ಅಂಗಡಿಯ ಉಪ್ಪಿನ ಹಪ್ಪಳ ಬಿಡಿ, ಮನೆಯಲ್ಲಿ ಉದ್ದಿನಬೇಳೆ ಹಪ್ಪಳ ಟ್ರೈ ಮಾಡಿ, ಎಲ್ಲರೂ ಇಷ್ಟ ಪಡ್ತಾರೆ.

ಅಂಗಡಿಯ ಉಪ್ಪಿನ ಹಪ್ಪಳ ಬಿಡಿ, ಮನೆಯಲ್ಲಿ ಉದ್ದಿನಬೇಳೆ ಹಪ್ಪಳ ಟ್ರೈ ಮಾಡಿ, ಎಲ್ಲರೂ ಇಷ್ಟ ಪಡ್ತಾರೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಉದ್ದಿನಬೇಳೆ ಹಪ್ಪಳ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಉದ್ದಿನಬೇಳೆ ಹಪ್ಪಳ ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಉದ್ದಿನ ಬೇಳೆ, ಅರ್ಧ ಬಟ್ಟಲು ಹೆಸರುಬೇಳೆ, 1 ಚಮಚ ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ.

ಉದ್ದಿನಬೇಳೆ ಹಪ್ಪಳ ಮಾಡುವ ವಿಧಾನ: ಮೊದಲಿಗೆ 1 ಬಟ್ಟಲು ಉದ್ದಿನ ಬೇಳೆಯನ್ನು ನೀರಿನಿಂದ ತೊಳೆದು ಕಾಟನ್ ಬಟ್ಟೆ ಮೇಲೆ 2 – 3 ಗಂಟೆಗಳ ಕಾಲ ಒಣಗಿಸಿಕೊಳ್ಳಿ. ನಂತರ ಅದೇ ರೀತಿಯಾಗಿ ಅರ್ಧಬಟ್ಟಲು ಹೆಸರುಬೇಳೆಯನ್ನು ನೀರಿನಿಂದ ಚೆನ್ನಾಗಿ ತೊಳೆದು 2 – 3 ಗಂಟೆಗಳ ಕಾಲ ಒಣಗಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಒಣಗಿದ ಉದ್ದಿನಬೇಳೆಯನ್ನು ಹಾಕಿ ನುಣ್ಣಗೆ ಪುಡಿ ಮಾಡಿ ಜರಡಿ ಹಿಡಿದುಕೊಂಡು ಹಿಟ್ಟನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಅದೇ ರೀತಿಯಾಗಿ ಹೆಸರುಬೇಳೆಯನ್ನು ಸಹ ನುಣ್ಣಗೆ ಪುಡಿ ಮಾಡಿ ಜರಡಿ ಹಿಡಿದು ಮತ್ತೊಂದು ಬಟ್ಟಲಿಗೆ ಹಾಕಿ ಕೊಳ್ಳಿ. ನಂತರ ಗ್ಯಾಸ್ ಮೇಲೆ ಹಿಟ್ಟು ಕಲಿಸಲು ಬೇಕಾಗುವಷ್ಟು ನೀರನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ.

ನಂತರ ಇದಕ್ಕೆ 1 ಚಮಚದಷ್ಟು ಕಾಳುಮೆಣಸಿನ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಉದ್ದಿನ ಬೇಳೆ ಹಿಟ್ಟು, ಹೆಸರುಬೇಳೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕಾಳುಮೆಣಸಿನ ಪುಡಿಯನ್ನು ಮಿಕ್ಸ್ ಮಾಡಿದ ನೀರನ್ನು ಹಾಕಿ ಗಟ್ಟಿಯಾಗಿ ಹಿಟ್ಟನ್ನು ಕಲೆಸಿಕೊಳ್ಳಿ.

ನಂತರ ಬಟ್ಟಲಿನ ಮೇಲೆ ಒಂದು ಪ್ಲೇಟನ್ನು ಮುಚ್ಚಿ 10 ನಿಮಿಷಗಳ ಕಾಲ ನೆನೆಯಲು ಬಿಡಿ. 10 ನಿಮಿಷಗಳ ನಂತರ ಹಿಟ್ಟನ್ನು ಲಟ್ಟಣಿಗೆ ಸಹಾಯದಿಂದ ಚೆನ್ನಾಗಿ ತಟ್ಟಿಕೊಳ್ಳಿ. ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿ ಪ್ಲೇಟನ್ನು ಮುಚ್ಚಿಕೊಳ್ಳಿ. ಏಕೆಂದರೆ ಗಾಳಿಯಲ್ಲಿ ಹಿಟ್ಟನ್ನು ಬಿಟ್ಟರೆ ಗಟ್ಟಿಯಾಗುತ್ತದೆ. ನಂತರ ಚಪಾತಿ ಮಣೆಯ ಮೇಲೆ ಒಂದು ಪ್ಲಾಸ್ಟಿಕ್ ಪೇಪರ್ ನನ್ನು ಹಾಕಿ ಅದಕ್ಕೆ ಸ್ವಲ್ಪ ಎಣ್ಣೆಯನ್ನು ಸವರಿಕೊಳ್ಳಿ. ನಂತರ ಹಿಟ್ಟನ್ನು ಇಟ್ಟು ಲಟ್ಟಣಿಗೆ ಸಹಾಯದಿಂದ ವೃತ್ತಾಕಾರವಾಗಿ ತೆಳ್ಳಗೆ ಹೊಸೆದುಕೊಂಡು ಒಂದು ಕಾಟನ್ ಬಟ್ಟೆ ಮೇಲೆ ಮನೆಯ ಒಳಗೆ 5 – 6 ಗಂಟೆಗಳ ಕಾಲ ಒಣಗಲು ಬಿಡಿ.

ನಂತರ ಮತ್ತೊಂದು ವಿಧಾನ ಚಪಾತಿ ಮಣೆಯ ಮೇಲೆ ಹಿಟ್ಟನ್ನು ಹಾಕಿಕೊಂಡು ಚಪಾತಿಯನ್ನು ಹೊಸೆದ ಹಾಗೆ ತೆಳ್ಳಗೆ ಹೊಸೆದುಕೊಂಡು ಕಾಟನ್ ಬಟ್ಟೆಯ ಮೇಲೆ ಹಾಕಿಕೊಳ್ಳಿ. ಯಾವುದೇ ಕಾರಣಕ್ಕೂ ಹೊಸೆದ ತಕ್ಷಣ ಬಿಸಿಲಿಗೆ ಹಾಕಬೇಡಿ. 5 – 6 ಗಂಟೆಗಳ ನಂತರ ಹಪ್ಪಳವನ್ನು ಬಿಸಿಲಿಗೆ ಹಾಕಿ ಒಣಗಿಸಿ. ಕೊನೆಯದಾಗಿ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಇಟ್ಟು ಹಪ್ಪಳವನ್ನು ತೇಲಿಸಿಕೊಂಡರೆ ಉದ್ದಿನಬೇಳೆ ಹಪ್ಪಳ ಸವಿಯಲು ಸಿದ್ಧ.