ಸಾಮಾನ್ಯ ಉಪ್ಪಿಟ್ಟು ಸಾಕಾಗಿದೆಯೇ?? ಈರುಳ್ಳಿ ಇಲ್ಲದೇ ಈ ಟೊಮೇಟೊ ಮಸಾಲಾ ಉಪ್ಪಿಟ್ಟು ಟ್ರೈ ಮಾಡಿ, ಪ್ಲೇಟ್ ಖಾಲಿ ಮಾಡುತ್ತಾರೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಈರುಳ್ಳಿಯನ್ನು ಬಳಸದೆ ಮಾಡಬಹುದಾದ ಟೊಮೇಟೊ ಮಸಾಲಾ ಉಪ್ಪಿಟ್ಟು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಯೌಟ್ಯೂಬ್ ವಿಡಿಯೋ ಕೂಡ ಇದ್ದು, ಒಮ್ಮೆ ನೋಡಿ, ಟ್ರೈ ಮಾಡಿ ರುಚಿ ಹೇಗಿದೆ ಎಂದು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಮಸಾಲಾ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಉಪ್ಪಿಟ್ಟು ರವೆ, ಸ್ವಲ್ಪ ಎಣ್ಣೆ, 1 ಚಮಚ ಸಾಸಿವೆ, 1 ಚಮಚ ಕಡಲೆ ಬೇಳೆ,1 ಚಮಚ ಉದ್ದಿನಬೇಳೆ, 8 – 10 ಗೋಡಂಬಿ, ಖಾರಕ್ಕೆ ಬೇಕಾಗುವಷ್ಟು ಹಸಿಮೆಣಸಿನಕಾಯಿ,8-10 ಕರಿಬೇವು,1 ಟೊಮೇಟೊ, ಅರ್ಧ ಚಮಚ ಅಚ್ಚ ಖಾರದ ಪುಡಿ, ಅರ್ಧ ಚಮಚ ಅರಿಶಿಣ ಪುಡಿ, ಅರ್ಧ ಚಮಚದಷ್ಟು ಗರಂ ಮಸಾಲ, ಮೂರುವರೆ ಬಟ್ಟಲಿನಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ನಿಂಬೆಹಣ್ಣು, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಚಮಚ ತುಪ್ಪ, ಸ್ವಲ್ಪ ತೆಂಗಿನ ತುರಿ.

ಮಸಾಲಾ ಉಪ್ಪಿಟ್ಟು ಮಾಡುವ ವಿಧಾನ: ಮೊದಲಿಗೆ ಒಂದು ಬಾಂಡಲೆಯಲ್ಲಿ ಇಟ್ಟುಕೊಂಡು ಅದಕ್ಕೆ 1 ಬಟ್ಟಲಿನಷ್ಟು ರವೆ, 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಡಿಮೆ ಉರಿಯಲ್ಲಿ ಐದು ನಿಮಿಷಗಳ ಕಾಲ ರವೆಯನ್ನು ಚೆನ್ನಾಗಿ ಹುರಿದುಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಮತ್ತೊಮ್ಮೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 – 3 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ 1 ಚಮಚದಷ್ಟು ಸಾಸಿವೆಯನ್ನು ಹಾಕಿ ಸಾಸಿವೆ ಸಿಡಿಯುವವರೆಗೂ ಬಿಡಿ. ನಂತರ ಇದಕ್ಕೆ 1 ಚಮಚದಷ್ಟು ಕಡಲೆಬೇಳೆ, 1 ಚಮಚದಷ್ಟು ಉದ್ದಿನ ಬೇಳೆಯನ್ನು ಹಾಕಿ ಸ್ವಲ್ಪ ಬಣ್ಣ ತಿರುಗುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ತೆಗೆದುಕೊಂಡ ಗೋಡಂಬಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಖಾರಕ್ಕೆ ಬೇಕಾಗುವಷ್ಟು ಹಚ್ಚಿದ ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು ಸಣ್ಣಗೆ ಹಚ್ಚಿದ ಟೊಮೇಟೊವನ್ನು ಹಾಕಿ ಟೊಮೇಟೊ ಮೆತ್ತಗಾಗುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚ ಅಚ್ಚಖಾರದ ಪುಡಿ, ಅರ್ಧ ಚಮಚ ಅರಿಶಿಣ ಪುಡಿ, ಅರ್ಧ ಚಮಚದಷ್ಟು ಗರಂ ಮಸಾಲವನ್ನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಮೂರುವರೆ ಬಟ್ಟಲಿನಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ.ತದನಂತರ ಇದಕ್ಕೆ ಸ್ವಲ್ಪ ಸ್ವಲ್ಪವೇ ರವೆಯನ್ನು ಹಾಕಿ ಮಿಕ್ಸ್ ಮಾಡಿಕೊಂಡು 2 – 3 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ. ಕೊನೆಯದಾಗಿ ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸ, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಚಮಚದಷ್ಟು ತುಪ್ಪ, ಸ್ವಲ್ಪ ತೆಂಗಿನತುರಿ ಹಾಕಿ ಮಿಕ್ಸ್ ಮಾಡಿದರೆ ಈರುಳ್ಳಿಯನ್ನು ಬಳಸದೆ ಮಾಡಿರುವ ಮಸಾಲಾ ಉಪ್ಪಿಟ್ಟು ಸವಿಯಲು ಸಿದ್ಧ.

Post Author: Ravi Yadav