ಉಗ್ರನಾಗಿ ಬೆಳೆದ ವಾನಿ, ಭಾರತದ ಯೋಧನಾಗಿ ಹುತಾತ್ಮನಾದ

ಶ್ರೀನಗರ, ನವೆಂಬರ್ 27: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರದಂದು ಉಗ್ರರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ಉಗ್ರರು ಮೃತಪಟ್ಟು, ಒಬ್ಬ ಯೋಧ ಹುತಾತ್ಮರಾದ ಸುದ್ದಿ ತಿಳಿದಿರಬಹುದು. ಹುತಾತ್ಮರಾದ ಯೋಧ ಲ್ಯಾನ್ಸ್ ನಾಯ್ಕ್ ನಜೀರ್ ಅಹ್ಮದ್ ವಾನಿ ಕಥೆ ಇಲ್ಲಿದೆ.

ಲ್ಯಾನ್ಸ್​ ನಾಯಕ್​ ನಜೀರ್​ ಅಹ್ಮದ್​ ವಾನಿ ಒಂದು ಕಾಲದಲ್ಲಿ ಉಗ್ರಗಾಮಿ ಚಟುವಟಿಕೆಯಲ್ಲಿ ನಿರತರಾಗಿದ್ದರು. ನಂತರ ತನ್ನ ತಪ್ಪಿನ ಅರಿವಾಗಿ, ಭಾರತೀಯ ಸೇನೆಗೆ ಶರಣಾಗಿ, ಇಖ್ವಾನ್[ಶರಣಾಗತ ಉಗ್ರ] ಎನಿಸಿಕೊಂಡಿದ್ದರು.

ಶೋಪಿಯಾನ್​ ಜಿಲ್ಲೆಯಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಉಗ್ರರನ್ನು ಸದೆಬಡೆಯಲು ಒಂದು ಕಾಲದ ಉಗ್ರರಾಗಿದ್ದ ವಾನಿ ಅವರು ಮುಂದಾಗಿದ್ದರು. ಇಖ್ವಾನ್ ಆಗಿದ್ದವರನ್ನು ಈ ರೀತಿ ಕಾರ್ಯಚಾರಣೆಯಲ್ಲಿ ಬಳಸಲಾಗುತ್ತದೆ.

ಆದರೆ, ಬಟಗುಂಡ್ ಗ್ರಾಮದಲ್ಲಿ ನಡೆದ ಗುಂಡಿನ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಜೀರ್​ ಅವರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸಾ ವೈಫಲ್ಯದಿಂದ ಅವರು ಸಾವಿಗೀಡಾದರು.

ಕುಲ್ಗಾಂ ತಾಲೂಕಿನ ಚೆಕಿ ಅಶ್ಮುಜಿ ಗ್ರಾಮದ ಮೂಲದವರಾಗಿದ್ದ ನಜೀರ್​, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸೋಮವಾರದಂದು ಅವರ ಗ್ರಾಮಕ್ಕೆ ಪಾರ್ಥೀವ ಶರೀರವನ್ನು ತೆಗೆದುಕೊಂಡು ಹೋಗಲಾಯಿತು. 38 ವರ್ಷ ವಯಸ್ಸಿನ ಯೋಧನಿಗೆ 21 ಸುತ್ತು ಗುಂಡು ಹಾರಿಸಿ ಗನ್ ಸೆಲ್ಯೂಟ್ ನೀಡಲಾಯಿತು.ಹುತಾತ್ಮನಿಗೆ ತ್ರಿವರ್ಣ ಧ್ವಜ ಹೊದೆಸಿ ಗೌರವಿಸಲಾಯಿತು.

2004ರಲ್ಲಿ ಪ್ರಾದೇಶಿಕ ಸೇನಾಪಡೆಯ 162ನೇ ಬೆಟಾಲಿಯನ್​ನಲ್ಲಿ ಕೆಲಸ ಆರಂಭಿಸಿದ್ದ ನಜೀರ್ ವಾನಿ ಬಗ್ಗೆ ಭಾರತೀಯ ಸೇನೆಯ ಎಡಿಜಿ ಪಿಐ ಜನರಲ್ ಬಿಪಿನ್ ರಾವತ್ ಅವರು ಟ್ವೀಟ್ ಮಾಡಿ ನಮನ ಸಲ್ಲಿಸಿದ್ದಾರೆ.

Comments (0)
Add Comment