ಸಾಮಾನ್ಯ ರೀತಿ ಯಾಕೆ, ಮದುವೆ ಮನೆಯ ಶೈಲಿಯಲ್ಲಿ ತೊಂಡೆಕಾಯಿ ಮಾಡಿ ನೋಡಿ, ಎಲ್ಲರೂ ಇಷ್ಟ ಪಟ್ಟು ಜಾಸ್ತಿ ತಿಂತಾರೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಮದುವೆ ಮನೆಯ ಶೈಲಿಯಲ್ಲಿ ತೊಂಡೆಕಾಯಿ ಪಲ್ಯ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಮದುವೆ ಮನೆಯ ಶೈಲಿಯಲ್ಲಿ ತೊಂಡೆಕಾಯಿ ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು: ಅರ್ಧ ಕೆಜಿ ತೊಂಡೆಕಾಯಿ, 4 ಚಮಚ ಎಣ್ಣೆ, 5 – 6 ಚಮಚ ತೆಂಗಿನ ಕಾಯಿತುರಿ, 6 ಬ್ಯಾಡಿಗೆ ಮೆಣಸಿನಕಾಯಿ, 4 ಒಣಮೆಣಸಿನಕಾಯಿ, 2 ಚಮಚ ಕಡ್ಲೆಬೇಳೆ, 2 ಚಮಚ ಉದ್ದಿನಬೇಳೆ, 1 ಚಮಚ ಜೀರಿಗೆ, 1 ಚಮಚ ಸಾಸಿವೆ, ಸ್ವಲ್ಪ ಅರಿಶಿನ ಪುಡಿ, ಸ್ವಲ್ಪ ಹುಣಸೆಹಣ್ಣು, ಸ್ವಲ್ಪ ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು.

ಮದುವೆ ಮನೆಯ ಶೈಲಿಯಲ್ಲಿ ತೊಂಡೆಕಾಯಿ ಪಲ್ಯ ಮಾಡುವ ವಿಧಾನ: ಮೊದಲಿಗೆ ತೊಂಡೆಕಾಯಿಯನ್ನು 4 ಭಾಗ ಮಾಡಿ ಕತ್ತರಿಸಿಕೊಳ್ಳಿ. ನಂತರ ಒಂದು ಕುಕ್ಕರ್ ಗೆ ತೊಂಡೆಕಾಯಿ, 200 ml ನೀರು, ಅರಿಶಿನ ಪುಡಿ, ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಮುಚ್ಚಳವನ್ನು ಮುಚ್ಚಿ 1 ವಿಷಲ್ ಕೂಗಿಸಿಕೊಳ್ಳಿ.

ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಜೀರಿಗೆ, 1 ಚಮಚ ಕಡಲೆಬೇಳೆ, 1 ಚಮಚ ಉದ್ದಿನ ಬೇಳೆ, ಅರ್ಧ ಚಮಚ ಸಾಸಿವೆಯನ್ನು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ನಂತರ ಅದೇ ಬಾಣಲೆಗೆ ಒಣಮೆಣಸಿನಕಾಯಿ, ಬ್ಯಾಡಿಗೆ ಮೆಣಸಿನಕಾಯಿ ಹಾಗೂ ಸ್ವಲ್ಪ ಎಣ್ಣೆಯನ್ನು ಹಾಕಿ 1 – 2 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಅದೇ ಮಿಕ್ಸಿ ಜಾರಿಗೆ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಅದೇ ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿಯನ್ನು ಹಾಕಿ ರುಬ್ಬಿಕೊಳ್ಳಿ.

ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವನ್ನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹುಣಸೆ ಹಣ್ಣಿನ ರಸ ಹಾಗೂ ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಬೇಯಿಸಿಕೊಂಡ ತೊಂಡೆಕಾಯಿಯನ್ನು ಹಾಕಿ ಮಿಕ್ಸ್ ಮಾಡಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿಕೊಂಡರೆ ಮದುವೆ ಮನೆಯ ಶೈಲಿಯಲ್ಲಿ ತೊಂಡೆಕಾಯಿ ಪಲ್ಯ ಸವಿಯಲು ಸಿದ್ದ.