ದಿಡೀರ್ ಎಂದು 5 ನಿಮಿಷಗಳಲ್ಲಿ ಮಾಡಿ ಗೋಧಿ ದೋಸೆ ಮತ್ತು ಚಟ್ನಿ. ಹೇಗೆ ಗೊತ್ತೇ??

ದಿಡೀರ್ ಎಂದು 5 ನಿಮಿಷಗಳಲ್ಲಿ ಮಾಡಿ ಗೋಧಿ ದೋಸೆ ಮತ್ತು ಚಟ್ನಿ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು 5 ನಿಮಿಷಗಳಲ್ಲಿ ಮಾಡುವ ಗೋಧಿ ಹಿಟ್ಟಿನ ದೋಸೆ ಹಾಗೂ ಚಟ್ನಿಯ ವಿಧಾನ ನಿಮಗೆ ತಿಳಿಸಲಾಗಿದೆ. ಗೋಧಿ ಹಿಟ್ಟಿನ ದೋಸೆ ಹಾಗೂ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು: ಸ್ವಲ್ಪ ಎಣ್ಣೆ, ಕಾಲು ಚಮಚ ಜೀರಿಗೆ, 6 -7 ಬೆಳ್ಳುಳ್ಳಿ ಎಸಳು, 5 ಒಣಮೆಣಸಿನಕಾಯಿ, 3 ಟೊಮೇಟೊ, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, 1 ಬಟ್ಟಲು ಗೋಧಿ ಹಿಟ್ಟು, ಒಂದೂವರೆ ಲೋಟ ನೀರು, ಅರ್ಧ ಚಮಚ ಸಾಸಿವೆ, ಸ್ವಲ್ಪ ಕರಿಬೇವು, ಸ್ವಲ್ಪ ಸೋಡಾ.

ಮೊದಲಿಗೆ ಚಟ್ನಿ ಮಾಡುವ ವಿಧಾನ: ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2ರಿಂದ 3 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ 1 ಚಮಚ ಜೀರಿಗೆ, ಬೆಳ್ಳುಳ್ಳಿ, 4 ಒಣಮೆಣಸಿನಕಾಯಿಯನ್ನು ಹಾಕಿ 10 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಉದ್ದನೆ ಹಚ್ಚಿದ ಟೊಮೊಟೊವನ್ನು ಹಾಕಿ 3 – 4 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಅದೇ ಬಾಣಲಿಗೆ 1 – 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಸ್ವಲ್ಪ ಸಾಸಿವೆ, ಸ್ವಲ್ಪ ಕರಿಬೇವು, 1 ಒಣ ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ಕೊನೆಯದಾಗಿ ರುಬ್ಬಿದ ಮಿಶ್ರಣವನ್ನು ಹಾಕಿ 3 – 4 ನಿಮಿಷಗಳ ಕಾಲ ಫ್ರೈ ಮಾಡಿಕೊಂಡರೆ ಚಟ್ನಿ ಸವಿಯಲು ಸಿದ್ಧ.

ಗೋಧಿ ಹಿಟ್ಟಿನ ದೋಸೆ ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ 1 ಬಟ್ಟಲು ಗೋಧಿ ಹಿಟ್ಟು, ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಂದೂವರೆ ಲೋಟದಷ್ಟು ನೀರನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಸ್ವಲ್ಪ ಅಡಿಕೆ ಸೋಡಾವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.ಕೊನೆಯದಾಗಿ ಗ್ಯಾಸ್ ಮೇಲೆ ದೋಸೆ ತವಾವನ್ನು ಇಟ್ಟು ಕಾಯಲುಬಿಡಿ. ನಂತರ ಹಿಟ್ಟನ್ನು ಉಪಯೋಗಿಸಿಕೊಂಡು ದೋಸೆ ಮಾಡಿದರೆ ಗೋಧಿ ದೋಸೆ ಸವಿಯಲು ಸಿದ್ದ.