ತಿಂಡಿಗೆ ಏನ್ ಮಾಡಬೇಕು ಎಂಬ ಆಲೋಚನೆ ಇದ್ದರೇ ನೀರ್ ದೋಸೆ, ನೀರ್ ಚಟ್ನಿ ಹೀಗೆ ಮಾಡಿ. ಎಲ್ಲರೂ ಇಷ್ಟ ಪಡುತ್ತಾರೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ನೀರ್ ದೋಸೆ ಹಾಗೂ ನೀರ್ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ನೀರ್ ದೋಸೆ ಹಾಗೂ ನೀರ್ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು: 3 ಬಟ್ಟಲು ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ, 1 ಚಮಚ ಉದ್ದಿನಬೇಳೆ, ಅರ್ಧ ಬಟ್ಟಲು ತೆಂಗಿನತುರಿ, 3 ಹಸಿಮೆಣಸಿನಕಾಯಿ, ಸ್ವಲ್ಪ ಹುಣಸೆ ಹಣ್ಣು, ಕಾಲು ಚಮಚ ಸಾಸಿವೆ, 7 – 8 ಬೆಳ್ಳುಳ್ಳಿ, ಸ್ವಲ್ಪ ಕರಿಬೇವು.

ನೀರ್ ದೋಸೆ ಹಾಗೂ ನೀರ್ ಚಟ್ನಿ ಮಾಡುವ ವಿಧಾನ: ಮೊದಲನೆಯದಾಗಿ ನೀರ್ ದೋಸೆ ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ 3 ಬಟ್ಟಲಿನಷ್ಟು ಅಕ್ಕಿಯನ್ನು ಹಾಕಿ 2 – 3 ಬಾರಿ ನೀರಿನಿಂದ ಚೆನ್ನಾಗಿ ತೊಳೆದು 4 – 5 ಗಂಟೆಗಳ ಕಾಲ ನೆನೆಯಲು ಬಿಡಿ ಅಥವಾ ರಾತ್ರಿ ನೆನೆಸಿ ಬೆಳಗ್ಗಿನ ತಿಂಡಿಗೆ ಉಪಯೋಗಿಸಿ.ನಂತರ ಒಂದು ಮಿಕ್ಸಿ ಜಾರಿಗೆ ನೆನೆಸಿದ ಅಕ್ಕಿ ಹಾಗೂ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಬೇಕಾದಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಹಿಟ್ಟು ತೆಳ್ಳಗೆ ಆಗುವಷ್ಟು ನೀರನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಕಬ್ಬಿಣದ ತವಾವನ್ನು ಇಟ್ಟು ಕಾಯಲು ಬಿಡಿ. ನಂತರ ಅದರ ಮೇಲೆ ಕಾಟನ್ ಬಟ್ಟೆಯನ್ನು ಉಪಯೋಗಿಸಿಕೊಂಡು ಎಣ್ಣೆಯನ್ನು ಸವರಿಕೊಳ್ಳಿ. ನಂತರ ಹಿಟ್ಟನ್ನು ತೆಗೆದುಕೊಂಡು ತೆಳ್ಳಗೆ ಹೆಂಚಿನ ಮೇಲೆ ಹಾಕಿ ಒಂದು ಬದಿದಲ್ಲಿ ಬೇಯಿಸಿಕೊಂಡರೆ ನೀರ್ ದೋಸೆ ಸವಿಯಲು ಸಿದ್ಧ.

ನೀರ್ ಚಟ್ನಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಉದ್ದಿನಬೇಳೆಯನ್ನು ಹಾಕಿ ಕೆಂಪಗಾಗುವವರೆಗೂ ಫ್ರೈ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ನಂತರ ಮಿಕ್ಸಿ ಜಾರಿಗೆ ಅರ್ಧ ಬಟ್ಟಲು ತೆಂಗಿನತುರಿ, 3 ಹಸಿಮೆಣಸಿನಕಾಯಿ, ಸ್ವಲ್ಪ ಹುಣಸೆಹಣ್ಣು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ ಕೊಳ್ಳಿ. ನಂತರ ಇದಕ್ಕೆ ಚಟ್ನಿ ತೆಳ್ಳಗಾಗುವಷ್ಟು ನೀರನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಬಾಣಲೆಯಿಟ್ಟು ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ, 7 – 8 ಬೆಳ್ಳುಳ್ಳಿ ಹಾಗೂ ಸ್ವಲ್ಪ ಕರಿಬೇವನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಚಟ್ನಿಗೆ ಮಾಡಿದರೆ ನೀರ್ ಚಟ್ನಿ ಸವಿಯಲು ಸಿದ್ದ.