ತಿಂಡಿ ಮಾಡಲು ಟೈಮ್ ಇಲ್ವಾ?? 10 ನಿಮಿಷಗಳಲ್ಲಿ ಸಾಫ್ಟ್ ಕಾಯಿ ದೋಸೆ ಹಾಗೂ ಹುಣಸೆಹಣ್ಣಿನ ಚಟ್ನಿ. ಹೇಗೆ ಗೊತ್ತೇ??

ತಿಂಡಿ ಮಾಡಲು ಟೈಮ್ ಇಲ್ವಾ?? 10 ನಿಮಿಷಗಳಲ್ಲಿ ಸಾಫ್ಟ್ ಕಾಯಿ ದೋಸೆ ಹಾಗೂ ಹುಣಸೆಹಣ್ಣಿನ ಚಟ್ನಿ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕೇವಲ ಹತ್ತು ನಿಮಿಷಗಳಲ್ಲಿ ಮಾಡಬಹುದಾದ ಸಾಫ್ಟ್ ಕಾಯಿ ದೋಸೆ ಹಾಗೂ ಹುಣಸೆಹಣ್ಣಿನ ಚಟ್ನಿ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ನಿಮ್ಮ ಅನುಕೂಲತೆಗಾಗಿ ಯೌಟ್ಯೂಬ್ ವಿಡಿಯೋ ಕೂಡ ಹಾಕಲಾಗಿದ್ದು, ಒಮ್ಮೆ ನೋಡಿ, ಟ್ರೈ ಮಾಡಿ ಹೇಗಿದೆ ಎಂದು ತಿಳಿಸಿ.

ಸಾಫ್ಟ್ ಕಾಯಿ ದೋಸೆ ಹಾಗೂ ಹುಣಸೆಹಣ್ಣಿನ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ರವೆ, ಅರ್ಧ ಬಟ್ಟಲು ಅವಲಕ್ಕಿ, ಅರ್ಧ ಬಟ್ಟಲು ಹಸಿ ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ, 50 ಗ್ರಾಂ ಕಡಲೆಬೇಳೆ, 3 – 4 ಎಸಳು ಬೆಳ್ಳುಳ್ಳಿ, 4 – 5 ಬ್ಯಾಡಿಗೆ ಮೆಣಸಿನಕಾಯಿ, 10 ನಿಮಿಷಗಳ ಕಾಲ ಅರ್ಧ ಬಟ್ಟಲು ನೀರಿನಲ್ಲಿ ನೆನೆಸಿದ ದೊಡ್ಡ ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು, 2 ಚಮಚ ಬೆಲ್ಲ, ಅರ್ಧ ಚಮಚ ಸಾಸಿವೆ,1 ಚಮಚ ಉದ್ದಿನಬೇಳೆ, ಸ್ವಲ್ಪ ಇಂಗು, ಸ್ವಲ್ಪ ಕರಿಬೇವು, ಅರ್ಧ ಚಮಚ ಇನೋ ಪೌಡರ್.

ಸಾಫ್ಟ್ ಕಾಯಿ ದೋಸೆ ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ 1 ಬಟ್ಟಲಿನಷ್ಟು ರವೆ ಹಾಗೂ ನೀರನ್ನು ಹಾಕಿ ಹತ್ತು ನಿಮಿಷಗಳ ಕಾಲ ನೆನೆಯಲು ಬಿಡಿ. ಮತ್ತೊಂದು ಕಡೆ 1 ಬಟ್ಟಲಿಗೆ ಅರ್ಧ ಬಟ್ಟಲಿನಷ್ಟು ಅವಲಕ್ಕಿ ಹಾಗೂ ನೀರನ್ನು ಹಾಕಿ ಹತ್ತು ನಿಮಿಷಗಳ ಕಾಲ ನೆನೆಯಲು ಬಿಡಿ. ಹತ್ತು ನಿಮಿಷಗಳ ನಂತರ ಒಂದು ಮಿಕ್ಸಿ ಜಾರಿಗೆ ನೆನೆದ ಅವಲಕ್ಕಿ ಹಾಗೂ ರವೆ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಬಟ್ಟಲು ಹಸಿ ತೆಂಗಿನ ಕಾಯಿ ತುರಿಯನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚದಷ್ಟು ಇನೋ ಹಾಕಿ ಮಿಕ್ಸ್ ಮಾಡಿದರೆ ದೋಸೆ ಹಿಟ್ಟು ರೆಡಿಯಾಗುತ್ತದೆ. ನಂತರ ಗ್ಯಾಸ್ ಮೇಲೆ ತವಾವನ್ನು ಇಟ್ಟು ಸೆಟ್ ದೋಸೆ ರೀತಿಯಲ್ಲಿ ಮಾಡಿಕೊಂಡರೆ ಕಾಯಿ ದೋಸೆ ಸವಿಯಲು ಸಿದ್ಧ.

ಹುಣಸೆಹಣ್ಣಿನ ಚಟ್ನಿ ಮಾಡುವ ವಿಧಾನ: ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯುಲು ಬಿಡಿ. ಎಣ್ಣೆ ಕಾದ ನಂತರ ಸುಮಾರು 50 ಗ್ರಾಂನಷ್ಟು ಕಡಲೇಬೇಳೆ, 3 – 4 ಎಸಳು ಬೆಳ್ಳುಳ್ಳಿ, 4 – 5 ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ ಕಡಲೆಬೇಳೆ ಕೆಂಪಗಾಗುವವರೆಗೂ ಫ್ರೈ ಮಾಡಿಕೊಳ್ಳಿ. ತದನಂತರ ನೆನೆಸಿದ ಹುಣಸೆಹಣ್ಣನ್ನು ಹಾಕಿ 2 – 3 ನಿಮಿಷಗಳ ಕಾಲ ಬೇಯಿಸಿಕೊಂಡು ಸ್ವಲ್ಪ ತಣ್ಣಗಾಗಲು ಬಿಡಿ. ತದನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣ,2 ಚಮಚ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಬಟ್ಟಲು ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ತದನಂತರ ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟು ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಸಾಸಿವೆ, ಸ್ವಲ್ಪ ಇಂಗು, ಉದ್ದಿನಬೇಳೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ರುಬ್ಬಿದ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿದರೆ ಹುಣಸೆಹಣ್ಣಿನ ಚಟ್ನಿ ಸವಿಯಲು ಸಿದ್ಧ.