ರಾತ್ರಿ ಉಳಿದ ಅನ್ನದಿಂದ ದಿಡೀರ್ ಅಂತ ಮಾಡಿ ಮೆತ್ತನೆಯ ಇಡ್ಲಿ. ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಹುತೇಕರ ಮನೆಯಲ್ಲಿ ಸರಿಯಾಗಿ ಅಳತೆಯೇ ಇಟ್ಟು ಅನ್ನ ಮಾಡುವುದು ಕಷ್ಟವೇ ಸರಿ, ಇದೊಂದೇ ಕಾರಣವಲ್ಲ ಕೆಲವೊಮ್ಮೆ ಮನೆಯಲ್ಲಿ ಅಡುಗೆ ಮಾಡಿದ ನಂತರ ಹೊರಗಿನ ತಿಂಡಿ ತಿನ್ನುವುದು, ಅಥವಾ ಮೊದಲೇ ಯೋಚಿಸಿ ದಂತಹ ಕೆಲಸಗಳಿಂದ ರಾತ್ರಿಯ ಸಮಯ ಬಹುತೇಕ ಬಾರಿ ಅನ್ನ ಉಳಿದುಬಿಡುತ್ತದೆ. ಅನ್ನವನ್ನು ವ್ಯರ್ಥ ಮಾಡಬಾರದು ಎಂಬ ಉದ್ದೇಶದಿಂದ ಸಾಕಷ್ಟು ಕುಟುಂಬಗಳು ಬೆಳಗ್ಗೆ ರಾತ್ರಿಯ ಅನ್ನಕ್ಕೆ ವಿವಿಧ ರೀತಿಯ ರೆಸಿಪಿಗಳನ್ನು ಹುಡುಕಿಕೊಂಡು ಮಾಡುತ್ತಾರೆ. ಸಾಮಾನ್ಯವಾಗಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ಪೋಷಕರು ಮಾತ್ರ ರಾತ್ರಿ ಉಳಿದ ಅನ್ನವನ್ನು ತಿನ್ನುತ್ತಾರೆ, ಇಂದಿನ ಯುವ ಜನಾಂಗ ರಾತ್ರಿಯ ಅನ್ನ ಎಂದ ತಕ್ಷಣ ನಮಗೆ ಬೇಡ ಎನ್ನುವುದೇ ಹೆಚ್ಚು.

ಈ ರೀತಿಯ ಪರಿಸ್ಥಿತಿ ನಮ್ಮ-ನಿಮ್ಮೆಲ್ಲರ ಮನೆಯಲ್ಲೂ ಹಲವಾರು ಬಾರಿ ಎದುರಾಗಿರುತ್ತದೆ, ಯಾವುದೋ ಒಂದು ಕಾರಣದಿಂದ ಅನ್ನ ಉಳಿದು ಬಿಡುತ್ತದೆ. ಹಾಗೆ ಉಳಿದ ಅನ್ನವನ್ನು ತಿನ್ನುವುದು ಕೆಲವರಿಗೆ ಕೊಂಚ ಕಷ್ಟವೆನಿಸುತ್ತದೆ. ಬನ್ನಿ ಹಾಗಿದ್ದರೆ ರಾತ್ರಿ ಉಳಿದ ಅನ್ನದಿಂದ ನಾವು ಯಾವ ರೀತಿ ಮೆತ್ತನೆಯ ಇಡ್ಲಿ ಮಾಡಬಹುದು ಎಂಬುದನ್ನು ತಿಳಿಸಿ ಕೊಡುತ್ತೇವೆ. ಖಂಡಿತ ಈ ರೆಸಿಪಿ ಎಲ್ಲರಿಗೂ ಇಷ್ಟವಾಗಲಿದೆ, ರಾತ್ರಿ ಉಳಿದ ಅನ್ನವನ್ನು ವ್ಯರ್ಥವಾಗುವುದು ಮತ್ತಷ್ಟು ಕಡಿಮೆಯಾಗಲಿದೆ. ವಿಡಿಯೋ ಕೂಡ ಲಗತ್ತಿಸಲಾಗಿದ್ದು, ಒಮ್ಮೆ ಸಂಪೂರ್ಣ ವಾಗಿ ನೋಡಿ.

ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಉಳಿದ ಅನ್ನ,1 ಬಟ್ಟಲು ರವೆ, 1 ಬಟ್ಟಲು ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಸೋಡಾ, ಎಣ್ಣೆ.

ಇಡ್ಲಿ ಮಾಡುವ ವಿಧಾನ: ಮೊದಲು ಒಂದು ಮಿಕ್ಸಿ ಜಾರಿಗೆ ಅನ್ನವನ್ನು ಹಾಕಿ (ನೀರು ಬೇಕಾದರೆ ಮಾತ್ರ ಹಾಕಿಕೊಳ್ಳಿ) ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ 1 ಬಟ್ಟಲು ರವೆ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡುಗೆ ಸೋಡಾ, 1 ಬಟ್ಟಲು ಮೊಸರನ್ನು ಹಾಕಿ ಗಂಟು ಗಳಿಲ್ಲದೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೂ ಸಹ ಬೇಕಾದರೆ ನೀರನ್ನು ಹಾಕಿಕೊಳ್ಳಿ. ನಂತರ 10 – 15 ನಿಮಿಷಗಳ ಕಾಲ ನೆನೆಯಲು ಪಕ್ಕಕ್ಕಿಡಿ. 15 ನಿಮಿಷಗಳ ನಂತರ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿದರೆ ಇಡ್ಲಿ ಹಿಟ್ಟು ರೆಡಿಯಾಗುತ್ತದೆ. ನಂತರ ಇಡ್ಲಿ ಪಾತ್ರೆಯನ್ನು ತೆಗೆದುಕೊಂಡು ಇಡ್ಲಿ ಪ್ಲೇಟಿಗೆ ಎಣ್ಣೆಯನ್ನು ಹಚ್ಚಿ ಹಿಟ್ಟನ್ನು ಹಾಕಿ ಬೇಯಿಸಿಕೊಂಡರೆ, ಬಿಸಿಬಿಸಿಯಾದ ಅನ್ನದಿಂದ ಮಾಡಿದ ಇಡ್ಲಿ ಸವಿಯಲು ಸಿದ್ಧ.

Post Author: Ravi Yadav