ಹೋಟೆಲ್ ಶೈಲಿಯ ಮಸಾಲ ರವಾ ಇಡ್ಲಿ ರುಚಿಯಾಗಿ ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ??

ಹೋಟೆಲ್ ಶೈಲಿಯ ಮಸಾಲ ರವಾ ಇಡ್ಲಿ ರುಚಿಯಾಗಿ ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯ ಮಸಾಲ ರವಾ ಇಡ್ಲಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಮಸಾಲಾ ರವಾ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಮೀಡಿಯಂ ರವೆ, 1 ಬಟ್ಟಲು ಮೊಸರು, ಅರ್ಧ ಬಟ್ಟಲು ಸಬ್ಬಕ್ಕಿ ಸೊಪ್ಪು, 4 – 5 ಹಸಿಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, 2 ಚಮಚ ಕ್ಯಾರೆಟ್ ತುರಿ, ಅರ್ಧ ಇಂಚು ಶುಂಠಿ, 2 ಚಮಚ ತೆಂಗಿನ ಕಾಯಿ ತುರಿ, 1 ಚಮಚ ಕಡಲೆ ಬೇಳೆ, 1 ಚಮಚ ಉದ್ದಿನಬೇಳೆ, ಸ್ವಲ್ಪ ಅರಿಶಿನ ಪುಡಿ, 1 ಚಮಚ ಜೀರಿಗೆ, 2 ಚಮಚ ಎಣ್ಣೆ, ಸ್ವಲ್ಪ ಸಾಸಿವೆ, ಸ್ವಲ್ಪ ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು.

ಮಸಾಲ ರವಾ ಇಡ್ಲಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಸಾಸಿವೆಯನ್ನು ಹಾಕಿ ಸಿಡಿಯಲು ಬಿಡಿ. ನಂತರ ಇದಕ್ಕೆ ಜೀರಿಗೆ, ಕಡ್ಲೆಬೇಳೆ, ಉದ್ದಿನ ಬೇಳೆಯನ್ನು ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿ, ತುರಿದ ಶುಂಠಿ, ಸಣ್ಣಗೆ ಹಚ್ಚಿದ ಕರಿಬೇವು, ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ 1 ನಿಮಿಷಗಳ ಕಾಲ ಮತ್ತೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಬಟ್ಟಲು ಮೀಡಿಯಂ ರವೆಯನ್ನು ಹಾಕಿ ಕಡಿಮೆ ಉರಿಯಲ್ಲಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ.

ತಣ್ಣಗಾದ ನಂತರ ಇದಕ್ಕೆ ತೆಗೆದುಕೊಂಡ ಮೊಸರು, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ,ತುರಿದ ಕ್ಯಾರೆಟ್, ಸಣ್ಣಗೆ ಹಚ್ಚಿದ ಸಬ್ಬಕ್ಕಿ ಸೊಪ್ಪು, ಸ್ವಲ್ಪ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, ರವೆ ತೆಗೆದುಕೊಂಡ ಅಳತೆಯ ಬಟ್ಟಲಿನಲ್ಲಿ 1 ಬಟ್ಟಲು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 10 ನಿಮಿಷಗಳ ಕಾಲ ನೆನೆಯಲು ಬಿಡಿ. 10 ನಿಮಿಷಗಳ ನಂತರ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಇಡ್ಲಿ ಪಾತ್ರೆಯನ್ನು ಇಟ್ಟು ಅದಕ್ಕೆ ನೀರನ್ನು ಹಾಕಿ ಕಾಯಲು ಬಿಡಿ. ಮತ್ತೊಂದು ಕಡೆ ಇಡ್ಲಿ ಪ್ಲೇಟಿಗೆ ಎಣ್ಣೆಯನ್ನು ಸವರಿಕೊಳ್ಳಿ. ನಂತರ ಹಿಟ್ಟನ್ನು ಇಡ್ಲಿ ಪ್ಲೇಟಿಗೆ ಹಾಕಿಕೊಳ್ಳಿ. ಕೊನೆಯದಾಗಿ ಇಡ್ಲಿ ಪಾತ್ರೆಯಲ್ಲಿ ಇಟ್ಟು 5 – 6 ನಿಮಿಷಗಳ ಕಾಲ ಬೇಯಿಸಿ ಕೊಂಡರೆ ಮಸಾಲ ರವಾ ಇಡ್ಲಿ ಸವಿಯಲು ಸಿದ್ಧ.