ನಾಳಿನ ತಿಂಡಿಗೆ ಅದ್ಭುತ ರುಚಿ ನೀಡುವ ಅವಲಕ್ಕಿ ಮಸಾಲ ಪಡ್ಡು ಟ್ರೈ ಮಾಡಿ ನೋಡಿ, ಎಲ್ಲರೂ ಇಷ್ಟ ಪಡುತ್ತಾರೆ.

ನಮಸ್ಕಾರ ಸ್ನೇಹಿತರೇ, ಸಾಮಾನ್ಯ ರೀತಿಯ ತಿಂಡಿಗಳನ್ನು ಮಾಡಿ ಮಾಡಿ ಬೋರ್ ಆಗಿದೆಯಾ?? ಮನೆಯಲಿ ಮಕ್ಕಳು ಮತ್ತು ಗಂಡಂದಿರು ಹೊಸ ರೀತಿಯ ರುಚಿಯಾದ ತಿಂಡಿ ಮಾಡು ಎನ್ನುತ್ತಿದ್ದಾರಾ ಹಾಗಿದ್ದರೆ ಬನ್ನಿ ಇಂದು ನಾವು ಕೆಲವೇ ಕೆಲವು ನಿಮಿಷಗಳಲ್ಲೇ ಮಾಡಬಹುದಾದ ಅವಲಕ್ಕಿ ಮಸಾಲ ಪಡ್ಡು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ನಿಮ್ಮ ಅನುಕೂಲತೆಗಾಗಿ ಯೌಟ್ಯೂಬ್ ವಿಡಿಯೋ ಕೂಡ ಹಾಕಿದ್ದು, ಒಮ್ಮೆ ನೋಡಿ ಟ್ರೈ ಮಾಡಿ ಹೇಳಿ.

ಅವಲಕ್ಕಿ ಮಸಾಲ ಪಡ್ಡು ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಅವಲಕ್ಕಿ, 2 ಬಟ್ಟಲು ಮಜ್ಜಿಗೆ, ಸ್ವಲ್ಪ ಎಣ್ಣೆ, 1 ಚಮಚ ಸಾಸಿವೆ, 1 ಚಮಚ ಕಡಲೆ ಬೇಳೆ, 2 ಈರುಳ್ಳಿ, 8 ರಿಂದ 10 ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು, 3 ರಿಂದ 4 ಹಸಿಮೆಣಸಿನಕಾಯಿ, ಸ್ವಲ್ಪ ಅರಿಶಿನ ಪುಡಿ, 1 ಬಟ್ಟಲು ರವೆ, ರುಚಿಗೆ ತಕ್ಕಷ್ಟು ಉಪ್ಪು.

ಅವಲಕ್ಕಿ ಮಸಾಲ ಪಡ್ಡು ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಅವಲಕ್ಕಿಯನ್ನು ಹಾಕಿ 2 – 3 ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಅವಲಕ್ಕಿ ನೆನೆಯುವಷ್ಟು ಮಜ್ಜಿಗೆಯನ್ನು ಹಾಕಿ ಹತ್ತು ನಿಮಿಷಗಳ ಕಾಲ ನೆನೆಯಲು ಬಿಡಿ. ತದನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 1 ಚಮಚ ಸಾಸಿವೆ, 1 ಚಮಚ ಕಡಲೆಬೇಳೆಯನ್ನು ಹಾಕಿ ಕೆಂಪಗಾಗುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಕರಿಬೇವು, ಸಣ್ಣಗೆ ಹಚ್ಚಿದ ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿಯನ್ನು ಹಾಕಿ ಈರುಳ್ಳಿ ಮೆತ್ತಗಾಗುವವರೆಗೆ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ.ನಂತರ ನೆನೆದ ಅವಲಕ್ಕಿಯನ್ನು ಕೈಯನ್ನು ಉಪಯೋಗಿಸಿಕೊಂಡು ಸ್ವಲ್ಪ ನುಣ್ಣಗೆ ಮಾಡಿಕೊಳ್ಳಿ. ನಂತರ ಇದಕ್ಕೆ 1 ಬಟ್ಟಲು ರವೆ, ಒಗ್ಗರಣೆ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು, 1ಬಟ್ಟಲು ಮಜ್ಜಿಗೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಪಡ್ಡು ಹಿಟ್ಟಿನ ಹದಕ್ಕೆ ಬೇಕಾಗುವಷ್ಟು ನೀರನ್ನು ಹಾಕಿ ಮಿಕ್ಸ್ ಮಾಡಿ ಹತ್ತು ನಿಮಿಷಗಳ ಕಾಲ ನೆನೆಯಲು ಬಿಡಿ. ಕೊನೆಯದಾಗಿ ಗ್ಯಾಸ್ ಮೇಲೆ ಪಡ್ಡು ಹೆಂಚನ್ನು ಹಿಟ್ಟು ಎಣ್ಣೆಯನ್ನು ಸವರಿ ಕಾಯಲು ಬಿಡಿ, ಕಾದ ನಂತರ ಹಿಟ್ಟನ್ನು ಹಾಕಿ ಎರಡು ಬದಿಯಲ್ಲಿ ಬೇಯಿಸಿಕೊಂಡರೇ ಅವಲಕ್ಕಿ ಮಸಾಲ ಪಡ್ಡು ಸವಿಯಲು ಸಿದ್ಧ.