ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮನೆಯಲ್ಲಿಯೇ ಹೋಟೆಲ್ ಶೈಲಿಯಲ್ಲಿ ಉಬ್ಬುವ ಪುರಿ ಹಾಗೂ ತರಕಾರಿ ಸಾಗು ಮಾಡುವುದು ಹೇಗೆ ಗೊತ್ತೇ??

14

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯಲ್ಲಿ ಉಬ್ಬುವ ಪುರಿ ಹಾಗೂ ತರಕಾರಿ ಸಾಗು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹೋಟೆಲ್ ಶೈಲಿಯಲ್ಲಿ ಉಬ್ಬುವ ಪುರಿ ಹಾಗೂ ತರಕಾರಿ ಸಾಗು ಮಾಡಲು ಬೇಕಾಗುವ ಸಾಮಗ್ರಿಗಳು: 2 ಬಟ್ಟಲು ಗೋಧಿ ಹಿಟ್ಟು, 1 ಬಟ್ಟಲು ಮೈದಾ, 2 ಚಮಚ ಚಿರೋಟಿ ರವೆ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಸಕ್ಕರೆ, 2 ಚಮಚ ಹಾಲು, ಸ್ವಲ್ಪ ಎಣ್ಣೆ, 1 ಬಟ್ಟಲು ಸಣ್ಣಗೆ ಹಚ್ಚಿದ ಹುರುಳಿಕಾಯಿ, 1 ಬಟ್ಟಲು ಸಣ್ಣಗೆ ಹಚ್ಚಿದ ಕ್ಯಾರೆಟ್, 1 ಬಟ್ಟಲು ಸಣ್ಣಗೆ ಹಚ್ಚಿದ ನವಿಲುಕೋಸು, 2 ಈರುಳ್ಳಿ, 2 ಟೊಮೇಟೊ, 2 ಆಲೂಗೆಡ್ಡೆ, 1 ಬಟ್ಟಲು ಹಸಿ ಬಟಾಣಿ, 5 – 6 ಚಕ್ಕೆ, 4 ಲವಂಗ, 2 ಏಲಕ್ಕಿ, 3 ಚಮಚ ಹುರಿಗಡಲೆ, 4 ಹಸಿಮೆಣಸಿನಕಾಯಿ, 1 ಇಂಚು ಶುಂಠಿ, ಅರ್ಧ ಬಟ್ಟಲು ತೆಂಗಿನಕಾಯಿತುರಿ, 1 ಚಮಚ ಧನಿಯಾ ಪುಡಿ, ಸ್ವಲ್ಪ ಪುದೀನಾ, ಸ್ವಲ್ಪ ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಅರಿಶಿಣ ಪುಡಿ, ಅರ್ಧ ಚಮಚ ಇಂಗು.

ಹೋಟೆಲ್ ಶೈಲಿಯಲ್ಲಿ ಉಬ್ಬುವ ಪುರಿ ಹಾಗೂ ತರಕಾರಿ ಸಾಗು ಮಾಡುವ ವಿಧಾನ: ಹೋಟೆಲ್ ಶೈಲಿಯಲ್ಲಿ ಪುರಿ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲಿಗೆ 2 ಬಟ್ಟಲು ಗೋಧಿ ಹಿಟ್ಟು, 1 ಬಟ್ಟಲು ಮೈದಾ, 2 ಚಮಚ ಚಿರೋಟಿ ರವೆ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಸಕ್ಕರೆಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ 2 ಚಮಚ ಹಾಲು, 2 ಚಮಚ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ಹಿಟ್ಟನ್ನು ಮೃದುವಾಗಿ ಕಲಸಿಕೊಳ್ಳಿ. ನಂತರ ಹಿಟ್ಟನ ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿ ಸವರಿಕೊಂಡು ಒಂದು ಕಾಟನ್ ಬಟ್ಟೆಯನ್ನು ಮುಚ್ಚಿ 20 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ಮತ್ತೆ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.ನಂತರ ಚಪಾತಿ ಮಣೆಯ ಮೇಲೆ ಎಣ್ಣೆಯನ್ನು ಸವರಿಕೊಳ್ಳಿ. ನಂತರ ಹಿಟ್ಟನ್ನು ತೆಳ್ಳಗೆ ಒಸೆದುಕೊಳ್ಳಿ. ಯಾವುದೇ ಕಾರಣಕ್ಕೂ ಹಿಟ್ಟನ್ನು ಒಣಗಲು ಬಿಡಬೇಡಿ.

ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟು ಇದಕ್ಕೆ ಪುರಿ ಕರಿಯುವಷ್ಟು ಎಣ್ಣೆಯನ್ನು ಹಾಕಿ ಚೆನ್ನಾಗಿ ಕಾಯಲು ಬಿಡಿ. ಎಣ್ಣೆ ಚೆನ್ನಾಗಿ ಕಾದ ನಂತರ ಒಸೆದುಕೊಂಡ ಹಿಟ್ಟನ್ನು ಎಣ್ಣೆಯ ಒಳಗೆ ನಿಧಾನವಾಗಿ ಬಿಟ್ಟು ಕರಿದರೆ ಉಬ್ಬುವ ಪುರಿ ಸವಿಯಲು ಸಿದ್ದ.

ಹೋಟೆಲ್ ಶೈಲಿಯಲ್ಲಿ ತರಕಾರಿ ಸಾರು ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿ, ರುಚಿಗೆ ತಕಷ್ಟು ಉಪ್ಪು, ಅರಿಶಿನ ಪುಡಿ, ಇಂಗನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಹಸಿಬಟಾಣಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಂಡು ಮತ್ತೆ ಮುಚ್ಚಳವನ್ನು ಮುಚ್ಚಿ 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಹುರುಳಿಕಾಯಿ, ಸಣ್ಣಗೆ ಹಚ್ಚಿದ ಕ್ಯಾರೆಟ್, ಸಣ್ಣಗೆ ಹಚ್ಚಿದ ನವಿಲುಕೋಸನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೇಟೊವನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 3 – 4 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ.

ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಚಕ್ಕೆ, ಲವಂಗ ಹಾಗೂ ಏಲಕ್ಕಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಶುಂಠಿ, ಹಸಿಮೆಣಸಿನಕಾಯಿ, ಸ್ವಲ್ಪ ಈರುಳ್ಳಿ ಹಾಗೂ ಸ್ವಲ್ಪ ಟೊಮ್ಯಾಟೊವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹುರಿಗಡಲೆಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ತೆಂಗಿನಕಾಯಿ ತುರಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಂಡು ಗ್ಯಾಸ್ ಆಫ್ ಮಾಡಿಕೊಳ್ಳಿ.ನಂತರ ಇದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು, ಪುದೀನಾ, ಧನಿಯಾ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಂಡ ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣ ಹಾಗೂ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಪಕ್ಕಕ್ಕಿಡಿ.

ತದನಂತರ ತರಕಾರಿ ಬೇಯುತ್ತಿರುವ ಬಾಣಲೆಗೆ 1 ಬಟ್ಟಲಿನಷ್ಟು ನೀರನ್ನು ಹಾಕಿ ತರಕಾರಿಯನ್ನು ಬೇಯಿಸಿಕೊಳ್ಳಿ. ನಂತರ ಇದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿಕೊಂಡು 3 – 4 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿಕೊಂಡರೆ ಹೋಟೆಲ್ ಶೈಲಿಯಲ್ಲಿ ತರಕಾರಿ ಸಾಗು ಸವಿಯಲು ಸಿದ್ದ.