ನಿಮ್ಮ ಬೈಕ್ ಹೆಚ್ಚು ಮೈಲೇಜ್ ನೀಡಬೇಕು ಎಂದರೇ ಹೀಗೆ ಮಾಡಿ ! ನೀವರಿಯದ ಮಾಹಿತಿ

ನಿಮ್ಮ ಬೈಕ್ ಹೆಚ್ಚು ಮೈಲೇಜ್ ನೀಡಬೇಕು ಎಂದರೇ ಹೀಗೆ ಮಾಡಿ ! ನೀವರಿಯದ ಮಾಹಿತಿ

ನಮಸ್ಕಾರ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಹಳ್ಳಿಗಿಂತ ಹಿಡಿದು ಡೆಲ್ಲಿಯವರೆಗೂ ಬಹುತೇಕರ ಮನೆಯಲ್ಲಿ ದ್ವಿಚಕ್ರ ವಾಹನ ಇದ್ದೇ ಇರುತ್ತದೆ. ಸರ್ವೇ ಸಾಮಾನ್ಯವಾಗಿ ಎಲ್ಲರೂ ತಮ್ಮ ದಿನನಿತ್ಯದ ಜೀವನದಲ್ಲಿ ದ್ವಿಚಕ್ರ ವಾಹನ ಬಳಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ದ್ವಿಚಕ್ರ ವಾಹನ ಹಾಗೂ ಕಾರುಗಳ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗಿದ್ದರೂ ಕೂಡ ಮಧ್ಯಮ ವರ್ಗದ ಜನರು ಖರೀದಿಸುವಷ್ಟು ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಲಭ್ಯವಾಗುತ್ತಿಲ್ಲ. ಇನ್ನು ನಾವು ಪ್ರತಿನಿತ್ಯ ಬಳಸುವ ದ್ವಿಚಕ್ರ ವಾಹನಗಳ ಮೈಲೇಜ್ ಒಂದು ಮಧ್ಯಮ ವರ್ಗದ ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ, ಪೆಟ್ರೋಲ್ ಬೆಲೆ ಒಂದು ಅಥವಾ ಎರಡು ರೂಪಾಯಿ ಹೆಚ್ಚಾದರೂ ಕೂಡ ಮಧ್ಯಮ ವರ್ಗದ ಸಾವಿರಾರು ಜನರು ನಾಳೆಯಿಂದ ಹೆಚ್ಚಾಗುತ್ತದೆ ಎಂದರೇ ಹಿಂದಿನ ರಾತ್ರಿ ಪೆಟ್ರೋಲ್ ಬಂಕಿನ ಬಳಿ ಸಾಲಿನಲ್ಲಿ ನಿಂತು ಪೆಟ್ರೋಲ್ ಹಾಕಿಸಿಕೊಳ್ಳುತ್ತಾರೆ.

ಇಷ್ಟೆಲ್ಲಾ ಯೋಜನೆಗಳನ್ನು ರೂಪಿಸಿ ಪ್ರತಿಯೊಂದು ರೂಪಾಯಿಯನ್ನು ಲೆಕ್ಕವಿಟ್ಟು ಖರ್ಚು ಮಾಡುವ ಮಧ್ಯಮ ವರ್ಗದ ಕುಟುಂಬಗಳು ಮೈಲೇಜ್ ಬಗ್ಗೆ ಮಾತ್ರ ತಿಳಿದುಕೊಂಡಿರುವುದಿಲ್ಲ. ಯಾಕೆಂದರೆ ಇಂದಿಗೂ ಕೂಡ ಒಂದು ಬಗ್ಗೆ ಯಾವ ರೀತಿ ನಿರ್ವಹಣೆ ಮಾಡಿದರೇ ಹೆಚ್ಚು ಮೈಲೇಜ್ ನೀಡುತ್ತದೆ ಎಂಬುದನ್ನು ಯಾವುದೇ ಕಂಪನಿಗಳು ತಿಳಿಸುವುದಿಲ್ಲ, ಸುಮ್ಮನೆ ಅಷ್ಟು ಮೈಲೇಜ್ ಕೊಡುತ್ತದೆ ಇಷ್ಟು ಕೊಡುತ್ತದೆ ಎಂದು ಹೇಳಿ ಮಧ್ಯಮ ವರ್ಗಕ್ಕೆ ಬೈಕುಗಳನ್ನು ಮಾರುತ್ತಾರೆ. ಇದರ ಕುರಿತು ನಮ್ಮ ಓದುಗರೊಬ್ಬರು ನಾವು ಇನ್ನೊಂದು ಬೈಕಿನ ಬಗ್ಗೆ ಬರೆದಾಗ ಮೈಲೇಜ್ ಬಗ್ಗೆ ತಿಳಿಸುವಂತೆ ಕೇಳಿದ್ದರು. ಅದೇ ಕಾರಣಕ್ಕಾಗಿ ಇಂದು ನಾವು ಒಂದು ಬೈಕ್ ಯಾವ ರೀತಿಯ ನಿರ್ವಹಣೆ ಮಾಡಿದರೇ ಹೆಚ್ಚು ಮೈಲೇಜ್ ನೀಡುತ್ತದೆ ಎಂಬುದರ ಕುರಿತು ನಿಮಗೆ ಮಾಹಿತಿ ನೀಡುತ್ತೇವೆ.

ಮೊದಲಿಗೆ ಸ್ನೇಹಿತರೇ ಯಾವುದಾದರೂ ಒಂದು ಬೈಕ್ ಉತ್ತಮ ಮೈಲೇಜ್ ನೀಡಬೇಕು ಎಂದರೇ ಹಲವಾರು ಅಂಶಗಳು ಅವಲಂಬಿತವಾಗಿರುತ್ತವೆ. ಮೊದಲನೆಯದಾಗಿ ಇಂಜಿನ ತಾಪಮಾನ, ಹೌದು ಸ್ನೇಹಿತರೇ ಸಾಮಾನ್ಯವಾಗಿ ನೀವು ರಾತ್ರಿ ಬೈಕು ನಿಲ್ಲಿಸಿ ಬೆಳಗ್ಗೆ ಎದ್ದು ಬೈಕ್ ತೆಗೆಯುವಾಗ ಇಂಜಿನ್ ತಾಪಮಾನ ಬಹಳ ಕಡಿಮೆ ಇರುತ್ತದೆ. ಕೆಲವೊಮ್ಮೆ ಬೈಕ್ ಸ್ಟಾರ್ಟ್ ಕೂಡ ಆಗುವುದಿಲ್ಲ. ನೀವು ಹೇಗೂ ಸ್ಟಾರ್ಟ್ ಮಾಡುತ್ತೀರಾ ಎಂದುಕೊಳ್ಳಿ, ಆಗ ಎಲ್ಲರೂ ಸಾಮಾನ್ಯವಾಗಿ ಇಂಜಿನ್ ತಾಪಮಾನ ಕಡಿಮೆ ಇದೆ ಬೈಕ್ ಆಫ್ ಆಗಬಹುದು ಎಂಬ ಆಲೋಚನೆಯಿಂದ ಕೂಡಲೇ ಬಹಳ ವೇಗವಾಗಿ ಬೈಕ್ ಓಡಿಸಲು ಆರಂಭಿಸುತ್ತಾರೆ. ಆದರೆ ಈ ರೀತಿ ಮಾಡುವುದು ನಿಮ್ಮ ಬೈಕಿನ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ. ನೀವು ಬೆಳಗ್ಗೆ ಕನಿಷ್ಠ ಮೂರರಿಂದ ನಾಲ್ಕು ಕಿಲೋಮೀಟರ್ ಗಳಷ್ಟು ದೂರ ಬಹಳ ಕಡಿಮೆ ವೇಗದಲ್ಲಿ ಚಲಿಸಬೇಕು. ಇದರಿಂದ ಕ್ರಮೇಣ ನಿಮ್ಮ ಇಂಜಿನ್ ತಾಪಮಾನ ಹೆಚ್ಚಾಗುತ್ತದೆ, ಒಮ್ಮೆಲೆ ಇಂಜಿನ್ ತಾಪಮಾನ ಹೆಚ್ಚಿಸಲು ಪ್ರಯತ್ನಪಟ್ಟರೆ ಹೆಚ್ಚು ಇಂಧನ ಖರ್ಚಾಗುತ್ತದೆ.

ಇನ್ನು ಎರಡನೆಯದಾಗಿ ಸಮತಟ್ಟಾದ ಪ್ರದೇಶ ಇರುವ ಸಂದರ್ಭದಲ್ಲಿ ನಿಮ್ಮ ವೇಗದ ಮೇಲೆ ಮೈಲೇಜ್ ಅಷ್ಟಾಗಿ ಅವಲಂಬಿತವಾಗಿರುವುದಿಲ್ಲ, ಆದರೆ ಹೆಚ್ಚು ತಗ್ಗು, ಹಳ್ಳ ಇರುವ ಪ್ರದೇಶದಲ್ಲಿ ನೀವು ವೇಗವಾಗಿ ಹೋಗಲು ಪ್ರಯತ್ನಪಟ್ಟರೇ ಇದರಿಂದ ನೀವು ಹಲವಾರು ಬಾರಿ ಗೇರುಗಳನ್ನು ಬದಲಾಯಿಸ ಬೇಕಾಗಬಹುದು, ಅಷ್ಟೇ ಅಲ್ಲದೇ ಪದೇ ಪದೇ ಬ್ರೇಕ್ ಹಾಕಬೇಕಾಗುತ್ತದೆ. ಇದರಿಂದ ನಿಮ್ಮ ಬೈಕಿನ ಮೈಲೇಜ್ ಮೇಲೆ ನೇರ ಪರಿಣಾಮ ಬೀರುತ್ತದೆ. ಇನ್ನು ವೇಗದ ಕುರಿತು ಮಾತನಾಡುವುದಾದರೆ ನಿಮ್ಮ ಬೈಕಿನ ದಕ್ಷತೆಗೆ ತಕ್ಕಂತೆ ನೀವು ವೇಗವನ್ನು ನಿಯಂತ್ರಿಸಿ ಕೊಂಡರೆ ಖಂಡಿತ ನಿಮಗೆ ಹೆಚ್ಚು ಪ್ರಮಾಣದಲ್ಲಿ ಇಂಧನ ಉಳಿಯುತ್ತದೆ.

ಇನ್ನು ಪ್ರಮುಖವಾಗಿ ನಿಮ್ಮ ಬೈಕಿನ ಇಂಜಿನ್ ಆರೋಗ್ಯ ಕೂಡ ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಬೈಕಿನ ಅಂದ-ಚಂದದ ಕುರಿತು ಗಮನ ಹರಿಸುತ್ತಾರೆ, ಆದರೆ ಇಂಜಿನ್ ಕುರಿತು ಹೆಚ್ಚಾಗಿ ಗಮನ ಹರಿಸುವುದಿಲ್ಲ. ನೀವು ಒಂದು ವೇಳೆ ನಿಮ್ಮ ಬೈಕಿನ ಮೈಲೇಜ್ ಹೆಚ್ಚು ಮಾಡಬೇಕು ಎಂದರೇ ಸರಿಯಾದ ಸಮಯದಲ್ಲಿ ಸರ್ವಿಸ್ ಮಾಡಿಸಿ. ಅಷ್ಟೇ ಅಲ್ಲದೆ ನೀವು ಪೆಟ್ರೋಲ್ ಹಾಕಿಸುವ ಸಂದರ್ಭದಲ್ಲಿ ಅಂಗಡಿಗಳಲ್ಲಿ ಮಾರಾಟ ಮಾಡುವ ಬಾಟಲ್ ಗಳಲ್ಲಿ ಪೆಟ್ರೋಲ್ ಹಾಕಿಸುವುದನ್ನು ಬಿಡಿ ಬದಲಾಗಿ ನಿಮ್ಮ ಸುತ್ತಮುತ್ತಲಿನ ನಂಬಿಕಸ್ಥ ಪೆಟ್ರೋಲ್ ಬಂಕ್ ಗಳಿಗೆ ತರಲಿ ಪೆಟ್ರೋಲ್ ಹಾಕಿಸಿ. ಈ ಎಲ್ಲಾ ಅಂಶಗಳು ಬೈಕಿನ ಮೈಲೇಜ್ ಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಧನ್ಯವಾದಗಳು.