ಬಿಜೆಪಿಗೆ ಅಧಿಕಾರ ಸಿಗದಿರುವುದಕ್ಕೆ ರಾಜ್ಯದ ಜನರಿಗೂ ಬೇಸರವಿದೆ: ಬಿಎಸ್​ವೈ

ವಿಧಾನಸಭೆ ಚುನಾವಣೆಯಲ್ಲಿ 130 ಸ್ಥಾನ ಗೆಲ್ಲುವ ವಿಶ್ವಾಸವಿತ್ತು. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮುಖಂಡರು ಶ್ರಮವಹಿಸಿದ್ದರು. ನಾವು 104 ಸ್ಥಾನ ಗಳಿಸಿದರೂ ಅಧಿಕಾರ ನಡೆಸಲು ಆಗಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರು ಬೇಸರ ವ್ಯಕ್ತಪಡಿಸಿದರು.

ನಮ್ಮ ತಪ್ಪಿಂದ ಬಹುಮತ ಸಿಗಲಿಲ್ಲ
ಶುಕ್ರವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಅಧಿಕಾರ ಸಿಗದಿರುವುದಕ್ಕೆ ರಾಜ್ಯದ ಜನರಿಗೂ ಬೇಸರವಿದೆ. ಬಿಜೆಪಿ ಪರ ಗಾಳಿ ಬೀಸಿದರೂ ನಮ್ಮ ತಪ್ಪಿಂದ ಬಹುಮತ ಸಿಗಲಿಲ್ಲ. 15 ಕ್ಷೇತ್ರಗಳಲ್ಲಿ ಕೇವಲ 3 ಸಾವಿರಕ್ಕೂ ಕಡಿಮೆ ಅಂತರದಲ್ಲಿ ಸೋಲುಂಡಿದ್ದೇವೆ ಎಂದು ವಿಮರ್ಶೆ ಮಾಡಿದರು.

ಅದು ನಮಗೆ ಅಗ್ನಿ ಪರೀಕ್ಷೆ ಆಗಿತ್ತು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನ ಬಿಜೆಪಿ ಪರ ನಿಂತಿದ್ದಾರೆ. ಯಾವ ಪಕ್ಷಕ್ಕೂ ಬಹುಮತ ಬರದಿದ್ದಾಗ ರಾಜ್ಯಪಾಲರು ದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡುವುದು ವಾಡಿಕೆ. ಆದರೆ, ಅದನ್ನು ಪ್ರಶ್ನಿಸಿ ಕಾಂಗ್ರೆಸ್​, ಜೆಡಿಎಸ್​ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದರು. ದೇಶದ ಇತಿಹಾಸದಲ್ಲೇ ಮಧ್ಯರಾತ್ರಿ ವಿಚಾರಣೆ ನಡೆಯಿತು. ಇದರಿಂದ ನಮಗೆ ಸ್ವಲ್ಪ ಹಿನ್ನಡೆಯಾಯ್ತು. ನಮ್ಮ‌ದೇಶದ ಇತಿಹಾಸದಲ್ಲಿ 15 ದಿನ ಬಹುಮತ ಸಾಬೀತಿಗೆ ಅವಕಾಶ ಇದ್ದರೂ 24 ಗಂಟೆ ಅವಕಾಶ ಕೊಡುವ ರೀತಿ ಮಾಡಿದನ್ನ ನಾನು ಈವರೆಗೂ ಕಂಡಿರಲಿಲ್ಲ. ಅದು ನಮಗೆ ಅಗ್ನಿ ಪರೀಕ್ಷೆ ಆಗಿತ್ತು ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರ ದಿವಾಳಿ ಆಗಿದೆ
ಜೆಡಿಎಸ್ 14 ಜಿಲ್ಲೆಗಳಲ್ಲಿ ಒಂದು ಸ್ಥಾನ ಗೆದ್ದಿಲ್ಲ. 219 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಕೇವಲ 38 ಸ್ಥಾನ ಮಾತ್ರ ಗೆದ್ದಿದೆ. ಹಿಂದಿನ‌ ಸರ್ಕಾರದ 17 ಸಚಿವರು ಸೋತಿದ್ದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ದಯನೀಯವಾಗಿ ಸೋತಿದ್ದಾರೆ. ಬಾದಾಮಿಯಲ್ಲಿ ಕೇವಲ 1,600 ಮತಗಳ ಅಂತರದಿಂದ ಗೆದ್ದಿದ್ದಾರೆ. ಸಮ್ಮಿಶ್ರ ಸರ್ಕಾರ ದಿವಾಳಿ ಆಗಿದೆ ಎಂದು ಕಿಡಿಕಾರಿದರು. ಸಾಲಮನ್ನಾ ಮಾಡುತ್ತೇನೆಂದು ಹೇಳಿದ್ದ ಜೆಡಿಎಸ್ ಪ್ರಣಾಳಿಕೆ ಕುರಿತು ವ್ಯಂಗ್ಯವಾಡಿದರು.

Source: VijayaVaani

BJP Karnatakabsy
Comments (0)
Add Comment