ಮಲ್ಲಿಗೆ ತಟ್ಟೆ ಇಡ್ಲಿಯನ್ನು ಮನೆಯಲ್ಲಿಯೇ ಸುಲಭವಾಗಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಮಲ್ಲಿಗೆ ತಟ್ಟೆ ಇಡ್ಲಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಮಲ್ಲಿಗೆ ತಟ್ಟೆ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು: 3 ಲೋಟ ಇಡ್ಲಿ ಅಕ್ಕಿ, 1 ಲೋಟ ಉದ್ದಿನಬೇಳೆ, ಅರ್ಧ ಲೋಟ ಅವಲಕ್ಕಿ, ಕಾಲು ಲೋಟ ಸಬ್ಬಕ್ಕಿ, ಸ್ವಲ್ಪ ಮೆಂತ್ಯ, ಸ್ವಲ್ಪ ಎಣ್ಣೆ, ಸ್ವಲ್ಪ ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು.

ಮಲ್ಲಿಗೆ ತಟ್ಟೆ ಇಡ್ಲಿ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ, ಉದ್ದಿನಬೇಳೆ ಹಾಗೂ ಮೆಂತ್ಯವನ್ನು ಹಾಕಿ 2 – 3 ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಮತ್ತೊಂದು ಕಡೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಅವಲಕ್ಕಿ ಹಾಗೂ ಸಬ್ಬಕ್ಕಿಯನ್ನು ಹಾಕಿ 2 – 3 ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು ಅಕ್ಕಿ ಇರುವ ದೊಡ್ಡ ಬಟ್ಟಲಿಗೆ ಹಾಕಿಕೊಳ್ಳಿ.ನಂತರ ಅದೇ ಬಟ್ಟಲಿಗೆ ನೀರನ್ನು ಹಾಕಿ 4 – 5 ಗಂಟೆಗಳ ಕಾಲ ನೆನೆಯಲು ಬಿಡಿ.

ನೆನೆದ ನಂತರ ಒಂದು ಮಿಕ್ಸಿ ಜಾರನ್ನು ತೆಗೆದುಕೊಂಡು ಅದಕ್ಕೆ ನೆನೆಸಿದ ಪದಾರ್ಥಗಳು ಹಾಗೂ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕೈಯಲ್ಲಿ ಚೆನ್ನಾಗಿ ಕಲಸಿಕೊಂಡು 7 – 8 ಗಂಟೆಗಳ ಕಾಲ ನೆನೆಯಲು ಬಿಡಿ.

ನಂತರ ಇದಕ್ಕೆ ಒಂದು ಚಿಟಿಕೆಯಷ್ಟು ಅಡುಗೆ ಸೋಡಾವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ತಟ್ಟೆ ಇಡ್ಲಿಯ ಪ್ಲೇಟ್ ಗಳನ್ನು ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಸವರಿಕೊಳ್ಳಬೇಕು. ನಂತರ ಇಡ್ಲಿ ಹಿಟ್ಟನ್ನು ಸಮಪ್ರಮಾಣದಲ್ಲಿ ಎಲ್ಲಾ ಪ್ಲಾಟಿಗೂ ಹಾಕಿಕೊಂಡು ಇಡ್ಲಿ ಪಾತ್ರೆಯಲ್ಲಿ 8 – 10 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿಕೊಂಡರೆ ಮಲ್ಲಿಗೆ ತಟ್ಟೆ ಇಡ್ಲಿ ಸವಿಯಲು ಸಿದ್ಧ.

Post Author: Ravi Yadav