ಳುವುದು ಅಗತ್ಯ. ಹೀಗೆ ಎಲ್ಲಾ ಹುರಿದ ಸಾಮಗ್ರಿಗಳನ್ನು ತಣ್ಣಗಾಗಲು ಬಿಡಿ.

ನಂತರ ಮೊದಲಿಗೆ ಹುರಿಗಡಲೆ ಹಾಗೂ ಒಣಮೆಣಸನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ ಪುಡಿಮಾಡಿಕೊಳ್ಳಿ. ನಂತರ ಹುರಿದಿಟ್ಟುಕೊಂಡ ಇತರ ಸಾಮಗ್ರಿಗಳ ಜೊತೆಗೆ ಒಂದು ಚಮಚ ಬೆಲ್ಲವನ್ನೂ ಸೇರಿಸಿ ರುಬ್ಬಿ. ನೆನಪಿಡಿ ಇಲ್ಲಿ ನೀರನ್ನು ಮಾತ್ರ ಯಾವುದೇ ಕಾರಣಕ್ಕೂ ಬಳಸಬಾರದು. ನೀರನ್ನು ಬಳಸಿದರೆ ಚಟ್ನಿ ಬೇಗ ಕೆಡುತ್ತದೆ. ನಂತರ ರುಬ್ಬಿಕೊಂಡ ಎಲ್ಲಾ ಸಾಮಗ್ರಿಗಳನ್ನು ಮಿಶ್ರಣಮಾಡಿ ಒಂದು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟರೆ, ತಿಂಗಳುಗಳವರೆಗೂ ಇದು ಕೆಡುವುದಿಲ್ಲ. ಅನ್ನ, ಚಪಾತಿ, ದೋಸೆ ಎಲ್ಲದರ ಜೊತೆಯೂ ಸವಿಯಲು ರುಚಿಯಾಗಿರುತ್ತೆ ಈ ಹುರಿಗಡಲೆ ಚಟ್ನಿ.