ಬಹುದೊಡ್ಡ ಜವಾಬ್ದಾರಿಯನ್ನು ಬಿ ಎಸ್ ವೈ ಹೆಗಲೇರಿಸಿದ ಹೈಕಮಾಂಡ್

ಹೌದು ಅಂತೂ ಇಂತೂ ಬಿಜೆಪಿ ಪಕ್ಷದ ಹೈಕಮಾಂಡಿಗೆ ಬಿ ಎಸ್ ವೈ ರವರ ವರ್ಚಸ್ಸು ಮತ್ತು ತಾಕತ್ತು ಅರ್ಥ ಆದಂತಿದೆ.ತಮ್ಮ ಪಕ್ಷದಲ್ಲೇ ಎಷ್ಟೇ ಕುತಂತ್ರಗಳನ್ನು ನಡೆಸಿದರು ಹೈಕಮಾಂಡಿಗೆ ಸತ್ಯ ಬಯಲಾಗಿದೆ.ಅಷ್ಟಕ್ಕೂ ಹೈಕಮಾಂಡ್ ಯಾವ ಯಾವ ಜವಾಬ್ದಾರಿಯನ್ನು ಬಿಎಸ್ವೈ ರವರಿಗೆ ನೀಡಿದೆ  ಮತ್ತು ಮುಂದಿನ ಸವಾಲುಗಳು ಏನು ಎಂಬುದನ್ನು ತಿಳಿಯಲು ದಯವಿಟ್ಟು ಸಂಪೂರ್ಣ ಓದಿ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರ ಹಿಡಿಯುವಲ್ಲಿ ವಿಫಲವಾದರೂ 104 ಸ್ಥಾನಗಳನ್ನು ಗೆದ್ದಿತ್ತು.ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ಯಡಿಯೂರಪ್ಪನವರ ವರ್ಚಸ್ಸೇ ಇದಕ್ಕೆ ಕಾರಣ ಎಂಬುದು ರಾಷ್ಟ್ರೀಯ ನಾಯಕರಿಗೆ ಮನವರಿಕೆಯಾಗಿದೆ.

2019ರ ಲೋಕಸಭೆಯಲ್ಲಿ ಚುನಾವಣೆಯಲ್ಲಿ ಕನಿಷ್ಠ ಪಕ್ಷ 18ರಿಂದ 20 ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ನಾಯಕರು ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಇಡೀ ಚುನಾವಣಾ ಉಸ್ತುವಾರಿಯನ್ನು ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಹೆಗಲಿಗೆ ನೀಡಲು ಮುಂದಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿಯನ್ನು ಹಿಮ್ಮೆಟ್ಟಿಸಿ ಹೆಚ್ಚಿನ ಸ್ಥಾನ ಗಳಿಸಬೇಕಾದರೆ ಯಡಿಯೂರಪ್ಪನವರ ನಾಯಕತ್ವಕ್ಕೆ ಮಣೆ ಹಾಕಬೇಕೆಂಬ ತೀರ್ಮಾನಕ್ಕೆ ವರಿಷ್ಠರು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವ ಕ್ಷೇತ್ರಕ್ಕೆ ಯಾರನ್ನು ಕಣಕ್ಕಿಳಿಸಬೇಕು. ಅಭ್ಯರ್ಥಿಗಳ ಆಯ್ಕೆ ಚುನಾವಣಾ ತಂತ್ರ, ಸಂಪನ್ಮೂಲ ಕ್ರೋಢೀಕರಣ, ಪಕ್ಷ ಸಂಘಟನೆ, ರಾಜ್ಯ ಪ್ರವಾಸ ಸೇರಿದಂತೆ ಪ್ರತಿಯೊಂದು ಯಡಿಯೂರಪ್ಪನವರ ಅಣತಿಯಂತೆಯೇ ನಡೆಯಲಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಏನೇ ಹೊಸ ಪ್ರಯೋಗ ಮಾಡಿದರೂ ಯಡಿಯೂರಪ್ಪ ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕಾಯಿತು. ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಮುನ್ನಡೆಸಿದ್ದಲ್ಲದೆ ಹಠಕ್ಕೆ ಬಿದ್ದು ಟಿಕೆಟ್ ಕೊಡಿಸಿದ್ದ ಬೆಂಬಲಿಗರನ್ನು ಗೆಲ್ಲಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.

2019ರ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟಿಸಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೊಂಕ ಕಟ್ಟಿದ್ದು, ರಾಜ್ಯ ಪ್ರವಾಸ ಮಾಡುವುದರ ಮೂಲಕ ಪಕ್ಷವನ್ನು ಸಂಘಟಿಸಲಿದ್ದಾರೆ.

ಮಿಷನ್-20 ಗುರಿ..!

ಹೌದು, 2018ರ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಮಿಷನ್-150 ಎಂದು ಮತದಾರರ ಮುಂದೆ ಹೋಗಿದ್ದ ಯಡಿಯೂರಪ್ಪ, 2019ರ ಲೋಕಸಭಾ ಚುನಾವಣೆಗೆ ಹೊಸ ಗುರಿ ನಿಗದಿ ಮಾಡಿಕೊಂಡಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ, 25 ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಪಣತೊಟ್ಟು ಮಿಷನ್-25 ಆರಂಭಿಸಲಾಗಿದೆ. ಬೀದರ್, ರಾಯಚೂರು, ಕಲ್ಬುರ್ಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ-ಸದಲಗಾ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ-ಗದಗ, ಹುಬ್ಬಳ್ಳಿ-ಧಾರವಾಡ, ಕೊಪ್ಪಳ, ಶಿವಮೊಗ್ಗ ಸೇರಿದಂತೆ ಎಲ್ಲಾ 28 ಕ್ಷೇತ್ರಗಳ ಟಿಕೆಟ್ ಫೈನಲ್ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಯಡಿಯೂರಪ್ಪ ಹೆಗಲಿಗೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ವಹಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪರಿಗೇಕೆ ಉಸ್ತುವಾರಿ:

2008ರಲ್ಲಿ ದಕ್ಷಿಣ ಭಾರತದ ಕಾರ್ನಾಟಕದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ವಹಿಸಿಕೊಂಡಾಗ ಮುಖ್ಯಮಂತ್ರಿಯಾಗಿದ್ದು ಬಿ.ಎಸ್.ಯಡಿಯೂರಪ್ಪ. 2008 ರಿಂದ 2011ರವರೆಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇತ್ತ 2009ರಲ್ಲಿ ಲೋಕಸಭಾ ಚುನಾವಣೆ ಎದುರಾದಾಗ ರಾಜ್ಯದ 28 ಕ್ಷೇತ್ರಗಳ ಪೈಕಿ ಅಂದು 19 ಕ್ಷೇತ್ರಗಳಲ್ಲಿ ಕಮಲ ಅರಳಿತ್ತು. ಅಂದು ರಾಜ್ಯದಲ್ಲಿ ಯಡಿಯೂರಪ್ಪರ ಅಲೆ ಬಹಳ ಜೋರಾಗಿತ್ತು. ಕಮಲ ಅತೀ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದಿತ್ತು. ಅಂದು ನರೇಂದ್ರ ಮೋದಿಯಾಗಲಿ, ಅಮಿತ್ ಷಾ ರಾಗಲಿ ಇರಲಿಲ್ಲ. 2014ರ ವೇಳೆಗೆ ಕೇಂದ್ರದಲ್ಲಿ ಬಿಜೆಪಿಗೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಎಂಟ್ರಿ ಕೊಟ್ಟಿತ್ತು. ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಇದ್ದರೆ ಇತ್ತ ಚಾಣಕ್ಷನ ಮಾದರಿಯಲ್ಲಿ ಅಮಿತ್ ಷಾ ಕಾರ್ಯನಿರ್ವಹಿಸಿದ್ದರು.

ಇತ್ತ ರಾಜ್ಯದಲ್ಲಿ ಕಮಲ ಪಕ್ಷ ಒಡೆದು ಹೋಗಿತ್ತು. ಮತ್ತೊಮ್ಮೆ ಯಡಿಯೂರಪ್ಪರನ್ನು ಬಿಜೆಪಿಗೆ ಕರೆತಂದು ಎಲ್ಲರನ್ನೂ ಒಗ್ಗೂಡಿಸಲಾಗಿತ್ತು. ಜೊತೆಗೆ 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಟಿಕೆಟ್ ಹಂಚಿಕೆ ಮಾಡಿದ್ದರು. ಇತ್ತ ಕರ್ನಾಟಕದಲ್ಲಿದ್ದ 19 ಬಿಜೆಪಿ ಸಂಸದರ ಪೈಕಿ, 17 ಮಂದಿ ಸಂಸದರು ಮಾತ್ರ ಸಂಸತ್ ಪ್ರವೇಶಿಸಿದ್ದರು. 2 ಕ್ಷೇತ್ರಗಳ ಹಿನ್ನೆಡೆ ರಾಜ್ಯದಿಂದ ಬಿಜೆಪಿಗೆ ಆಗಿದೆ. ಹೀಗಾಗಿ ಈ ಎಡವಟ್ಟು ಈ ಬಾರಿಯ 2019ರ ಲೋಕಸಭಾ ಚುನಾವಣೆಯಲ್ಲಿ ಆಗಬಾರದೆಂದು ಹೈಕಮಾಂಡ್ ತಂತ್ರ ರೂಪಿಸಿದೆ. ಹೀಗಾಗಿ 2019ರ ಲೋಕಸಭಾ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳ ಸಂಪೂರ್ಣ ಜವಾಬ್ದಾರಿಯನ್ನು ಬಿ.ಎಸ್.ಯಡಿಯೂರಪ್ಪನವರಿಗೆ ವಹಿಸಲಾಗಿದೆ.

ಯಡಿಯೂರಪ್ಪ ಮುಂದಿರುವ ಸವಾಲೇನು..?

ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಮನಸ್ಸು ಅರ್ಥ ಮಾಡಿಕೊಳ್ಳಲು ಮುಂದಾಗಿರುವ ಬಿಎಸ್‍ವೈ, 28 ಕ್ಷೇತ್ರಗಳಲ್ಲೂ ಕನಿಷ್ಟ 5 ಮಂದಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡಲಿದ್ದಾರೆ. ಬಳಿಕ ಜಾತಿ ಸಮೀಕರಣ ಮಾಡಿ, ಕ್ಷೇತ್ರದಲ್ಲಿ ಅಭ್ಯರ್ಥಿಗಳ ವರ್ಚಸ್ಸಿನ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಮುನ್ನಡೆಯಬೇಕೆಂಬ ಪ್ಲಾನ್ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಅಸಮಾಧಾನಕ್ಕೊಳಗಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಲ್ಲಿ ಯಾರಾದರೂ ಪ್ರಬಲ ಅಭ್ಯರ್ಥಿಗಳಿದ್ದರೆ ಅವರಿಗೂ ಯಡಿಯೂರಪ್ಪ ಗಾಳ ಹಾಕಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇತ್ತ ಈಗಿರುವ 17 ಸಂಸದರ ಸಾಲಿಗೆ ಮತ್ತೆ 8 ಹೊಸ ಸಂಸದರನ್ನು ಸಂಸತ್ ಪ್ರವೇಶಿಸುವಂತೆ ಮಾಡಿ ಮಿಷನ್-20 ಗುರಿ ಸಾಧಿಸಲು ಯಡಿಯೂರಪ್ಪ ಮುಂದಾಗಿದ್ದಾರೆ.

Credits:  E Sanje

Comments (0)
Add Comment