ಬಹಳ ಸುಲಭವಾಗಿ ಎಲ್ಲರಿಗೂ ಇಷ್ಟವಾಗುವಂತಹ ಮೆಣಸಿನ ಸಾರು ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಬಹಳ ಸುಲಭವಾಗಿ ಮನೆಯವರೆಲ್ಲರೂ ಇಷ್ಟಪಡುವಂತಹ ಮೆಣಸಿನ ಸಾರು ಹೇಗೆ ಮಾಡುವುದು ಎಂಬುದನ್ನು ತಿಳಿಸಿ ಕೊಡುತ್ತೇವೆ. ಈ ರೆಸಿಪಿ ಬಹಳ ಸುಲಭವಾಗಿ ಮಾಡಬಹುದಾಗಿದ್ದು ಬ್ಯಾಚುಲರ್ಸ್ ಗಳಿಗೆ ಅಥವಾ ಅಡುಗೆ ಬರೆದವರಿಗೆ ಇನ್ನು ಹೆಚ್ಚು ಸೂಕ್ತ ಎನಿಸಲಿದೆ. ಯಾಕೆಂದರೆ ಈ ರೆಸಿಪಿ ತಯಾರಿಸಲು ಹೆಚ್ಚಿನ ಪ್ರಮಾಣದಲ್ಲಿ ಶ್ರಮ ಹಾಕಬೇಕಾಗಿ ಇರುವುದಿಲ್ಲ. ನಿಮ್ಮ ಅನುಕೂಲತೆಗಾಗಿ ಯೂಟ್ಯೂಬ್ ವಿಡಿಯೋ ಕೂಡ ಹಾಕಲಾಗಿದ್ದು ಒಮ್ಮೆ ನೋಡಿ ಮನೆಯಲ್ಲಿ ಟ್ರೈ ಮಾಡಿ ಹೇಗಿದೆ ರುಚಿ ಎಂಬುದನ್ನು ತಿಳಿಸಿ.

ಮೆಣಸಿನ ಸಾರು ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ತೊಗರಿ ಬೇಳೆ, ಕಾಲು ಬಟ್ಟಲು ಕಾಳುಮೆಣಸು, ಕಾಲು ಬಟ್ಟಲು ಜೀರಿಗೆ, ಎಣ್ಣೆ, ಸ್ವಲ್ಪ ಸಾಸಿವೆ, 2 ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು, 4 ಬೆಳ್ಳುಳ್ಳಿ, 1 ಚಮಚ ಕೊಬ್ಬರಿ ತುರಿ,1 ಚಮಚ ತುಪ್ಪ, ಅರ್ಧಲೋಟ ಹುಣಸೆ ಹಣ್ಣಿನ ರಸ (ನಿಂಬೆಹಣ್ಣಿನ ಗಾತ್ರದ ಹುಣಸೆಹಣ್ಣು), ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲ.

ಮೆಣಸಿನ ಸಾರು ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರನ್ನು ತೆಗೆದುಕೊಂಡು ಅದಕ್ಕೆ 1 ಬಟ್ಟಲು ತೊಗರಿಬೇಳೆ, ಕಾಲು ಬಟ್ಟಲು ಕಾಳು ಮೆಣಸು, ಕಾಲು ಬಟ್ಟಲು ಜೀರಿಗೆಯನ್ನು ಹಾಕಿ ನುಣ್ಣಗೆ ರುಬ್ಬಿಕೊಂಡರೆ ಮೆಣಸಿನ ಸಾರು ಪುಡಿ ರೆಡಿಯಾಗುತ್ತದೆ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚ ಎಣ್ಣೆ ಮತ್ತು 1 ಚಮಚ ತುಪ್ಪವನ್ನು ಹಾಕಿ ಕಾಯಲು ಬಿಡಿ. ಕಾದ ನಂತರ ಅದಕ್ಕೆ ಸಾಸಿವೆ, ಕರಿಬೇವು, ಒಣ ಮೆಣಸಿನಕಾಯಿಯನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಜಜ್ಜಿದ ಬೆಳ್ಳುಳ್ಳಿ, ಜಜ್ಜಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಒಂದುವರೆ ಚಮಚದಷ್ಟು ಮಾಡಿಕೊಂಡಿರುವ ಪುಡಿ,1 ಚಮಚ ಕೊಬ್ಬರಿ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ 1 ಲೋಟದಷ್ಟು ನೀರು, ಅರ್ಧ ಲೋಟದಷ್ಟು ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕುದಿಯಲು ಬಿಡಿ. ನಂತರ ಇದಕ್ಕೆ ಸ್ವಲ್ಪ ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿಕೊಂಡರೆ ಮೆಣಸಿನ ಸಾರು ಸವಿಯಲು ಸಿದ್ಧ.

Post Author: Ravi Yadav